ಬೀಳಗಿ: ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಕೃಷ್ಣಾನದಿ ತುಂಬಿಕೊಂಡು ಹರಿಯುತ್ತಿದೆ. ಮೈದುಂಬಿಕೊಳ್ಳುತ್ತಿರುವ ಕೃಷ್ಣೆಯ ಕಂಡು ಇನ್ನೇನು ಏತ ನೀರಾವರಿ ಕಾಲುವೆಗೆ ನೀರು ಹರಿಯಲಿದೆ ಎಂಬ ಆಶಾಭಾವನೆ ರೈತರಲ್ಲಿ ಮೂಡಿದೆ.
ಅಂತರ್ಜಲ ವೃದ್ಧಿ: ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ಕೊಳವೆಬಾವಿ, ಬಾವಿ, ಕೆರೆ-ಕಟ್ಟೆಗಳು ಬರಿದಾಗಿದ್ದವು. ಕೃಷ್ಣೆಯಲ್ಲಿ ಮತ್ತೆ ನೀರು ತುಂಬಿಕೊಂಡು ಬಂದಿರುವ ಕಾರಣ, ಅಂತರ್ಜಲ ವೃದ್ಧಿಯ ಆಶಾಭಾವನೆ ಮೊಳಕೆಯೊಡೆದಿದೆ. ದಿನದಿಂದ ದಿನಕ್ಕೆ ಆಲಮಟ್ಟಿ ಜಲಾನಯನ ಪ್ರದೇಶದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಕೃಷ್ಣೆಯ ನದಿಪಾತ್ರದಲ್ಲಿ ಎಲ್ಲ ಏತ ನೀರಾವರಿ ಜಾಕವೆಲ್ ಹತ್ತಿರ ಭರಪುರ ನೀರು ಬಂದಿದೆ.
80ಟಿಎಂಸಿ ಸಂಗ್ರಹ: ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ 516.7 ಇದೆ. ಜು. 2ರ ರಾತ್ರಿಯಿಂದ ಇದುವರೆಗೆ ಸುಮಾರು 60 ಟಿಎಂಸಿ ನೀರು ಹರಿದು ಬಂದಿದೆ. ಮೊದಲಿನ ಸಂಗ್ರಹ ಹಿಡಿದು ಜಲಾಶಯದಲ್ಲಿ ಈಗಾಗಲೆ ಒಟ್ಟು 80 ಟಿಎಂಸಿ ನೀರು ಸಂಗ್ರಹವಿದೆ. ಜೀವಜಲ 63 ಟಿಎಂಸಿ ಇದೆ ಎಂದು ಕೆಬಿಜಿಎನ್‌ಎಲ್ ಮುಖ್ಯ ಅಭಿಯಂತರ ಆರ್.ಪಿ.ಕುಲಕರ್ಣಿ ತಿಳಿಸಿದ್ದಾರೆ.
ನೀರಿಗಾಗಿ ಕಾಯುತ್ತಿದ್ದಾರೆ: ಏತ ನೀರಾವರಿ ಕಾಲುವೆಗೆ ನೀರು ಹರಿದ ತಕ್ಷಣವೇ ಬಿತ್ತನೆ ಮಾಡಬೇಕೆಂದು ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದವರೂ ಕೂಡ ಕಾಲುವೆ ನೀರನ್ನು ಅವಲಂಬಿಸಿದ್ದಾರೆ. ಹೀಗಾಗಿ ತಾಲೂಕಿನ ತೆಗ್ಗಿ-ಸಿದ್ದಾಪುರ, ರೊಳ್ಳಿ, ಲಿಂಗಾಪುರ ಎಸ್‌ಕೆ ಸೇರಿದಂತೆ ತಾಲೂಕಿನ ಹಲವು ಏತ ನೀರಾವರಿ ಕಾಲುವೆಗೆ ನೀರು ಹರಿಸುವುದು ಶೀಘ್ರಗತಿಯಲ್ಲಿ ನಡೆಯಬೇಕಿದೆ.
ಕೃಷ್ಣಾ ನದಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಾರಣ, ಜು. 15 ರೊಳಗೆ ತಾಲೂಕಿನ ತೆಗ್ಗಿ-ಸಿದ್ದಾಪುರ, ಸೊನ್ನ, ರೊಳ್ಳಿ, ಕಳಸಕೊಪ್ಪ ಸೇರಿದಂತೆ ಎಲ್ಲ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಕೆಬಿಜಿಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಏತ ನೀರಾವರಿ ಕಾಲುವೆಗೆ ನೀರು ಬಿಡಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
•ಮುರುಗೇಶ ನಿರಾಣಿ, ಶಾಸಕರು, ಬೀಳಗಿ
ಕೆಬಿಜಿಎನ್‌ಎಲ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಲಾಶಯದ ನೀರಿನ ಸಂಗ್ರಹ ಹಾಗೂ ಕುಡಿಯಲು, ಕೆರೆ ತುಂಬಲು ಹಾಗೂ ನೀರಾವರಿಗೆ ಎಷ್ಟೆಷ್ಟು ನೀರು ತೆಗೆದಿರಿಸಬೇಕೆನ್ನುವುದು ಕುರಿತು ಚರ್ಚೆ, ನಿರ್ಧಾರವಾಗಬೇಕು. ಈ ಎಲ್ಲ ಪ್ರಕ್ರಿಯೆಗೆ ವಿಳಂಬವಾಗುತ್ತದೆ. ಆದರೂ, ಏತ ನೀರಾವರಿ ಯೋಜನೆಗಳಿಗೆ ಎಷ್ಟು ಪ್ರಮಾಣ ನೀರು ಬಿಡಬೇಕಾಗುತ್ತದೆ ಎನ್ನುವ ಕುರಿತು ನೀರಾವರಿ ಸಲಹಾ ಸಮಿತಿ ಗಮನಕ್ಕೆ ನೀಡುವ ಮೂಲಕ ಕೂಡಲೇ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
•ಆರ್.ಪಿ.ಕುಲಕರ್ಣಿ, ಕೆಬಿಜಿಎನ್‌ಎಲ್ ಮುಖ್ಯ ಅಭಿಯಂತರರು
•ರವೀಂದ್ರ ಕಣವಿ