Advertisement

ನಾಲ್ವರು ಕಲಾ ಸಾಧಕರಿಗೆ ಕೃಷ್ಣಪ್ರೇಮ ಪ್ರಶಸ್ತಿ

06:00 PM Nov 14, 2019 | mahesh |

ಸಂಗೀತ ನೃತ್ಯಕಲಾ ಪೋಷಕರಾಗಿದ್ದ ಕೊಡವೂರು ಸಾಲ್ಮರ ಕೃಷ್ಣಮೂರ್ತಿ ರಾವ್‌ ಹಾಗೂ ಪ್ರೇಮಾ ರಾವ್‌ ಹೆಸರಿನಲ್ಲಿ “ಕೃಷ್ಣಪ್ರೇಮ’ ಪ್ರಶಸ್ತಿಯನ್ನು ನ.19ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಂಗೀತ-ನೃತ್ಯಕಲಾ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ನಾಲ್ವರು ಸಾಧಕರಿಗೆ ನೀಡಿ ಪುರಸ್ಕರಿಸಲಾಗುವುದು.

Advertisement

ವಿ.ಕೆ. ರಾಘವೇಂದ್ರ ರಾವ್‌
ಯೋಗ್ಯ ಗುರುಗಳಿಂದ ಎಳವೆಯಿಂದಲೇ ಸೂಕ್ತ ಪಾಠ, ಅಭ್ಯಾಸದಿಂದ ಹಂತ ಹಂತವಾಗಿ ತನ್ನ ಸೃಜನಶೀಲತೆ ಹಾಗೂ ಸತತ ಪರಿಶ್ರಮದಿಂದ ರಾಗಗಳ ಭಾವವಿಸ್ತರಣೆಯ ಕೌಶಲವನ್ನು ಬೆಳೆಸಿಕೊಂಡರು. ಹದಿಮೂರರ ವಯಸ್ಸಿನಲ್ಲೇ ಪ್ರಥಮ ಸಂಗೀತ ಕಛೇರಿ ನಡೆಸಿಕೊಟ್ಟ ಇವರು ಹೊಸರಾಗಗಳ ಬಳಕೆ, ರಾಗಪ್ರಸ್ತಾರ-ಜೀವಸ್ವರಗಳಲ್ಲಿ ಸತತ ಸಂಶೋಧನೆ ನಡೆಸಿ ಕೊಳಲು ರಾಘವೇಂದ್ರರಾಯರೆಂದೇ ಚಿರಪರಿಚಿತರಾದರು. ಅಧ್ಯಾಪನ ವೃತ್ತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಕೊಳಲು ವಾದನ ಕಲಿಸುತ್ತಾ ಕಛೇರಿಗಳನ್ನು ನೀಡುತ್ತಾ ರಾಗಗಳನ್ನು ಭಾವಮಾಧುರ್ಯ ಹಾಗೂ ಜೀವ ಸ್ವರಗಳಿಂದ ಅಲಂಕರಿಸಿ ಉತ್ತಮ ಮನೋಧರ್ಮದ ಜೊತೆಗೆ ಶ್ರುತಿಶುದ್ಧತೆ ಹಾಗೂ ಲಯಬದ್ಧತೆಯನ್ನು ತಾವು ಬಾರಿಸುವ ಕೊಳಲಿನ ಉಸಿರಾಗಿಸಿದ ಇವರು ದೂರದರ್ಶನ ಹಾಗೂ ಆಕಾಶವಾಣಿಯ ಪ್ರಥಮ ಶ್ರೇಣಿಯ ಕಲಾವಿದರಾಗಿದ್ದಾರೆ.

