Advertisement

ನಿಮ್ಮನೆ ಕೃಷ್ಣನ ಸಮಾಚಾರ

02:50 PM Sep 01, 2018 | |

ನಾಳೆ ಕೃಷ್ಣ ಜನ್ಮಾಷ್ಟಮಿ. ಒಂದು ಕ್ಷಣ ಇದು ಬೆಂಗಳೂರೋ, ಮಥುರೆಯೋ ಎಂದು ಗೊಂದಲ ಸೃಷ್ಟಿಯಾಗುವ ದಿನ ನಾಳೆ. ಕಾರಣ, ಎಲ್ಲಿ ನೋಡಿದರೂ ಕಾಣೋದು ಕೃಷ್ಣ… ಬಾಲಕೃಷ್ಣ… ಮುದ್ದುಕೃಷ್ಣರೇ. ತುಂಟ ನಗು ಬೀರಿ, ಕಣ್ಣುಮಿಟುಕಿಸಿ, ಎಳೆ ನಾಚಿಕೆ ತೋರುವ ಸಹಜ ಕೃಷ್ಣರದ್ದೇ ದೊಡ್ಡ ಜಾತ್ರೆ. ಜಗದೋದ್ಧಾರಕ ಕೃಷ್ಣನಿಗೆ ಇಸ್ಕಾನ್‌ನಂಥ ಮಂದಿರಗಳಲ್ಲಿ ವಿಧವಿಧವಾಗಿ ಪೂಜೆ ನಡೆದರೆ, ಮನೆಯಲ್ಲಿನ ಕೃಷ್ಣನಿಗೆ ಬೇರೆಯದ್ದೇ ಆರಾಧನೆ ಅಲಂಕಾರ ಸಾಗುತ್ತದೆ. ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ, ಮೊಬೈಲಿನಲ್ಲಿ ಅವರದ್ದೊಂದು ಫೋಟೋ ಕ್ಲಿಕ್ಕಿಸಿದರೇನೇ ಅನೇಕರಿಗೆ ಇಲ್ಲಿ ಕೃಷ್ಣಾಷ್ಟಮಿ. ಜೀವನದುದ್ದಕ್ಕೂ ನೆನಪಿನಲ್ಲುಳಿಯುವ ಈ ಕೃಷ್ಣ ಪ್ರಸಂಗಕ್ಕೆ ಇದುವೇ ಶುಭಮುಹೂರ್ತ.

Advertisement

  ಜನ್ಮಾಷ್ಟಮಿಯಂದು ಮನೆಮನೆಯಲ್ಲೂ ಪುಟಾಣಿ ಕೃಷ್ಣ ಅವತಾರವೆತ್ತುತ್ತಾನೆ. ಅವನನ್ನು ಅಲಂಕರಿಸುವ ಫ್ಯಾಶನ್‌ ಡಿಸೈನರ್‌ಗಳು ತುಂಬಾ ಮಂದಿ ಇದ್ದಾರೆ ಈ ನಗರಿಯಲ್ಲಿ. ಹಬ್ಬದ ಸಮಯದಲ್ಲಿ ಅವರಿಗೆ ಭಾರೀ ಬೇಡಿಕೆ. ಮೇಕಪ್‌ ಮಾಡಿಸಿಕೊಳ್ಳಲೆಂದೇ ನೂರಾರು ಕೃಷ್ಣರು ಅವರ ಬಳಿ ಸರತಿಯಲ್ಲಿ ನಿಲ್ಲುತ್ತಾರೆ. ಆದರೆ, ಅಷ್ಟೆಲ್ಲಾ ಕಷ್ಟಪಡುವುದು ಯಾಕೆ? ಮನೆಯಲ್ಲೇ ಮುದ್ದು ಕೃಷ್ಣನನ್ನು ತಯಾರು ಮಾಡಬಹುದು. ಅಲಂಕಾರಕ್ಕೆ ಬೇಕಾದ ಈ ಸಾಮಗ್ರಿಗಳನ್ನು ಒಮ್ಮೆ ಖರೀದಿಸಿದರೆ, ಮೂರ್ನಾಲ್ಕು ವರ್ಷ ಕೃಷ್ಣನ ಅಲಂಕಾರಕ್ಕೆ ಯಾವುದೇ ಚಿಂತೆಯಿಲ್ಲ. 

1. ಗಾಢ ಬಣ್ಣದ ಧೋತಿ
ಮುದ್ದು ಮಗುವಿಗೆ ಗಾಢ ಬಣ್ಣದ ಧೋತಿ ಹಾಕಿ, ಒಂದು ಪುಟ್ಟ ಕಿರೀಟವನ್ನಿಟ್ಟರೆ ಸಾಕು. ಥೇಟ್‌ ಕೃಷ್ಣನಂತೆಯೇ ಕಾಣುತ್ತಾನೆ. ಈಗ ಸಣ್ಣ ಮಕ್ಕಳಿಗೂ ರೆಡಿಮೇಡ್‌ ಧೋತಿಗಳು ಲಭ್ಯವಿರುವುದರಿಂದ, ಪಂಚೆ ಉಡಿಸುವ ತಾಪತ್ರಯವೂ ಇರುವುದಿಲ್ಲ.

