ಮಂಗಳೂರು: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರ ಭಾವಚಿತ್ರವನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮೊನ್ನೆಯಷ್ಟೇ ತೆರವುಗೊಳಿಸಿ ವಿವಾದ ಸೃಷ್ಟಿಸಿದರೆ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಫೋಟೋಗಳ ಸಾಲಿನಲ್ಲಿದ್ದ ಎಸ್.ಎಂ. ಕೃಷ್ಣ ಅವರ ಭಾವಚಿತ್ರವನ್ನು ಮೂರು ತಿಂಗಳ ಹಿಂದೆಯೇ ತೆಗೆಯಲಾಗಿತ್ತು. ಬೆಂಗಳೂರಿನಲ್ಲಿ ಚಿತ್ರವನ್ನು ಶನಿವಾರ ತತ್‌ಕ್ಷಣ ಮರುಸ್ಥಾಪಿಸಲಾಗಿದೆಯಾದರೆ ಮಂಗಳೂರಿನಲ್ಲಿ ಇಂದಿಗೂ ಆ ಜಾಗ ಖಾಲಿ ಯಾಗಿಯೇ ಇದೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯು ಹಂಪನಕಟ್ಟೆಯಿಂದ ಕೆಲವು ತಿಂಗಳ ಹಿಂದೆ ಕದ್ರಿ ಮಲ್ಲಿಕಟ್ಟೆಯಲ್ಲಿ ನೂತನ
ವಾಗಿ ನಿರ್ಮಾಣಗೊಂಡ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ನೂತನ ಕಚೇರಿಯ ಕೆಳ ಅಂತಸ್ತಿನ ಗೋಡೆಯಲ್ಲಿ ಸ್ವಾತಂತ್ರಾéನಂತರ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು (ಕಾಂಗ್ರೆಸ್ ಲೀಡರ್ ಯ್ನಾಸ್ ಎ ಚೀಫ್ ಮಿನಿಸ್ಟರ್ ಶೀರ್ಷಿಕೆಯಲ್ಲಿ) ಹಾಕಲಾಗಿತ್ತು. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದಾದ ಕೆಲವು ದಿನಗಳ ಬಳಿಕ ಈ ಭಾವಚಿತ್ರಗಳ ಸಾಲಿನಲ್ಲಿದ್ದ ಕೃಷ್ಣ ಅವರ ಭಾವಚಿತ್ರವನ್ನು ಕಾರ್ಯಕರ್ತರು ತೆಗೆದುಹಾಕಿದ್ದರು.
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ತತ್‌ಕ್ಷಣ ಕೃಷ್ಣ ಅವರ ಚಿತ್ರವನ್ನು ಮತ್ತೆ ಆದೇ ಜಾಗದಲ್ಲಿ ಇರಿಸಿ ಈ ಘಟನೆ ಬೇರೆ ಆಯಾಮಗಳನ್ನು ಪಡೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ತಮ್ಮ ಕ್ರಮವನ್ನು ಸಮರ್ಥಿಸಿರುವ ಪರಮೇಶ್ವರ್ ಅವರು ಎಸ್.ಎಂ. ಕೃಷ್ಣ ಅವರು ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ ಅವರ ಮೇಲೆ ನಮಗೆ ಗೌರವ ಇದೆ ಎಂದು ವಿವರಣೆ ನೀಡಿದ್ದಾರೆ. ಇದರ ಜತೆಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಎಸ್.ಎಂ. ಕೃಷ್ಣ ಅವರ ಭಾವಚಿತ್ರವನ್ನು ತೆಗೆದವರನ್ನು ಪಕ್ಷದಿಂದ ವಜಾ ಮಾಡಲಾಗುವುದು ಎಂಬುದಾಗಿಯೂ ತಿಳಿಸಿದ್ದಾರೆ.
ಪಿಸಿಸಿ ಕಚೇರಿಯಲ್ಲಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳ ಭಾವಚಿತ್ರಗಳ ಸಾಲಿನಿಂದ ಅಳಿಸಿ ಹಾಕಿರುವ ಎಸ್.ಎಂ. ಕೃಷ್ಣ ಅವರ ಭಾವಚಿತ್ರವನ್ನು ಮತ್ತೆ ಅಳವಡಿಸಬಹುದೇ ಅಥವಾ ಇದನ್ನು ಯಾರಾದರೂ ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದರೆ ಮತ್ತೆ ಅಳವಡಿಸಲು ಸೂಚಿಸಬಹುದೇ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಬಿಜೆಪಿ ಸೇರಿರುವ ಎಸ್.ಎಂ. ಕೃಷ್ಣ ಅವರ ಭಾವ ಚಿತ್ರವನ್ನು ಕಾಂಗ್ರೆಸ್ ಕಚೇರಿಯಲ್ಲಿ ಹಾಕುವುದಕ್ಕೆ ದ.ಕ. ಜಿಲ್ಲೆಯಲ್ಲೂ ಕಾರ್ಯಕರ್ತರಿಂದ ಪ್ರಬಲವಾಗಿ ವಿರೋಧ ವ್ಯಕ್ತವಾಗಿದೆ.
ಕಾರ್ಯಕರ್ತರ ಕ್ರಮಕ್ಕೆ ಕೆಪಿಸಿಸಿ ಗರಂ
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷರ ಸಾಲಿನಲ್ಲಿ ಎಸ್.ಎಂ. ಕೃಷ್ಣ ಅವರ ಚಿತ್ರವನ್ನು ಕಾರ್ಯಕರ್ತರು ತೆರವುಗೊಳಿಸಿರುವ ಕ್ರಮಕ್ಕೆ ಕಾಂಗ್ರೆಸ್ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರಿದವರ ಭಾವಚಿತ್ರ ಕಾಂಗ್ರೆಸ್ ಕಚೇರಿಯಲ್ಲೇಕೆ ಎಂಬುದು ತೆರವುಗೊಳಿಸಿರುವ ಕಾರ್ಯಕರ್ತರ ಅಭಿಪ್ರಾಯವಾಗಿತ್ತು. ಆದರೆ ಇದನ್ನು ಒಪ್ಪದ ಎಐಸಿಸಿ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅವರು ಕಾರ್ಯಕರ್ತರ ಕ್ರಮವನ್ನು ಖಂಡಿಸಿ ಕೃಷ್ಣ ಅವರ ಚಿತ್ರವನ್ನು ಮೊದಲಿದ್ದ ಸ್ಥಳದಲ್ಲೇ ಹಾಕುವಂತೆ ಸೂಚಿಸಿದರು.