Advertisement

Krishna river ನೀರು ಖಾಲಿ ಆದಾಗ ದರ್ಶನ ನೀಡುವ ಅಪರೂಪದ ದೇವಸ್ಥಾನ

11:06 PM Jun 16, 2023 | Team Udayavani |

ರಬಕವಿ-ಬನಹಟ್ಟಿ : ಪ್ರಪಂಚದಲ್ಲಿ ಅದೆಷ್ಟೋ ಕೌತುಕದ ಸಂಗತಿಗಳು, ನಮಗೆ ಗೊತ್ತೇ ಇರದ ವಿಚಾರಗಳು ಇರುತ್ತವೆ. ಅವುಗಳ ಬಗ್ಗೆ ತಿಳಿದು ಕೊಂಡಾಗ ಅಚ್ಚರಿಯಾಗುವುದಂತು ಸತ್ಯ. ಅಂತೆಯೇ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸಮೀಪದ ಕೃಷ್ಣಾ ನದಿಯ ಒಡಲಿನಲ್ಲಿ ಹುದುಗಿ ಹೋಗಿದ್ದ ಪುರಾತನ ದೇವಸ್ಥಾನವೊಂದು ನೀರು ಕಡಿಮೆ ಆದ ಹಿನ್ನಲೆಯಲ್ಲಿ ಇದೀಗ ಗೋಚರಿಸುತ್ತಿದೆ.

Advertisement

ಕೃಷ್ಣೆ ಬರಿದಾದಾಗ ಪ್ರತಿಸಲ ಎದ್ದು ಕಾಣುತ್ತಿದ್ದ ಪ್ರಶ್ನೆ ಈ ನಡು ಹೊಳೆಯಲ್ಲಿ ಯಾರಪ್ಪ ಈ ದೇವಸ್ಥಾನ ಕಟ್ಟಿದವರೂ ಎಂದು. ನಾವು ಚಿಕ್ಕವರಿರುವಾಗಿನಿಂದಲೂ ನೋಡುತ್ತಾ ಬಂದಿದ್ದು, ಅದು ಬಾಳಪ್ಪಜ್ಜನ ಗುಡಿ ಎಂದೇ ಖ್ಯಾತಿಯಾಗಿತ್ತೇ ಹೊರತು. ಅದನ್ನು ಯಾರು ಕಟ್ಟಿಸಿದರು? ಯಾವಾಗ ಕಟ್ಟಿಸಿದರು? ನದಿಯ ನಡುವೆ ಯಾಕೆ ಕಟ್ಟಿಸಿದರೂ ? ಎಂಬು ನೂರೆಂಟು ಪ್ರಶ್ನೆಗಳು ನಮ್ಮನ್ನು ಕಾಡುತ್ತಿತ್ತು. ಆದರೆ ಇಂದಿನ ಯುವ ಪೀಳಿಗೆಗೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಅದು ಬಾಳಪ್ಪಜ್ಜನ ಗುಡಿ ಎಂದಷ್ಟೇ ಪರಿಚಿತವಾಗಿತ್ತು. ಕೃಷ್ಣಾ ನದಿ ಖಾಲಿಯಾಗಿದ್ದರಿಂದ ಮಹಿಷವಾಡಗಿ ಬ್ಯಾರೇಜನ ಹಿಂಭಾಗದಲ್ಲಿ ಕಟ್ಟಿರುವ ಈ ಗುಡಿ(ದೇವಸ್ಥಾನ) ಪೂರ್ತಿಯಾಗಿ ಕಾಣತೊಡಗಿದ್ದು,  ಕೃಷ್ಣೆ ಪೂರ್ತಿ ಬರಿದಾದಾಗ ಮಾತ್ರ ಕಾಣುವ ಈ ದೇವಸ್ಥಾನ ಅಪರೂಪ ಎನ್ನುವಂತೆ ವರ್ಷದಲ್ಲಿ ಒಂದು ಬಾರಿ ಇಲ್ಲವೇ, 2ವರ್ಷ, 3 ವರ್ಷಕ್ಕೆ ಒಮ್ಮೆ ಹೀಗೆ ಬರಗಾಲ ಬಂದಾಗ ಮಾತ್ರ ಇದು ಗೋಚರಿಸುವುದರ ಜೊತೆಗೆ ಕೆಲವೇ ದಿನಗಳು ಪೂಜೆಗೊಳ್ಳುವ ವಿಶೇಷ ದೇವಸ್ಥಾನವಾಗಿದೆ.