2. ಗಾಢ ಬಣ್ಣದ ಕುರ್ತಾ
ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಧೋತಿ ಹಾಕಿಸಿದರೆ ಚೆನ್ನಾಗಿ ಕಾಣುತ್ತದೆ. ಸೈಡ್‌ನ‌ಲ್ಲಿ ಓಪನ್‌ ಇರುವ ಗಾಢ ಬಣ್ಣದ ಕುರ್ತಾಗಳು ಕೃಷ್ಣ ವೇಷಕ್ಕೆ ಸೂಕ್ತ. 

3. ರೇಷ್ಮೆ ಶಾಲು ಇದ್ದರೆ ಸಖತ್‌ ಲುಕ್‌
ಒಂದು ರೇಷ್ಮೆ ಶಾಲನ್ನು, ಮೂರು ವಿಭಿನ್ನ ರೀತಿಯಲ್ಲಿ ಕೃಷ್ಣನ ಅಲಂಕಾರಕ್ಕೆ ಬಳಸಬಹುದು. ಧೋತಿ ಜೊತೆಗೆ ರೇಷ್ಮೆ ಶಾಲನ್ನು ಸೊಂಟಕ್ಕೆ ಕಟ್ಟಿದರೂ ಕೃಷ್ಣನ ಲುಕ್‌ ಸಿಗುತ್ತದೆ. ಸುಮ್ಮನೆ ಭುಜದ ಮೇಲೆ ಶಾಲು ಹಾಕಿ ಅಥವಾ ಶಾಲನ್ನು ಹಣೆಗೆ ಕಟ್ಟಿ ಮಗುವನ್ನು ಸಿಂಗರಿಸಬಹುದು. 

Advertisement

4. ಆಭರಣಗಳು ಹೇಗಿರಬೇಕು?
ಕೃಷ್ಣ ಅಲಂಕಾರಕ್ಕೆ ಒಂದಷ್ಟು ಸಿಂಪಲ್‌ ಆಭರಣಗಳಿದ್ದರೆ ಸಾಕು. ತೋಳುಬಂಧಿ, ಕಾಲ್ಗಡಗ, ಎದೆಹಾರ, ಸೊಂಟದ ಪಟ್ಟಿಯಿಂದ ಮಗುವನ್ನು ಅಲಂಕರಿಸಿ. ಹೆಚ್ಚು ಭಾರವಿರದ, ಚುಚ್ಚಿ ಗಾಯ ಮಾಡದಂಥ ಸಿಂಪಲ್‌ ಆಭರಣಗಳನ್ನು ಖರೀದಿಸಿ.

5. ಕ್ಯೂಟ್‌ ಕಿರೀಟ
ನಿಮ್ಮನೆಯ ರಾಜಕುಮಾರನಿಗೊಂದು ಕಿರೀಟವನ್ನಿಡಿ. ಮಗುವಿಗೆ ಕಿರಿಕಿರಿಯಾಗದಂಥ, ರಟ್ಟು ಅಥವಾ ಫ್ಯಾಬ್ರಿಕ್‌ನಿಂದ ಮಾಡಿದ ಕಿರೀಟವಾದರೆ ಹೆಚ್ಚು ಸೂಕ್ತ. 

6. ಕೊಳಲು, ನವಿಲುಗರಿ
ಕೃಷ್ಣನ ಜೀವದ ಭಾಗವೇ ಆಗಿದ್ದ ಕೊಳಲು ಮತ್ತು ನವಿಲುಗರಿಯಿಲ್ಲದೆ ಅವನ ಅಲಂಕಾರ ಅಪೂರ್ಣ. ಮುದ್ದಾಗಿ ಅಲಂಕರಿಸಲ್ಪಟ್ಟ ಮಗುವಿನ ಕೈಗೊಂದು ಕೊಳಲು ಕೊಟ್ಟು, ಕಿರೀಟಕ್ಕೊಂದು ನವಿಲುಗರಿಯನ್ನು ಸಿಕ್ಕಿಸಿ.

7. ನೀಲಿಬಣ್ಣ ಹಚ್ಚಬೇಕೆ?
ಕೃಷ್ಣ ಶ್ಯಾಮಲ ವರ್ಣದವ. ಆತನಂತೆ ನೀಲಿ ಬಣ್ಣ ಪಡೆಯಲು ಕೃತಕ ಬಣ್ಣಗಳನ್ನು ಬಳಸಬಹುದು. ನೀಲಿಬಣ್ಣವನ್ನು ಮಾಯಿಶ್ಚರೈಸರ್‌ ಜೊತೆ ಸೇರಿಸಿ, ಮಗುವಿನ ಮೈಗೆ ಹಚ್ಚಿ. ಏಳೆಂಟು ವರ್ಷ ದಾಟಿದ, ಚರ್ಮದ ಅಲರ್ಜಿ ಇಲ್ಲದ ಮಕ್ಕಳು ಈ ರೀತಿಯ ಬಣ್ಣವನ್ನು ಬಳಸಬಹುದು. ಸಣ್ಣ ಮಕ್ಕಳಿಗೆ ಬಣ್ಣ ಬೇಡ.

