ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂಕಾಗಿ ರಚಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಾಲೂಕಿಗೆ ಗಡಿರೇಖೆ ಗುರುತಿಸುವ ದಿಸೆಯಲ್ಲಿ ಏರ್ಪಡಿಸಲಾಗಿದ್ದ ಚುನಾಯಿತ ಜನಪ್ರತಿನಿಧಿಗಳ ಸಭೆಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತ್ರ ಹಾಜರಾಗಿದ್ದರಿಂದ ಸಭೆ ಅಪೂರ್ಣಗೊಂಡಿದೆ.
ಕಚೇರಿಯಲ್ಲಿ ಸಭೆ: ಹಿಂದಿನ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚೇಳೂರು ಹೋಬಳಿಯನ್ನು ಹೊಸ ತಾಲೂಕಾಗಿ ಘೋಷಿಸಿದ್ದರು. ಆದರೆ ವರ್ಷದಿಂದ ಹೊಸ ತಾಲೂಕಿಗೆ ಗಡಿರೇಖೆ ಗುರುತಿಸದ ಕಾರಣ ತಾಲೂಕು ರಚನೆ ವಿಳಂಬ ಆಗಿತ್ತು. ಆದರೆ ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಆಸಕ್ತಿ ವಹಿಸಿ ಹೋಬಳಿ ಜನರ ಬೇಡಿಕೆಯಂತೆ ಹೊಸ ತಾಲೂಕಿಗೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಗಡಿರೇಖೆ ಗುರುತಿಸಲು ತಮ್ಮ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು.
ಸಭೆ ಮುಂದೂಡಿಕೆ: ಸಭೆಗೆ ಚಿಂತಾಮಣಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹಾಗೂ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಆಹ್ವಾನಿಸಲಾಗಿತ್ತು. ಆದರೆ ಸಭೆಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತ್ರ ಭಾಗವಹಿಸಿ ಉಳಿದ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಶಾಸಕರು ಅನಿವಾರ್ಯ ಕಾರಣಗಳಿಂದ ಸಭೆಯಿಂದ ದೂರ ಉಳಿದ ಕಾರಣ ಸಭೆಯನ್ನು ಮುಂದೂಡಲಾಯಿತು ಎಂದು ಸಭೆ ಬಳಿಕ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದ್ ಉದಯವಾಣಿಗೆ ತಿಳಿಸಿದರು.
ಮೂರು ತಾಲೂಕು ಗ್ರಾಪಂಗಳ ಸೇರ್ಪಡೆ: ಜಿಲ್ಲೆಯಲ್ಲಿ ಏಳನೇ ತಾಲೂಕಾಗಿ ಉದಯವಾಗಲಿರುವ ಚೇಳೂರು ತಾಲೂಕಿಗೆ ಜಿಲ್ಲೆಯ ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕಿನ ಹಲವು ಗ್ರಾಪಂಗಳ ಹಾಗೂ ಹೋಬಳಿಗಳು ಸೇರ್ಪಡೆ ಆಗುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಸೌಹಾರ್ದಯುತವಾಗಿ ಹೊಸ ತಾಲೂಕಿಗೆ ಗಡಿರೇಖೆ ಗುರುತಿಸಲು ಸಭೆ ಕರೆದಿದ್ದರು. ಆದರೆ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆಗೆ ಶಿಡ್ಲಘಟ್ಟ ಹಾಗೂ ಚಿಂತಾಮಣಿ ಶಾಸಕರು ಬರಲು ಸಾಧ್ಯವಾಗದೇ ಸಭೆ ಮುಂದೂಡಿದ್ದು, ಮತ್ತೂಂದು ದಿನಾಂಕ ನಿಗದಿಪಡಿಸಿ ವಿಸ್ತೃತವಾಗಿ ಚರ್ಚೆ ನಡೆಸಿ ಗಡಿರೇಖೆ ಗುರುತಿಸಲಾಗುವುದು ಎಂದು ಉಪ ವಿಭಾಗಾಧಿಕಾರಿಗಳು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಚೇಳೂರು ಹೊಸ ತಾಲೂಕು ರಚನೆಗೆ ಗಡಿರೇಖೆ ಗುರುತಿಸಲು ಉಪ ವಿಭಾಗಾಧಿಕಾರಿಗಳು ಸಭೆ ಕರೆದಿದ್ದರು. ಶಾಸಕಾಂಗ ಪಕ್ಷದ ನಾಯಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ವಿಪ್ ಜಾರಿ ಮಾಡಿದ್ದರಿಂದ ತಡವಾಗಿ ಸಭೆಯಲ್ಲಿ ಭಾಗವಹಿಸಿದ್ದೆ.
-ಎಸ್.ಎನ್.ಸುಬ್ಬಾರೆಡ್ಡಿ, ಬಾಗೇಪಲ್ಲಿ ಶಾಸಕರು