ದಿನ ದಿನಕ್ಕೆ ನೀರು ಕಡಿಮೆಯಾದಂತೆ ಗೋಚರಿಸುವ ಈ ದೇವಾಲಯವು ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ, ದೇವಾಲಯದ ಗರ್ಭಗುಡಿಯಲ್ಲಿ ಲಿಂಗವಿದೆ. ವಿಶಾಲವಾದ ಪಡಶಾಲೆ ಇದೆ. ಮೂರು ಕಮಾನುಗಳ ಪ್ರವೇಶ ದ್ವಾರವಿದ್ದು, ನದಿಯ ಕಡೆ ಒಂದು ಬಾಗಿಲು, ಅದಕ್ಕೆ ಎದುರುಗಡೆ ಮತ್ತೊಂದು ಬಾಗಿಲು, ಬೃಹತ್ ಆಕಾರದ ಕರಿ ಕಲ್ಲಿನಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ ಕೆತ್ತನೆಯ ಕೆಲಸವಾಗಲಿ ಇಲ್ಲ. ಅದರೂ ಅದು ನೋಡುಗರನ್ನು ಆರ್ಕಸುವಂತಿದೆ. ಈ ದೇವಾಲಯದ ಕುರಿತು ಮಾಹಿತಿ ಕಲೆ ಹಾಕುವಾಗ ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಕಟ್ಟಿಸಿದ್ದು ಎಂದು ತಿಳಿದು ಬಂದಿದ್ದು, ಈಗಲೂ ಆ ದೇವಸ್ಥಾನಕ್ಕೆ ಬಾಳಪ್ಪನ ಗುಡಿ ಅಂತಾ ಕರಿಯುತ್ತಾರೆ. ಆದರ ಅದು ಈಶ್ವರ ದೇವಸ್ಥಾನ. ಮರೆಗುದ್ದಿ ಮನೆತನದವರು ಹೇಳುವ ಪ್ರಕಾರ ನಮ್ಮ ಮುತ್ಯಾಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಅವರದು ಮದುವೆ ಆಗಿತ್ತು. ಬಾಳಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಹಂಗ್ ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರ ಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ. ಅಲ್ಲಿ ಗುಡಿ ಕಟ್ಟಿಸಿದರ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಜಾಗ ಆಗತದ್ ಮತ್ತು ಇದರಿಂದ ಬಹಳ ಜನಕ್ಕ ಅನಕೂಲ ಆಗತದ್ ಅದಕ್ಕ ಅಲ್ಲೇ ಗುಡಿ ಕಟ್ಟಿಸು ಎಂದು ಸಲಹೆ ಇತ್ತರು. ಆಗ ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದರೇ, ರಬಕವಿ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು. ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾನಿಗೆ ಪಡೆದು 1912 ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಯಿತು.

ಧಾರ್ಮಿಕ ಕಾರ್ಯವಾಗಿದ್ದರಿಂದ ನಮ್ಮ ಮುತ್ಯಾ ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ಮೋಡಿ ಭಾಷೆಯೊಳಗೆ ನೋಡಲು ಸಿಗುತ್ತಾವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು. ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ1971 ರಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ ನಿರ್ಮಿಸಲು ಅನುಮತಿ ನೀಡಿದರೆ,1973 ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಈಗ ಅದೇ ನದಿಯ ಮಧ್ಯ ಭಾಗವಾಯಿತು. ನಿಜಕ್ಕೂ ಒಂದು ಅಪರೂಪದ ದೇವಸ್ಥಾನವಾಗಿರುವ ಇದು ಶತಮಾನಗಳು ಕಳೆದರೂ ಯಾವುದೇ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷವಾಗಿದೆ. ನಮ್ಮ ಭಾರತೀಯ ನದಿಗಳು ನಾಗರೀಕತೆಯ ಮೆಟ್ಟಿಲುಗಳಾಗಿದ್ದು, ಅವುಗಳಲ್ಲಿ ಒಂದೊAದು ವಿಶೇಷತೆಯನ್ನು ಒಳಗೊಂಡಿವೆ. ಸದ್ಯ ಒಂದು ಶತಮಾನದಷ್ಟು ಹಳೆಯದಾದ ಈ ದೇವಾಲಯ ಅನೇಕ ಬರಗಾಲ ಹಾಗೂ ಪ್ರವಾಹಗಳಿಗೆ ಮೂಖ ಸಾಕ್ಷಿಯಾಗಿ ನಿಂತಿದ್ದು, ಮತ್ತೇ ಸದ್ಯದಲ್ಲಿ ಕೃಷ್ಣೆಯ ಗರ್ಭದಲ್ಲಿ ಲೀನವಾಗಲಿದೆ.

ಕಿರಣ ಶ್ರೀಶೈಲ ಆಳಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next