Advertisement

ಕೃಷ್ಣ – ಕುಚೇಲರ ಸ್ನೇಹ ಇಂದಿಗೂ ಮಾದರಿ -ಆಸ್ತಿ, ಅಂತಸ್ತು, ಜಾತಿಗಳನ್ನು ಮೀರಿದ ಬಂಧ ಸ್ನೇಹ

01:54 PM Feb 24, 2024 | Team Udayavani |

ಸ್ನೇಹದಲ್ಲಿ ಯಾವುದೇ ಲೆಕ್ಕಾಚಾರವಿಲ್ಲ. ಅದು ಹಣ, ಜಾತಿಗಳನ್ನು ಮೀರಿದ ಬಂಧ. ಇದಕ್ಕೆ ಉದಾಹರಣೆ ಕೃಷ್ಣ – ಕುಚೇಲರ ಸ್ನೇಹ. ಇವರದ್ದು ನಿಷ್ಕಲ್ಮಶ ಸ್ನೇಹ. ಅಜಗಜಾಂತರ ವ್ಯತ್ಯಾಸಗಳಿರುವ ಕೃಷ್ಣ ಮತ್ತು ಕುಚೇಲರ ಸ್ನೇಹಕ್ಕೆ ಅಂತಸ್ತು, ಜಾತಿ ಅಡ್ಡಿಯಾಗಲಿಲ್ಲ. ಆದ್ದರಿಂದಲೇ ಇಂದಿಗೂ ಕೃಷ್ಣ – ಕುಚೇಲರ ಸ್ನೇಹ ಎಲ್ಲರಿಗೂ ಮಾದರಿಯಾಗಿದೆ.

Advertisement

ಸ್ನೇಹ ಎನ್ನುವುದಕ್ಕೆ ಯಾವುದೇ ಬೇಧವಿಲ್ಲ. ಆ ಸಂಬಂಧದಲ್ಲಿ ಬರುವುದು ಕೇವಲ ಪ್ರೀತಿ ಹಾಗೂ ಸಹಾಯ. ಜೀವನದ ಕೆಲವು ಕಷ್ಟದ ಸಂದರ್ಭದಲ್ಲಿ ಬಂಧುಗಳು ಸಹಾಯ ಮಾಡದಿದ್ದರೂ ಸ್ನೇಹಿತರು ಸಹಾಯ ಮಾಡುತ್ತಾರೆ. ಉತ್ತಮ ಸ್ನೇಹದಿಂದಲೇ ಎಷ್ಟೋ ಜನರು ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಸ್ನೇಹ ಎನ್ನುವುದು ಇಂದು ನಿನ್ನೆಯ ವಿಚಾರವಲ್ಲ. ಮಹಾ ಪುರಾಣ ಕಥೆಗಳಲ್ಲೂ ದೇವಾನು ದೇವತೆಗಳು ಉತ್ತಮ ಸ್ನೇಹಿತರನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ಅವರ ಸ್ನೇಹ ಸಂಬಂಧಗಳೇ ಇಂದಿಗೂ ಮನುಜ ಕುಲಕ್ಕೊಂದು ದಾರಿದೀಪ ಎನ್ನಬಹುದು.

ಇಂತಹ ಒಂದು ಅದ್ಭುತವಾದ ನಿಷ್ಕಲ್ಮಷವಾದ ಸ್ನೇಹ ಎಂದರೆ ಶ್ರೀಕೃಷ್ಣ ಮತ್ತು ಸುದಾಮನದ್ದು. ಇವರ ಸ್ನೇಹ ಸಂಬಂಧವು ಒಂದು ಉತ್ತಮ ಸಂದೇಶವನ್ನು ನೀಡುವುದು. ಭಗವಾನ್‌ ಶ್ರೀಕೃಷ್ಣ ಮತ್ತು ಸುದಾಮ(ಕುಚೇಲ) ಇಬ್ಬರು ಆಚಾರ್ಯ ಸಂದೀಪನ್‌ ಅವರ ಆಶ್ರಮದಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು.