ನಿಟ್ಟೂರು ಶ್ರೀನಿವಾಸ ಭಟ್‌
ಸಂಗೀತಾಸಕ್ತಿಯನ್ನು ಬಾಲ್ಯದಲ್ಲೇ ಬೆಳಿಸಿಕೊಂಡ ನಿಟ್ಟೂರು ಶ್ರೀನಿವಾಸ ಭಟ್‌ ಕಿರಿ-ಹಿರಿಯ ಸಂಗೀತ ವಿದ್ವಾಂಸರಿಂದ ರಾಗ ಸಂಚಾರ ಸೂಕ್ಷ್ಮತೆ, ಶ್ರುತಿ-ಸ್ವರ-ಲಯ ಪ್ರಸ್ತಾರ ಪ್ರಾವೀಣ್ಯತೆ ಪಡೆದು ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯ ಹಾಡುಗಳ ಮೂಲಕ ಪ್ರಸಿದ್ಧಿಗೆ ಬಂದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಇವರು ನಿವೃತ್ತಿ ನಂತರವೂ ಸಂಗೀತ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ನಾರಾಯಣ ಭಟ್‌
ಶಾಲಾ ಶಿಕ್ಷಣ ಪಡೆಯುತ್ತಿರುವಾಗ ಪ್ರಾರಂಭವಾದ ನೃತ್ಯಾಭ್ಯಾಸ ಮುಂದೆ ಇವರನ್ನು ಯಕ್ಷಗಾನದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗುವ ಘಟ್ಟಕ್ಕೆ ತಂದು ನಿಲ್ಲಿಸಿತು. ಮುಂದೆ ಅಧ್ಯಾಪನಾ ವೃತ್ತಿಯಲ್ಲಿರುವಾಗಲೂ ಕಲಾ ಸೇವೆಯ ಹಂಬಲ ಕಾರ್ಕಳದಲ್ಲಿ ಸಮಾನ ಮನಸ್ಕರೊಂದಿಗೆ ಲಲಿತಾಕಲಾ ಕೇಂದ್ರ ಎಂಬ ನೃತ್ಯ-ಸಂಗೀತ-ತಾಳವಾದ್ಯ ಸಂಸ್ಥೆಯನ್ನು ಹುಟ್ಟುಹಾಕಿತು. ಇವರು ಉಡುಪಿಯ ಸುತ್ತಮುತ್ತ ಮನೆ ಪಾಠಗಳ ಮೂಲಕ ನೃತ್ಯಾಭ್ಯಾಸ ಮಾಡಿಸುತ್ತಿದ್ದಾರೆ.

ಪ್ರಕಾಶ್‌ ಕುಂಜಿಬೆಟ್ಟು
ರಂಗದ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳನ್ನು ಅವುಗಳ ಘನತೆಗೆ ಚ್ಯುತಿ ಬಾರದಂತೆ ಯಥಾರ್ಥತೆಗೆ ಭಂಗ ಬರದಂತೆ, ಸೂಕ್ತ ಮುಖವರ್ಣಿಕೆಗಳಿಂದ ಅಭಿವ್ಯಕ್ತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ವರ್ಣಾಂಲಕಾರ ತಜ್ಞರು. ವರ್ಣಾಲಂಕಾರಕ್ಕೆ ಒಂದು ಹೊಸ ಭಾಷ್ಯ ಬರೆದವರು ಪ್ರಕಾಶ್‌ ಕುಂಜಿಬೆಟ್ಟು. ಚಿತ್ರಕಲಾ ಅಧ್ಯಾಪಕರಿಗೆ ನೂರಾರು ವಿದ್ಯಾರ್ಥಿಗಳಿಗೆ ಚಿತ್ರಕಲೆ ಕಲಿಸುವುದರೊಂದಿಗೆ ಆಸಕ್ತರಿಗೆ ತರಬೇತಿ ಕಮ್ಮಟ, ಪ್ರಾತ್ಯಕ್ಷಿಕೆಗಳಿಂದ ವರ್ಣಲಂಕಾರದ ಒಳ-ಹೊರಗನ್ನು ಕಲಿಸಿದ ವರು ಸುಮಾರು 35 ವರ್ಷಗಳಿಂದ ಕಲಾ ಸೇವೆ ಮಾಡುತ್ತಿದ್ದಾರೆ.

Advertisement

– ಜನನಿ ಭಾಸ್ಕರ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next