Advertisement

Udupi: ಉಡುಪಿಯಲ್ಲಿ ಕೃಷ್ಣಾರ್ಘ್ಯ ಪ್ರದಾನ, ಇಂದು ಶ್ರೀಕೃಷ್ಣ ಲೀಲೋತ್ಸವ

02:24 AM Sep 07, 2023 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದವು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ದೇವರ ದರ್ಶನ ಪಡೆದು, ಶ್ರೀಕೃಷ್ಣ ಮಠದೊಳಗಿನ ಬಗೆಬಗೆಯ ಹೂವಿನ ಅಲಂಕಾರವನ್ನು ವೀಕ್ಷಿಸಿದರು.

Advertisement

ಪರ್ಯಾಯ ಶ್ರೀಪಾದರು ಏಕಾದಶಿಯಂತೆ ನಿರ್ಜಲ ಉಪವಾಸದಲ್ಲಿದ್ದು ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ, ತುಳಸಿ ಅರ್ಚನೆ ನಡೆಸಿದರು. ಶ್ರೀಪಾದರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಪಾಲ್ಗೊಂಡರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಯಾಕ್ಸೋಫೋನ್‌, ನಾಗಸ್ವರ ವಾದನ, ನೃತ್ಯೋತ್ಸವ, ಹುಲಿವೇಷ ಕುಣಿತ ನಡೆಯಿತು. ರಾತ್ರಿ ನೈವೇದ್ಯಗಳನ್ನು ಸಮರ್ಪಿಸಿ  ಮಹಾಪೂಜೆ ನಡೆಸಿದ ಸ್ವಾಮೀಜಿಯವರು ಬಳಿಕ ಚಂದ್ರೋದಯದ ವೇಳೆ 11.42 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು.

ಮುದ್ದುಕೃಷ್ಣರ ನಂದಗೋಕುಲ

ಶ್ರೀಕೃಷ್ಣ ಮಠದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ ಕಣ್‌ಮನ ಸೇಳೆಯಿತು. 360ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಮುದ್ದುಕೃಷ್ಣನ ಕಲವರದಿಂದ ನಂದಗೋಕುಲವೇ ಸೃಷ್ಟಿಯಾಗಿತ್ತು. ರಥಬೀದಿ, ನಗರದ ಹಲವೆಡೆ ಕೃಷ್ಣ ವೇಷ, ಪೇಪರ್‌ ವೇಷ, ರಕ್ಕಸ ವೇಷ, ಹುಲಿವೇಷಧಾರಿಗಳು ಎಲ್ಲರ ಗಮನ ಸೆಳೆದರು.

Advertisement

ಗೋವಳರ ಸಂಭ್ರಮ
ಶ್ರೀಕೃಷ್ಣ ಲೀಲೋತ್ಸವದಂದು 9 ಮಂದಿ ಗೋವಳರು (ಗೊಲ್ಲರು) ಬಿಳಿಕಚ್ಚೆ, ನೀಲಿ ಬನಿಯನ್‌, ಸೊಂಟಕ್ಕೆ ಬೈಹುಲ್ಲಿನ ಪಟ್ಟಿ ಮೊದಲಾದ ಸಾಂಪ್ರದಾಯಿಕ ದಿರಿಸನ್ನು ಧರಿಸಿ ತಲೆಗೆ ಬೈಹುಲ್ಲು ಟೋಪಿ, ಕೈಯಲ್ಲಿ ಬಿದಿರಿನ ಕೊಲು ಹಿಡಿದು ಬಾಯಿ ಬಡಿದುಕೊಳ್ಳುತ್ತಾ, ಕೇಕೆ ಹಾಕುತ್ತಾ ಮೊಸರು, ಅರಶಿನ ಕುಂಕುಮ ಹಾಗೂ ಅರಳು ಹುಡಿ ತುಂಬಿದ ಕುಡಿಕೆಗಳನ್ನು ಒಡೆದು ಸಂಭ್ರಮಿಸುತ್ತಾರೆ. ಶ್ರೀ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ದೇವಳದ ವತಿಯಿಂದ 6 ಗುರ್ಜಿ ಹಾಗೂ ಶ್ರೀ ಕೃಷ್ಣಮಠದಿಂದ 7 ಗುರ್ಜಿ ಅಳವಡಿಸಲಾಗಿದೆ.

ವಿಶೇಷ ಭದ್ರತೆ
ಶ್ರೀಕೃಷ್ಣ ಮಠದಲ್ಲಿ ಗುರುವಾರ ವಿಟ್ಲಪಿಂಡಿ ಮಹೋತ್ಸವ ನಡೆಯಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ 350 ಪೊಲೀಸರನ್ನು ನಿಯೋಜಿಸಲಾಗಿದೆ. ಒಂದು ಕೆಎಸ್‌ಆರ್‌ಪಿ, 4 ಡಿಆರ್‌ ತುಕಡಿ, 9 ಕಡೆ ವಿಡಿಯೋ ಕ್ಯಾಮರ ಅಳವಡಿಸಲಾಗಿದೆ. ಮಠದ 8 ಗೇಟ್‌ಗಳಲ್ಲಿ ಸಶಸ್ತ್ರ ಭದ್ರತೆ ಒದಗಿಸಲಾಗಿದೆ. ಶ್ವಾನದಳ, ಬಾಂಬ್‌ ಸ್ಕ್ವಾಡ್‌ ತಪಾಸಣೆ, ಭಕ್ತರ ಸಂಖ್ಯೆ ಗಮನಿಸಿ ಡ್ರೋನ್‌ ಬಳಸುವ ಬಗ್ಗೆ ಇಲಾಖೆ ನಿರ್ಧರಿಸಲಿದೆ. ಸುಗಮ ಸಂಚಾರಕ್ಕೆ ಸಮಸ್ಯೆಯಾಗದಂತೆ ನಿರ್ದಿಷ್ಟ ಪಾರ್ಕಿಂಗ್‌ ಪ್ರದೇಶಗಳಲ್ಲಿಯೇ ವಾಹನ ನಿಲುಗಡೆ ಮಾಡಲು ಪೊಲೀಸರು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಬುಧವಾರ ಸಂಜೆ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಭದ್ರತೆಯನ್ನು ಪರಿಶೀಲಿಸಿದರು.

