Advertisement

ಕೃಷ್ಣ ಪದ್ಯಗಳು

06:55 AM Aug 13, 2017 | |

ಬಗೆಯೇ ಹರಿ
ಬಗೆ ಬಗೆಯಲಿ ಹೇಳಿಕೊಂಡೆ
ಬಗೆ ಹರಿಯಲಿ ಎಂದು
 
ಬಗೆ ಬಗೆಯಲಿ ತೋರಿಕೊಂಡೆ
ತೋಡಿಕೊಂಡೆ ಬಗೆಬಗೆಯಲಿ
ಬಗೆ ಹರಿಯಲಿ ಎಂದು

Advertisement

ಬಗೆ ಬಗೆಯಲಿ ಹಾಡಿ ಕಳೆದೆ
ಬಗೆಯ ರಾಗ ಆಯ್ದು ಹೆಕ್ಕಿ
ಬಗೆಯೇ ಕಳೆ ಎಂಬ ಮನವಿ
ವಿವಿಧ ಬಗೆಯ ಬರೆದೆ

ಬಗೆಯ ಬಗೆಯ ಚಿತ್ರ ಬಿಡಿಸಿ
ಬಗೆ ಬಗೆಯಲಿ ಬಣ್ಣ ಬಳಸಿ
ಅಮೂರ್ತಗಳ ಹಂಗು ಕಳಚಿ
ಮೂರ್ತಗೊಳಿಸಿದೆ
ಸೂಚ್ಯಾರ್ಥದ ಬೀಗ ಒಡೆದು 
ವಾಚ್ಯಗೊಳಿಸಿದೆ
ಹರಿಯಲಿ ಬಗೆ ಬೇಗ ಎಂದು 
ಪ್ರಾರ್ಥನೆ ಕುಳಿತೆ

ಹರಿಯದ ಬಗೆ ಹರಿವ ಕಂಡು
ಮೂರ್ಛೆ ಹೋದೆ

ಬಗೆ ಕಾಣದೆ ಎದೆ ಬಗೆದು ನಿಂತು 
ಬಗೆಯೆಹರಿ 
ಬಗೆಯೇಹರಿ 
ಬಗೆಯೇ ಹರಿ! ಎಂದೆ ! 

Advertisement

ಗೊಣಗಾಟ

ನಾ
ಈಶ್ವರನೆಂದೆಣಿಸಿ ಕರೆದೆ
ನೋಡಿದರಾತ ಕೃಷ್ಣ
ಜಗದ ನಾರಿಯರೆಲ್ಲ
ತನ್ನ
ಮಡದಿಯರೆಂದ
ಭಂಡ!

ಮಂಗಳಾರತಿ ಮಾಡಬೇಕಿತ್ತು
ಮನಸು ಕೇಳುವುದಿಲ್ಲ
ನಂಬುವುದಿಲ್ಲ ಬಹುಶಃ
ಹರಿಮಾಯಕದಿಂದ
ಕೊಟ್ಟು ಲಂಚದ ಮುತ್ತು
ಒಳಗು ಮಾಡಿಕೊಂಡ.

ಏನು ಮಾಡಲಿ ನಾನು?
ಕೃಷ್ಣ ಕಿಂಡಿಯಲಿ ಗೋಪಿ
ಚಂದನದ ಗೊಂಬೆಗೆ
ಬೈಗಳ ತೂರಿಸಿ
ತೀರ್ಥ ಕುಡಿದು ದಣಿವಾರಿಸಿ
ಒರೆಸಿಕೊಳ್ಳುವೆನು
ತೃಪ್ತಿಯ ಗಂಧ

ಎಂದು ಹಾಡುತ್ತ ಕಡೆಗೋಲು ಮೂಲೆಯಲಿ
ಗೊಣಗಿದಳು ಗೋಪಬಾಲೆ    

ಕನಕನ ತಂಗಿ ಮತ್ತು ದೇವರು

ಏಳು ಮಲೆಯೊಡೆಯನ್ನ
ನೋಡ ಹೋದಳು ಹುಡುಗಿ
ಮುಂದೆ ದಬ್ಬಿದರು- ಹಿಂದಿ
ನಿಂದಲೂ ಇದ್ದವರು

ಭಲೇ ಹಿಂದಿನವರೇ !
ಕಂಡನೇ ವೆಂಕಟಾಚಲವಾಸ
ನಿಮಗೆ?

