“ಕಥೆ ಸಾಗುವ ರೀತಿಯೇ ಮಜವಾಗಿದೆ…’ – ಹೀಗೆ ಹೇಳಿ ನಕ್ಕರು ಗೋಲ್ಡನ್ ಸ್ಟಾರ್ ಗಣೇಶ್. ಅವರ ನಗುವಲ್ಲೊಂದು ವಿಶ್ವಾಸ ಎದ್ದು ಕಾಣುತ್ತಿತ್ತು. ಸಹಜವಾಗಿಯೇ ಯಾವುದೇ ಕಲಾವಿದರಾದರೂ ಅವರಿಗೆ ಹೊಸ ಬಗೆಯ ಕಥೆ ಸಿಕ್ಕಾಗಿ ಅವರಲ್ಲೊಂದು ಹೊಸ ಜೋಶ್ ಎದ್ದು ಕಾಣುತ್ತದೆ. ಆ ಜೋಶ್ ಗಣೇಶ್ ಅವರಲ್ಲಿದೆ. ಅದಕ್ಕೆ ಕಾರಣ “ಕೃಷ್ಣಂ ಪ್ರಣಯ ಸಖಿ’. ಹಾಡುಗಳ ಮೂಲಕ ಭರ್ಜರಿ ಹಿಟ್ ಆದ ಈ ಚಿತ್ರ ಇಂದು ತೆರೆಕಾಣುತ್ತಿದೆ.
ಸಹಜವಾಗಿಯೇ ಗಣೇಶ್ ಅವರಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಶ್ರೀನಿವಾಸರಾಜು ಈ ಚಿತ್ರದ ನಿರ್ದೇಶಕರು. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ಗಣೇಶ್, “ನಿರ್ದೇಶಕ ಶ್ರೀನಿವಾಸರಾಜು ಅವರು ಫೋನ್ ಮಾಡಿ ಕಥೆ ಹೇಳಬೇಕೆಂದಾಗ ನನಗೆ ಆಶ್ಚರ್ಯವಾಯಿತು. ಅವರು ದಂಡುಪಾಳ್ಯದಂತಹ ಥ್ರಿಲ್ಲರ್ ಚಿತ್ರ ಮಾಡಿರುವ ನಿರ್ದೇಶಕರು. ನಾನು ನೋಡಿದರೆ ಪ್ರೇಮಕಥೆಗಳ ನಾಯಕ. ನನಗೆ ಇವರು ಯಾವ ತರಹ ಕಥೆ ಮಾಡಿರಬಹುದು ಅಂದುಕೊಂಡು ಕಥೆ ಕೇಳಿದೆ. ಅವರು ಕಥೆ ಶುರು ಮಾಡಿದ ಕೂಡಲೆ ನೀವು ಮದುವೆ ಗಂಡಿನ ತರಹ ಬರುತ್ತೀರಾ. ಎಂಟು ಜನ ನಾಯಕಿಯರು ಮದುವೆ ಹೆಣ್ಣಿನ ತರಹ ಸಿದ್ಧವಾಗಿರುತ್ತಾರೆ ಎಂದರು. ಆಗ ಇದು ನನ್ನ ಜಾನರ್‌ನ ಚಿತ್ರ ಅಂದು ಕೊಂಡೆ. ಆದರೆ ಚಿತ್ರದಲ್ಲಿ ಬರೀ ಇಷ್ಟೇ ಇಲ್ಲ. ಒಳ್ಳೆಯ ಟ್ವಿಸ್ಟ್ ಇಟ್ಟಿದ್ದಾರೆ’ ಎನ್ನುತ್ತಾರೆ.
ಕಥೆಯ ಬಗ್ಗೆ ಮಾತನಾಡುವ ಗಣೇಶ್, “ಒಬ್ಬ ಶ್ರೀಮಂತ, ಸುಶಿಕ್ಷಿತ ಯುವಕನಿಗೆ 30 ವರ್ಷ ದಾಟಿದರೂ ಮದುವೆಯಾಗಿರುವುದಿಲ್ಲ. ಸಾಕಷ್ಟು ಹುಡುಗಿಯರನ್ನು ಅವನು ರಿಜೆಕ್ಟ್ ಮಾಡುತ್ತಾನೆ, ಒಂದಷ್ಟು ಹುಡುಗಿಯರು ಅವನನ್ನೂ ರಿಜೆಕ್ಟ್ ಮಾಡುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಸಿನಿಮಾದ ಹೈಲೈಟ್’ ಎನ್ನಲು ಮರೆಯವುದಿಲ್ಲ.
ಸರಳ ಕಥೆಯ ಸೂಪರ್ ಜರ್ನಿ: ಗಣೇಶ್ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೇಲೆ ನಿರೀಕ್ಷೆ ಇಡಲು ಕಾರಣ ಕಥೆ. ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಗಣೇಶ್ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಆದರೆ, ಇಂತಹ ಕಥೆಯನ್ನು ಮಾಡಿಲ್ಲ. “ಇಂತಹ ಕಥೆ ಸಿಗೋದು ವಿರಳ. ಇದು ಕೇವಲ ಫ್ಯಾಮಿಲಿ ಡ್ರಾಮಾವಲ್ಲ. ಇಲ್ಲೊಂದು ಥ್ರಿಲ್ಲರ್ ಅಂಶವಿದೆ. ಅದು ಇಡೀ ಸಿನಿಮಾವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತದೆ. ಸಿನಿಮಾ ಆರಂಭವಾಗಿ 10 ನಿಮಿಷದಿಂದಲೇ ಪ್ರೇಕ್ಷಕರಲ್ಲಿ ಹಲವು ಕುತೂಹಲ, ಪ್ರಶ್ನೆಗಳು ಮೂಡುತ್ತವೆ. ಆ ಮಟ್ಟಿಗೆ ನಿರ್ದೇಶಕ ಶ್ರೀನಿವಾಸರಾಜು ಥ್ರಿಲ್ಲರ್ ಅಂಶವನ್ನು ಫ್ಯಾಮಿಲಿ ಕಥೆಗೆ ತುಂಬಾ ಚೆನ್ನಾಗಿ ಬ್ಲೆಂಡ್ ಮಾಡಿದ್ದಾರೆ. ಫಸ್ಟ್‌ಹಾಫ್ ಒಂದು ರೀತಿ ಸಾಗಿದರೆ, ಸೆಕೆಂಡ್ ಹಾಫ್ ನ ಮಜನೇ ಬೇರೆ’ ಎಂದು ಖುಷಿಯಿಂದ ಹೇಳುತ್ತಾರೆ.