ಬೆಂಗಳೂರು: ಭೂಸ್ವಾಧೀನದಲ್ಲಿ ಮಧ್ಯವರ್ತಿಯಾಗಿ ರೈತರನ್ನು ವಂಚಿಸಿದ್ದ ಆರೋಪದ ಪ್ರಕರಣದಲ್ಲಿ ವಸತಿ ಸಚಿವ ಎಂ. ಕೃಷ್ಣಪ್ಪ ಅವರ ಯಾವುದೇ ಪಾತ್ರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ವರದಿ ನೀಡಿದ್ದಾರೆ.
ಪ್ರಕರಣ ಸಂಬಂಧ ರಾಜ್ಯ ಅಡ್ವೋಕೇಟ್ ಜನರಲ್ ಅವರು “ಪ್ರಕರಣದಲ್ಲಿ ಸಚಿವ ಎಂ. ಕೃಷ್ಣಪ್ಪ ಅವರದ್ದು ಯಾವುದೇ ಪಾತ್ರವಿಲ್ಲ’ ಎಂದು ಅಭಿಪ್ರಾಯ ನೀಡಿದ್ದು, ಅವರ ಅಭಿಪ್ರಾಯದ ಜತೆಗೆ ಸಿಎಂ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯ 1989ರಲ್ಲಿ ವಾಜರಹಳ್ಳಿ, ರಘುವನಹಳ್ಳಿಯಲ್ಲಿ ನಡೆದ ಭೂಸ್ವಾಧೀನ ಪ್ರಕರಣದಲ್ಲಿ ಎಂ. ಕೃಷ್ಣಪ್ಪ ಮಧ್ಯವರ್ತಿಯಾಗಿ ಅಲ್ಲ, ಒಬ್ಬ ಗುತ್ತಿಗೆದಾರರಾಗಿ ಕೆಲಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅವರಂತೆ ಅನೇಕ ಗುತ್ತಿಗೆದಾರರು ಇದ್ದಾರೆ. ಕೃಷ್ಣಪ್ಪ ಅವರು ರೈತರ ಮೇಲೆ ಒತ್ತಡ ಹೇರಿಲ್ಲ.
1989ರಲ್ಲಿ ಕೃಷ್ಣಪ್ಪ ಅವರಿಗೆ ಯಾವುದೇ ಅಧಿಕಾರ ಇರಲಿಲ್ಲ. ಹಾಗಾಗಿ ವಂಚನೆ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ವರದಿಯಲ್ಲಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಚಿವರ ಮೇಲೆ ಗಂಭೀರ ಆರೋಪಗಳಿದ್ದರೆ ಸಹಿಸುವುದಿಲ್ಲ’ ಎಂದು ವರದಿಯಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಭೂಸ್ವಾಧೀನ ಪ್ರಕರಣಲ್ಲಿ ಎಂ. ಕೃಷ್ಣಪ್ಪ ಅವರು ರೈತರಿಂದ ಬಲವಂತವಾಗಿ ಜಿಪಿಎ ಪಡೆದುಕೊಂಡು ಸರ್ಕಾರದಿಂದ ಭೂಪರಿಹಾರ ಮಂಜೂರು ಮಾಡಿಸಿಕೊಂಡಿದ್ದರು ಎಂದು ಆರೋಪಿಸಿದ್ದ ರೈತರು, ನ್ಯಾಯ ಕೇಳಿ ಹೈಕೋರ್ಟ್ ಮೊರೆ ಹೋಗಿದ್ದರು.
ಸಚಿವರ ಪ್ರಭಾವ ಅಕ್ರಮಕ್ಕೆ ಸಮ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ಭೂಸ್ವಾಧೀನವನ್ನು ರದ್ದುಪಡಿಸಿತ್ತು. ಇದರ ಆಧಾರದಲ್ಲಿ “ಕಳಂಕಿತರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವುದು ಎಷ್ಟು ಸರಿ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಮುಖ್ಯಮಂತ್ರಿಯವರಿಂದ ವರದಿ ಕೇಳಿದ್ದರು.