ಶ್ರೀಕೃಷ್ಣನ ಮೃಣ್ಮಯ ಮೂರ್ತಿ
ವಿಟ್ಲಪಿಂಡಿ ಉತ್ಸವದಲ್ಲಿ ಆವೆಮಣ್ಣಿನ ಕೃಷ್ಣ ವಿಗ್ರಹ ಪೂಜೆಗೊಳ್ಳಲಿದೆ. ಸುಮಾರು 9 ಇಂಚು ಎತ್ತರದ ಮೂರ್ತಿಯನ್ನು ಚಿಟಾ³ಡಿ ಯು.ಕೆ. ಸೋಮನಾಥರು ತಯಾರಿ, ಶ್ರೀಕೃಷ್ಣ ಮಠಕ್ಕೆ ಒಪ್ಪಿಸಿದ್ದಾರೆ. ರಾಸಾಯನಿಕರಹಿತ ಕಪ್ಪು ಬಣ್ಣವನ್ನು ಕೊಡಲಾಗಿದೆ. ಈಗ ಚಾತು ರ್ಮಾಸ್ಯ ವ್ರತದ ಕಾಲವಾದ ಕಾರಣ ಉತ್ಸವಗಳು ನಡೆಯುವುದಿಲ್ಲ, ಹೀಗಾಗಿ ಉತ್ಸವಮೂರ್ತಿಯನ್ನು ಗರ್ಭಗುಡಿಯಿಂದ ಹೊರಗೆ ತರುವುದಿಲ್ಲ. ಗುರುವಾರ ಪೂಜೆ ಸಲ್ಲಿಸಿ ಉತ್ಸವದ ಬಳಿಕ ಮೃಣ್ಮಯಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸಲಾ ಗುತ್ತದೆ. ಅನಂತೇಶ್ವರ ಮತ್ತು ಚಂದ್ರ ಮೌಳೀ ಶ್ವರ ದೇವ ಸ್ಥಾ ನದ ಉತ್ಸವ  ಮೂ ರ್ತಿ ಗ ಳಿಗೂ ಉತ್ಸ ವ ದಲ್ಲಿ ಪೂಜೆ ನಡೆ ಯ ಲಿದೆ. ಜೇಡಿ ಮಣ್ಣಿನಿಂದ ನಿರ್ಮಿಸಿದ ಮೃಣ್ಮಯ ಮೂರ್ತಿಗೆ ಚಿನ್ನದ ಬಣ್ಣದ ಆಭರಣ, ಹಾರ, ತೋಳಬಂದಿ, ಸೊಂಟಪಟ್ಟಿಯನ್ನು ತೊಡಿಸಲಾಗಿದೆ. ಗುರುವಾರ ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವಕ್ಕೂ ಮೊದಲು ಶ್ರೀಕೃಷ್ಣನ ಸನ್ನಿಧಿಯಲ್ಲಿ ಮೃಣ್ಮಯ ಮೂರ್ತಿಗೆ ಪೂಜೆ, ಅನಂತರ ಪಲ್ಲಕ್ಕಿಯಲ್ಲಿಟ್ಟು ಹೊರತಂದು ಸ್ವರ್ಣರಥದಲ್ಲಿ ಕೂರಿಸಿಪೂಜೆ ಸಲ್ಲಿಸಿ ಉತ್ಸವ ನೆರವೇರಿಸಲಾಗುತ್ತದೆ.

ಇಂದು ವಿಟ್ಲಪಿಂಡಿ ಉತ್ಸವ
ಶ್ರೀಕೃಷ್ಣ ಮಠದಲ್ಲಿ ಗುರುವಾರ ಸಂಭ್ರಮದ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಅಪರಾಹ್ನ 3ಕ್ಕೆ ಉತ್ಸವ ಆರಂಭವಾಗಿ ಅನಂತರ ಮಧ್ವ ಸರೋವರದಲ್ಲಿ ತೀರ್ಥಸ್ನಾನ ಮಾಡುವ ಮೂಲಕ ಸಂಪನ್ನಗೊಳ್ಳಲಿದೆ. ಮೆರವಣಿಗೆ, ಸಾಂಸ್ಕೃತಿಕ, ಹುಲಿ ವೇಷಗಳ ಪ್ರದರ್ಶನ ಸಹಿತ ಜಾನಪದ ವೇಷಧಾರಿಗಳ ತಂಡಗಳು ಗಮನ ಸೆಳೆಯಲಿವೆ. ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next