ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಬಗ್ಗೆ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಪ್ರಸ್ತುತ ವಿಧಾನ ಪರಿಷತ್ ಹಂಗಾಮಿ ಸಭಾಧ್ಯಕ್ಷ ರಘುನಾಥ ಮಲ್ಕಾಪುರೆ ಮಾತನಾಡಿರುವ ಆಡಿಯೊಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಆಡಿಯೊವೊಂದನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನತೆ ಎದುರು ಸತ್ಯಾಸತ್ಯತೆ ಮುಂದಿಡಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರು.
ಆಡಿಯೊದಲ್ಲಿ ಉಲ್ಲೇಖೀಸಿರುವ ಖರ್ಚು ವೆಚ್ಚದ ಲೆಕ್ಕವನ್ನು ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಬಹಿರಂಗ ಪಡಿಸಬೇಕು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾಡಿರುವ ಆರೋಪದ ಬಗ್ಗೆ ರೇವೂರ ಸ್ಪಷ್ಟನೆ ನೀಡಬೇಕೆಂದರು.
ಶಾಸಕ ತೇಲ್ಕೂರ, ಎಂಎಲ್‌ಸಿ ರಘುನಾಥರಾವ ಮಲ್ಕಾಪುರೆ ಅವರೊಂದಿಗೆ ಮಾತನಾಡಿರುವ ಆಡಿಯೋ ಕುರಿತಾಗಿ ಮೂವರು ಕೂಡಲೇ ವಿವರಣೆ ನೀಡಬೇಕೆಂದು ಆಗ್ರಹಿಸಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅಧಿಕಾರ ದುರುಪಯೋಗ ಪಡಿಸಿಕೊಂಡು ಅನುದಾನ ಬಿಡುಗಡೆ ಮಾಡುವಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ತನಿಖೆ ನಡೆಯಲಿ ಎಂದು ಒತ್ತಾಯಿಸಿದ ಅವರು, ದತ್ತಾತ್ರೇಯ ಪಾಟೀಲ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಜೆಡಿಎಸ್ ಮುಖಂಡರಾದ ನಾಗರಾಜ ರೇವಣಕರ್, ಶಿವಾಜಿ ಸೂರ್ಯವಂಶಿ, ಶಿವಲಿಂಗಪ್ಪ ಪಾಟೀಲ ಇತರರಿದ್ದರು.