ಕೃಷ್ಣನಾಗುವ ಮುನ್ನ… ಕೆಲವು ಎಚ್ಚರ…
– ಮಕ್ಕಳಿಗೆ ಗಾಯ ಮಾಡುವಂಥ ಚೂಪಾದ ಆಭರಣ, ಕಿರೀಟ ಬೇಡ.
– ವಸ್ತ್ರ ಹಾಗೂ ಆಭರಣಗಳು ಮಗುವಿನ ಅಳತೆಗೆ ತಕ್ಕುದಾಗಿರಲಿ.
– ಲೋಹದ ಆಭರಣ ಮಗುವಿನ ಚರ್ಮಕ್ಕೆ ಹಾನಿ ಮಾಡದಂತಿರಲಿ. 
– ಮುತ್ತಿನಹಾರ, ಮಣಿಸರ ಹಾಕಬೇಡಿ. ಅದರಿಂದ ಮಣಿಗಳನ್ನು ಕಿತ್ತು ನುಂಗುವ, ಮೂಗಿಗೆ ಹಾಕಿಕೊಳ್ಳುವ ಅಪಾಯವಿದೆ.
– ಅಲಂಕಾರ ಮಾಡುವ ಮೊದಲೇ ಮಗುವಿಗೆ ಊಟ-ತಿಂಡಿ ಮಾಡಿಸಿ.
– ಜ್ವರ ಮುಂತಾದ ಅನಾರೋಗ್ಯವಿದ್ದರೆ, ಅವರನ್ನು ಬಲವಂತವಾಗಿ ಅಲಂಕರಿಸಲು ಹೋಗಬೇಡಿ.

ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ
ನಾಳೆ ಕೃಷ್ಣ ಜನ್ಮಾಷ್ಟಮಿ. ಮುದ್ದು ಕೃಷ್ಣನಿಗೆ ಅಲಂಕಾರ ಮಾಡಿ, ವಿವಿಧ ಬಗೆಯ ಉಂಡೆಗಳನ್ನು ನೈವೇದ್ಯಕ್ಕಿಟ್ಟು ಆಶೀರ್ವಾದ ಪಡೆಯುವ ದಿನ. ಇಸ್ಕಾನ್‌ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಜನ್ಮಾಷ್ಟಮಿಯ ಬೆಳಗ್ಗೆ 4.15ರಿಂದ ಕೃಷ್ಣನಿಗೆ ವಿಶೇಷ ಪೂಜೆ, ಅಭಿಷೇಕಗಳು ಪ್ರಾರಂಭವಾಗಲಿದ್ದು, ಮರುದಿನ ರಾತ್ರಿ 12.30ರವರೆಗೆ ಪೂಜಾ ಮಹೋತ್ಸವ ನಡೆಯಲಿದೆ. 
ಎಲ್ಲಿ?: ಇಸ್ಕಾನ್‌ ಶ್ರೀ ರಾಧಾಕೃಷ್ಣ ದೇವಸ್ಥಾನ, ಹರೇ ಕೃಷ್ಣ ಹಿಲ್‌, ರಾಜಾಜಿನಗರ
ಯಾವಾಗ?: ಸೆ. 2 ಮತ್ತು 3, ಬೆಳಗ್ಗೆ 4.15

ಚಂದದ ಚಿತ್ತಾರಕ್ಕೆ ಪುರಸ್ಕಾರ

ಪ್ರತಿವರ್ಷದಂತೆ ಈ ವರ್ಷವೂ ಇಸ್ಕಾನ್‌ ವತಿಯಿಂದ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ನಡೆಯುತ್ತಿದೆ. 10 ವರ್ಷದೊಳಗಿನ ಮಕ್ಕಳು ಕೃಷ್ಣ ಅಥವಾ ರಾಧೆಯ ವೇಷ ಧರಿಸಬಹುದು. ಮಕ್ಕಳ ಫೋಟೊವನ್ನು ಇಸ್ಕಾನ್‌ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಬೇಕು. ಸ್ಪರ್ಧಿಸಲು ಕೊನೆಯ ದಿನ ಸೆ.3. ಹೆಚ್ಚಿನ ವಿವರಗಳಿಗೆ //www.iskconbangalore.org/krishna-costume-contest ನೋಡಿ.

– ಪ್ರಿಯಾಂಕಾ

Advertisement

Udayavani is now on Telegram. Click here to join our channel and stay updated with the latest news.

Next