ವೇದ-ಪುರಾಣಗಳು, ಪುಣ್ಯ ಕಥೆಗಳಲ್ಲಿ ಬರುವ ಹೆಸರುಗಳು, ಸಂದರ್ಭಗಳು, ವಾಕ್ಯಗಳನ್ನೇ ಶೀರ್ಷಿಕೆಯನ್ನಾಗಿ ಇಟ್ಟುಕೊಂಡು ಈಗಾಗಲೇ ಹಲವು ಚಿತ್ರಗಳು ಬಂದಿರುವುದನ್ನು ನೋಡಿರುತ್ತೀರಿ. ಈಗ ಆ ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅದೇ “ಕರ್ಮಣ್ಯೇ ವಾಧಿಕಾರಸ್ತೇ’. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುವ ಸುಭಾಷಿತದಲ್ಲಿ ಬರುವ ಈ ಸಾಲು ಈಗ ಹೊಸಬರ ಚಿತ್ರಕ್ಕೆ ಶೀರ್ಷಿಕೆಯಾಗಿದೆ.
ಅಂದಹಾಗೆ, ಈ ಚಿತ್ರದ ಹೆಸರು “ಕರ್ಮಣ್ಯೇ ವಾಧಿಕಾರಸ್ತೇ’ ಅಂತ ಇದ್ದರೂ, ಇದೇನೂ ಪೌರಾಣಿಕ ಚಿತ್ರವಲ್ಲ. 1850ರ ಕಾಲ ಘಟ್ಟದಿಂದ ಶುರುವಾಗಿ ಈಗಿನ ಕಾಲಘಟ್ಟದಲ್ಲಿ ಮುಗಿಯುವ ಕಥೆಯೊಂದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. “ಕರ್ಮಣ್ಯೇ ವಾಧಿಕಾರಸ್ತೇ’ ಹೆಸರು ಕೇಳಲು ಇಂಪಾಗಿದೆ, ಅರ್ಥಗರ್ಭಿತವಾಗಿದೆ ಮತ್ತು ಚಿತ್ರದ ಕಥೆಗೂ ಹೊಂದಾಣಿಕೆ ಆಗುತ್ತದೆ ಎನ್ನುವ ಕಾರಣಕ್ಕೆ ಚಿತ್ರತಂಡ, ಇದೇ ಹೆಸರನ್ನು ತಮ್ಮ ಚಿತ್ರಕ್ಕೆ ಇಟ್ಟುಕೊಂಡಿದೆ.
ಶ್ರೀಹರಿ ಆನಂದ್ “ಕರ್ಮಣ್ಯೇ ವಾಧಿಕಾರಸ್ತೇ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರತೀಕ್ ಎನ್.ಜಿ, ದಿವ್ಯಾ ಗೌಡ, ಸಿರಿಂಗ್, ಉಗ್ರಂ ಮಂಜು, ನಾಟ್ಯರಂಗ, ಸೂರ್ಯಕಾಂತ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ಮತ್ತು ಎರಡು ಟ್ರ್ಯಾಕ್‌ಗಳಲ್ಲಿ ಚಿತ್ರದ ಕಥೆ ಸಾಗಲಿದ್ದು, ಒಂದರಲ್ಲಿ ಮರ್ಡರ್ ಮಿಸ್ಟರಿ ಮತ್ತೊಂದರಲ್ಲಿ, ಪ್ರಯಾಣ ಇರಲಿದೆ.
ಇವುಗಳ ಮಧ್ಯೆ ಚಿತ್ರ ಸಾಗುತ್ತದೆ. ಒಂದು ಘಟ್ಟದಲ್ಲಿ ಬೌದ್ದ ಜನಾಂಗದ ಸನ್ನಿವೇಶ ಕೂಡ ಬರಲಿದೆ. ನಿನ್ನ ಕೆಲಸ ನೀನು ಮಾಡು. ಫಲಾಫಲಗಳನ್ನು ದೇವರಿಗೆ ಬಿಟ್ಟುಬಿಡು. ನೀನು ಒಳ್ಳೆಯದನ್ನು ಮಾಡಿದರೆ ದೇವರು ಒಳ್ಳೆಯದು ಮಾಡುತ್ತಾನೆ. ಕೆಟ್ಟದ್ದನ್ನು ಮಾಡಿದರೆ ಕೆಟ್ಟದು ಆಗುತ್ತದೆ ಎನ್ನುವ ಸಂದೇಶ ಈ ಚಿತ್ರದಲ್ಲಿದೆ ಎನ್ನುತ್ತದೆ ಚಿತ್ರತಂಡ. ಇನ್ನು ದಾಂಡೇಲಿ, ಆಗುಂಬೆ, ಹುಬ್ಬಳ್ಳಿ, ಮಲ್ಪೆ, ಬೆಂಗಳೂರು ಸುತ್ತಮುತ್ತ ನಾಲ್ಕು ಹಂತಗಳಲ್ಲಿ “ಕರ್ಮಣ್ಯೇ ವಾಧಿಕಾರಸ್ತೇ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಹಾಡುಗಳಿಗೆ ಋತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯಿದ್ದು,
ಸಂತೋಷ್ ನಾಯಕ್-ನಿಖೀಲ್ ದೊಂಬೆಕೋಡಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಉದಯ್ ಲೀಲಾ – ಭೂಪೇಶ್ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಇತ್ತೀಚೆಗೆ “ಕರ್ಮಣ್ಯೇ ವಾಧಿಕಾರಸ್ತೇ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ, ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ. ಅಮೆರಿಕಾದ ಸಿಯಟೆಲ್ ಪ್ರಜೆ, ಅನಿವಾಸಿ ಕನ್ನಡಿಗ ಡಾ.ರಮೇಶ್ ರಾಮಯ್ಯ ಕಥೆ ಕೇಳಿ ಇಷ್ಟಪಟ್ಟು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ ಚಿತ್ರ ಅಕ್ಟೋಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.