ಇತ್ತೇ ನನ್ನ ದೂಡಲು ಅವನ
ಪ್ರೇರಣೆ?
ಪ್ರಶ್ನೆಯ ಮೇಲೆ ಪ್ರಶ್ನೆ
ಕೇಳುವ ಹುಡುಗಿ,
ಕನಕನ ತಂಗಿ!
ಇತ್ತು ಅಲ್ಲಿಯೂ ಒಂದು
ಚೌಕಳಿ ಕಂಡಿ !

ಕಂಡಿರಾ? ತಿರುಪತಿಯ ದೇವರೇ
ತಿರುಗಿ
ಕಂಡಿಯಲ್ಲಿಣಿಕಿ
ಶಂಖ ಚಕ್ರವ ಬಿಸುಟು
ಕೊಳಲನೂದಿ ಕರೆದ
ರೀತಿ!
ಕಣ್ಣೀರು ಚೆಲ್ಲಿ ನೆನೆದಳು ಹುಡುಗಿ
ಹೇ ಕೃಷ್ಣ
ಹೇ ಯಾದವ
ಹೇ ಸಖೇತಿ!

ಗೋಪಿರ್ಕಿತನ 

ಕರೆವ ಕೊಳಲಿಗೆ ಮನ
ಉರಿವ ಒಲೆ ಕಡೆ ಗಮನ
ಹೊರಟು ಒಳ ನಿಂತಿರುವ
ಆಪ್ಯಾಯಮಾನ ಗೋಪಿರ್ಕಿತನ 
ಗೊತ್ತೆ?

ಆಕೆಯನೆ ಕೇಳಿ
ಯಮುನಾ ತೀರದಲಿ 
ಅಲೆವವನೇ ಶುಭಮಸ್ತು
ಎನ್ನುತ್ತ ಒಗ್ಗರಣೆ ಮೆಣಸು 
ರುಂಂಂಯn ಚಿವುಟಿದಳು

ಪ್ರಾಣಸಖ ಕ್ಷಮಿಸೆಂದಳು.

ರಂಗಪೂಜೆ

ಗೋಪಿ ಗುಡಿಸಲಿನಲಿ ಅಂದು
ವಿಶೇಷ ಪೂಜೆ
ವಾಚಾಲಿಯನ್ನು ಮೂಗಿಯಾಗಿಸಿದ 
ಕೃಷ್ಣಾಯ ತುಭ್ಯಂ ನಮಃ ಮಂತ್ರ
ಮಧುರಾಷ್ಟಕ ಜೊತೆಗೆ ಮಂದಾರ ತುಲಸಿ
ರತ್ನಗಂಧಿ ಧೂಪ ದೀಪ ನೈವೇದ್ಯ
ಏಕಾ ಅನೇಕಾರತಿ

ನಡೆಯುತಿದೆ, ಅಹೊಅಹೋ
ಎಲ್ಲಿಂದಲೋ ಮುರಲಿ
ಮೋಹನರಾಗ ಬರುತಿದೆ ತೇಲಿ  

ತಕ್ಷಣವೆ ಆವರಿಸಿ ಪರವಶತೆ ಅಕಟಾ
ಬಾಷ್ಪವಾರಿಯ ಚಿಮುಚಿಮುಕಿಸಿ
ತೊಳೆಯಬಹುದೇ ವಿರಹ 
ಕೃಷ್ಣಾರ್ಪಣವೆನುತ ಕೈಯ
ಮುಗಿಯ ಬಹುದೇ ಆ
ಮಂತ್ರ-ಮುಗ್ಧ ಮರುಳಿ?

ವೈದೇಹಿ
 

Advertisement

Udayavani is now on Telegram. Click here to join our channel and stay updated with the latest news.

Next