Advertisement

ಶ್ರೀಕೃಷ್ಣ ಮಠದಲ್ಲಿ “ಕೃಷ್ಣ ಪ್ರಸಾದ ಸೂರೆ’ !

12:24 AM Jan 18, 2020 | Sriram |

ಉಡುಪಿ: ಪರ್ಯಾಯದ ಕೊನೆಯ ದಿನ ನಡೆಯುವ “ಸೂರೆ’ ಎಂಬ ಆಚರಣೆ ಎಲ್ಲರ ಗಮನ ಸೆಳೆಯುತ್ತದೆ. ಅಂತಹ ಆಚರಣೆ ಪಲಿಮಾರು ಪರ್ಯಾಯದ ಅಂತಿಮ ದಿನವಾದ ಶುಕ್ರವಾರ ನಡೆಯಿತು.

Advertisement

ಪ್ರಸಾದ ಸೂರೆ ಮಾಡಿದ ಭಕ್ತರು!
ಮಧ್ಯಾಹ್ನದ ಅನ್ನ ಸಂತರ್ಪಣೆ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಭಕ್ತರು “ಸೂರೆ’ (ತೆಗೆದುಕೊಂಡು ಹೋಗುವುದು) ಮಾಡಿದರು. ಪಾಕಶಾಲೆಗೆ ಒಮ್ಮೆಗೆ ನುಗ್ಗಿದ ಭಾರೀ ಸಂಖ್ಯೆಯ ಜನ ದೊಡ್ಡ ಪಾತ್ರೆಯಲ್ಲಿದ್ದ ಅನ್ನ, ಸಾರು, ಪಾಯಸ, ಪಲ್ಯಗಳನ್ನು ಹೊತ್ತೂಯ್ದರು. ಪಾತ್ರೆ, ಬಕೆಟ್‌ಗಳಲ್ಲಿ ಆಹಾರ ಪದಾರ್ಥ ತುಂಬಿಸಿಕೊಂಡರು. ಕೆಲವೇ ನಿಮಿಷಗಳಲ್ಲಿ ಎಲ್ಲ ಆಹಾರ ಪದಾರ್ಥ ಖಾಲಿ ಆಯಿತು.

ಪ್ರವಾಸಿಗರಿಗೆ ಆಶ್ಚರ್ಯ
ಬಡಗು ಮಾಳಿಗೆಯಲ್ಲಿ ನಿಂತಿದ್ದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಇದನ್ನು ವೀಕ್ಷಿಸಿದರು. ಇನ್ನೂ ಈ ಆಚರಣೆಯ ಬಗ್ಗೆ ಅರಿವಿಲ್ಲದ ಪ್ರವಾಸಿಗರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. “ಸೂರೆ’ ಆಹಾರವನ್ನು ಕೃಷ್ಣ ಪ್ರಸಾದ ಎಂದೇ ಭಾವಿಸಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಅಂದರೆ ಮಠವೊಂದರ ಪರ್ಯಾಯದ ಅಂತಿಮ ದಿನ ಮಾತ್ರ ಈ ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ಮಠದ ಆಸುಪಾಸಿನವರು ಮಾತ್ರವಲ್ಲದೇ ದೂರದ ಕಡೆಗಳಿಂದ ಬಂದವರು ಸಹ ಸೂರೆಯಲ್ಲಿ ಭಾಗವಹಿಸಿದ ದೃಶ್ಯ ಕಂಡು ಬಂದಿತ್ತು.

ಕೃಷ್ಣ ಪ್ರಸಾದ
ಪಲಿಮಾರು ಪರ್ಯಾಯ ಅಂತಿಮ ದಿನದ ಅನ್ನಸಂತರ್ಪಣೆಯ ಅಂಗವಾಗಿ ಭಕ್ತರಿಗೆ ಮಧ್ಯಾಹ್ನ 12 ಗಂಟೆಯಿಂದ ಕೃಷ್ಣ ಪ್ರಸಾದಕ್ಕೆ ಅವಕಾಶ ಕಲ್ಪಿಸಲಾಯಿತು. ರಾಜಾಂಗಣ, ಅನ್ನ ಬ್ರಹ್ಮ, ಬಡಗುಮಾಳಿಗೆ ಸೇರಿದಂತೆ ವಿವಿಧ ಕಡೆಗಳಲ್ಲಿ ನೂರಾರು ಸ್ವಯಂಸೇವಕರು ಕೃಷ್ಣ ಪ್ರಸಾದ ವಿತರಿಸುತ್ತಿರುವ ದೃಶ್ಯಗಳು ಕಂಡು ಬಂದವು. ಮಧ್ಯಾಹ್ನ ಊಟಕ್ಕೆ ಗೋಧಿ ಬರ್ಫಿ, ಕಾಳು ಲಡ್ಡು, ಅಕ್ಕಿ ವಡೆ, ಗೋಧಿ ಪಾಯಸ, ಮಟ್ಟುಗುಳ್ಳ ಹುಳಿ, ಸಾಂಬಾರು, ಅಲಸಂಡೆ, ಸುವರ್ಣ ಗಡ್ಡೆ ಪಲ್ಯವನ್ನು ಭಕ್ತರಿಗೆ ಬಡಿಸಲಾಯಿತು. ಸುಮಾರು 20 ಸಾವಿರ ಭಕ್ತರು ಕೃಷ್ಣ ಪ್ರಸಾದ ಸ್ವೀಕರಿಸಿದರು.

ತಲೆತಲಾಂತರದ ನಂಬಿಕೆ
ತಲೆತಲಾಂತರದಿಂದ ನಮ್ಮ ಹಿರಿಯರು ಸೂರೆಯಲ್ಲಿ ಭಾಗವಹಿಸುತ್ತಿದ್ದರು. “ಸೂರೆ’ ಆಹಾರವನ್ನು ಕೃಷ್ಣ ಪ್ರಸಾದ ಎನ್ನುವ ನಂಬಿಕೆ. ಈ ನಿಟ್ಟಿನಲ್ಲಿ ಕಳೆದ 5 ಪರ್ಯಾಯದ ಸೂರೆ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ.
-ಆರತಿ ಭಾಸ್ಕರ್‌, ತೆಂಕಪೇಟೆ.

Advertisement

ಕೃಷ್ಣ ಪ್ರಸಾದಕ್ಕೆ 20,000 ಭಕ್ತರು
ಪಲಿಮಾರು ಪರ್ಯಾಯದ ಅಂತಿಮ ದಿನವಾದ ಇಂದು ಸುಮಾರು 20,000 ಭಕ್ತರು ಕೃಷ್ಣ ಪ್ರಸಾದ ಸ್ವೀಕರಿಸಿದ್ದಾರೆ.
-ಶ್ರೀಶ ಭಟ್‌, ಪಲಿಮಾರು ಮಠದ ಪಿಆರ್‌ಒ

Advertisement

Udayavani is now on Telegram. Click here to join our channel and stay updated with the latest news.

Next