ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿಂದ ಹನುಮ ಜಯಂತಿ ಉತ್ಸವವು ವಾಯುಸ್ತುತಿ ಪುನಶ್ಚರಣೆ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮ, ಶ್ರೀಕೃಷ್ಣ ಶ್ರೀ ಮುಖ್ಯಪ್ರಾಣ ದೇವರಿಗೆ ವಜ್ರಕವಚ ಸೇವೆ ಮತ್ತು ವಿಶೇಷವಾಗಿ ಭೋಜನಶಾಲೆಯ ಶ್ರೀ ಮುಖ್ಯಪ್ರಾಣ ದೇವರಿಗೆ ಸಾವಿರ ಸುವರ್ಣ ನಾಣ್ಯಗಳ ಅಭಿಷೇಕದೊಂದಿಗೆ ಶನಿವಾರ ಸಂಪನ್ನಗೊಂಡಿತು.
ಪ್ರಾಣದೇವರಿದ್ದರೆ ಬದುಕು: ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಹನುಮ ದೇವರು ಎಲ್ಲವನ್ನೂ ಕೊಡುವ ದೇವರು. ನಮ್ಮ ಉಸಿರಾಟ ಮಾಡಿಸುವ ವಾಯುದೇವರು. ಹನುಮಂತ ದೇವರು ನಮ್ಮ ಜತೆಗಿರುವಷ್ಟು ದಿನ ನಮ್ಮ ಬದುಕು ಶಾಶ್ವತವಾಗಿರುತ್ತದೆ. ಹಾಗಾಗಿ ಹನುಮ ಜಯಂತಿ ಎಂದರೆ ಅದು ಹನುಮಂತ ದೇವರ ಜಯಂತಿ ಮಾತ್ರವಲ್ಲ, ನಮ್ಮೆಲ್ಲರದು ಕೂಡ. ಹನುಮ ಜಯಂತಿಯ ಈ ಪರ್ವಕಾಲದಲ್ಲಿ ದೇವರು ಲೋಕಕ್ಕೆ ಒಳಿತನ್ನು ಮಾಡಲಿ. ರಾಜ್ಯದಲ್ಲಿ ಸುಭದ್ರ ಸರಕಾರ ರಚನೆಯಾಗುವಂತೆ ಮಾಡಲಿ ಎಂದು ಹೇಳಿದರು.
ಉಡುಪಿಯಲ್ಲಿ ಪ್ರಾಣದೇವರ ಪ್ರಸಾದ ವಿಶಿಷ್ಟ: ಶ್ರೀಕೃಷ್ಣ ಮಠದಲ್ಲಿ ಭೋಜನ ಶಾಲೆಯ ಪ್ರಾಣ ದೇವರು ವಿಶಿಷ್ಟ. ಬೇರೆ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಅನ್ನಪ್ರಸಾದವನ್ನು ಎಲೆ ಅಥವಾ ತಟ್ಟೆಯಲ್ಲಿ ಸ್ವೀಕರಿಸಲಾಗುತ್ತದೆ. ಆದರೆ ಉಡುಪಿ ಮುಖ್ಯಪ್ರಾಣನ ಸನ್ನಿಧಾನದಲ್ಲಿ ನೆಲವನ್ನು ಸ್ವತ್ಛ ಮಾಡಿ ಅಲ್ಲೇ ದೇವರ ಪ್ರಸಾದ ಸ್ವೀಕರಿಸುವ ಕ್ರಮವೂ ಇದೆ. ಅಡುಗೆ ಮಾಡುವವರು, ಓಡಾಡುವವರು ಪ್ರಾಣದೇವರೇ ಆಗಿದ್ದಾರೆ. ಮಾತ್ರವಲ್ಲದೆ ಅನ್ನದ ಒಂದೊಂದು ಅಗುಳಿನಲ್ಲಿಯೂ ಪ್ರಾಣದೇವರಿದ್ದಾರೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಇಲ್ಲಿನ ಅನ್ನಪ್ರಸಾದಕ್ಕೆ ವಿಶೇಷ ಮಹತ್ವ ಬಂದಿದೆ ಎಂದು ಶ್ರೀಗಳು ಹೇಳಿದರು.
ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಹರಿವಾಯುಸ್ತುತಿ ಪುನಶ್ಚರಣೆ ಪುರಸ್ಸರವಾದ ಮಧು ಅಭಿಷೇಕ ಮಾಡಿದರು. ಅನಂತರ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಧು ಅಭಿಷೇಕ ಹಾಗೂ ಒಂದು ಸಾವಿರ ಸ್ವರ್ಣ ನಾಣ್ಯಗಳ ಅಭಿಷೇಕ ಮಾಡಿ ಮಹಾಪೂಜೆ ನೆರವೇರಿಸಿದರು. ಹನುಮ ಜಯಂತಿ ಪ್ರಯುಕ್ತ ನಡೆದ ಹಾಲುಪಾಯಸ ಸಹಿತ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ 28,000ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ಬ್ರಹ್ಮರಥ, ಸ್ವರ್ಣರಥ, ನವರತ್ನ ರಥ ಸೇವೆ ಜರಗಿತು.
ಸ್ವರ್ಣಗೋಪುರಕ್ಕೆ ಸುವರ್ಣ ನಾಣ್ಯ ಅರ್ಪಣೆ ಅವಕಾಶ
ಹನುಮ ಜಯಂತಿಯಂದು ಪ್ರಾಣದೇವರಿಗೆ ಸಾವಿರ ಸ್ವರ್ಣ ನಾಣ್ಯಗಳ ಅಭಿಷೇಕ ನಡೆದಿದೆ. ಇದನ್ನು ಅಕ್ಷಯ ತೃತೀಯಾದಂದು ಸೇವಾಕರ್ತರಾಗುವ ಭಕ್ತರಿಗೆ ನೀಡಲಾಗುವುದು. ಇವು ಬೆಲೆ ಕಟ್ಟಲಾಗದ, ಅಮೂಲ್ಯ ಸುವರ್ಣ ನಾಣ್ಯಗಳು. ಪ್ರತಿಯೊಂದು ನಾಣ್ಯ ಕೂಡ ಸುಮಾರು ಒಂದು ಗ್ರಾಂ ತೂಕವಿದೆ. ಇದನ್ನು ಭಕ್ತರು ಖರೀದಿಸಿ ಶ್ರೀಕೃಷ್ಣ ದೇವರ ಸುವರ್ಣ ಗೋಪುರ ನಿರ್ಮಾಣಕ್ಕೆ ಸಮರ್ಪಿಸುವ ಅಪೂರ್ವ ಅವಕಾಶ ಮಾಡಿಕೊಡಲಾಗುತ್ತದೆ. ಭಕ್ತರು ಈ ಪುಣ್ಯಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಪರ್ಯಾಯ ಶ್ರೀಗಳು ಹೇಳಿದರು.