ಒಂದು ದಿನ ಶ್ರೀಕೃಷ್ಣ ಮತ್ತು ಸುದಾಮ ಇಬ್ಬರು ದಟ್ಟ ಅರಣ್ಯವೊಂದರ ಒಳಕ್ಕೆ ಹೋಗಿದ್ದರು. ಅಲ್ಲಿ ಸಾಕಷ್ಟು ಸಮಯಗಳನ್ನು ಕಳೆದರು. ಇಬ್ಬರು ಮಾತನಾಡಿಕೊಳ್ಳುತ್ತಾ, ಅಲ್ಲಿಯ ವಾತಾವರಣವನ್ನು ಸವಿಯುತ್ತಾ ಸಾಗುತ್ತಿದ್ದರು. ಹೀಗೆ ಹೋಗುತ್ತಿರುವಾಗ ಶ್ರೀಕೃಷ್ಣನಿಗೆ ಹಸಿವಾಗಲು ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಸುದಾಮನ ಬಳಿ ಸ್ವಲ್ಪ ಅವಲಕ್ಕಿ ಇತ್ತು. ಅವರು ಆಶ್ರಮದಿಂದ ಕಾಡಿಗೆ ತೆರಳುವಾಗ ಗುರು ಸಂದೀಪನ್‌ ಅವರ ಪತ್ನಿ ನೀಡಿದ್ದರು. ಜತೆಗೆ ಇಬ್ಬರೂ ಹಂಚಿಕೊಂಡು ತಿನ್ನಬೇಕು ಎಂದು ಹೇಳಿದ್ದರು. ಆದರೆ ಸುದಾಮನು ತನ್ನ ಕೈಯಲ್ಲಿದ್ದ ತಿಂಡಿಯನ್ನು ಶ್ರೀಕೃಷ್ಣನ ಬಳಿ ಹಂಚಿಕೊಂಡಿರಲಿಲ್ಲ. ಶ್ರೀಕೃಷ್ಣನು ಬಹಳ ಹಸಿವಾಗುತ್ತಿದೆ. ನಿನ್ನ ಬಳಿ ತಿನ್ನಲು ಏನಾದರೂ ಇದೆಯಾ? ಎಂದು ಕೇಳಿದನು. ಆಗ ಸುದಾಮ ತನ್ನ ಬಳಿ ಅವಲಕ್ಕಿ ಇದೆ ಎನ್ನುವುದನ್ನು ಹೇಳದೆ ಸುಮ್ಮನಾದನು. ಸ್ವಲ್ಪ ಸಮಯದ ಅನಂತರ ಕೃಷ್ಣನು ಸುದಾಮನ ತೊಡೆಯ ಮೇಲೆ ಮಲಗಿದನು. ಕೃಷ್ಣ ಮಲಗಿದ ಅನಂತರ ಸುದಾಮನು ಅವಲಕ್ಕಿಯನ್ನು ತಿನ್ನಲು ಪ್ರಾರಂಭಿಸಿದನು. ಕೃಷ್ಣನು ಕಣ್ಣು ಮುಚ್ಚಿಕೊಂಡೇ ಸುದಾಮನಲ್ಲಿ ಏನನ್ನು ತಿನ್ನುತ್ತಿರುವೆ? ಎಂದು ಕೇಳಿದನು. ಆಗ ಸುದಾಮ ಏನು ಇಲ್ಲ, ಈ ಚಳಿಗೆ ತನ್ನ ಹಲ್ಲುಗಳು ನಡುಗುತ್ತಿವೆ. ಅದರ ಶಬ್ದ ನಿನಗೆ ಏನೋ ತಿನ್ನುತ್ತಿರುವಂತೆ ಕೇಳಿಸುತ್ತಿದೆ ಎಂದು ಹೇಳಿದನು.

ಆಗ ಕೃಷ್ಣನು ಸುದಾಮನಿಗೆ ಇಬ್ಬರು ಸ್ನೇಹಿತರ ಕಥೆಯನ್ನು ಹೇಳಿದನು. ಇಬ್ಬರು ಸ್ನೇಹಿತು ಹೀಗೆ ಹೊರಗಡೆ ಬಂದಾಗ ಒಬ್ಬನು ತುಂಬಾ ಹಸಿದಿದ್ದನು. ಇನ್ನೊಬ್ಬನು ತಿನ್ನಲು ಆಹಾರವನ್ನು ಹೊಂದಿದ್ದನು. ಅವನು ಕದ್ದು ಮುಚ್ಚಿ ತಿನ್ನುವಾಗ ಹಸಿದ ಸ್ನೇಹಿತ ತಿನ್ನಲು ಏನಿದೆ? ಎಂದು ಕೇಳಿದಾಗ ಅವನ ಸ್ನೇಹಿತ “ಇಲ್ಲಿ ತಿನ್ನಲು ಏನಿರುತ್ತದೆ ಬರೀ ಮಣ್ಣು’ ಎಂದನು.

Advertisement

ಆಗ ದೇವರು ತಥಾಸ್ತು ಎಂದು ಹರಸಿದನು ಎಂದು ಹೇಳಿದನು. ಹೀಗೆಯೇ ಸುದಾಮನು ಶ್ರೀಕೃಷ್ಣನಿಗೆ ತಿಂಡಿಯನ್ನು ಹಂಚಿಕೊಳ್ಳದೆ ಇರುವುದಕ್ಕಾಗಿ ತನ್ನ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಯಿತು. ಬಡತನವು ಅವನನ್ನು ಕಿತ್ತು ತಿನ್ನುವಂತಾಗಿತ್ತು. ಈ ಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ ಹಸಿದ ಮನುಷ್ಯ ಹಾಗೂ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ನಮ್ಮ ಸುತ್ತಲೂ ದೇವರು ಇರುತ್ತಾನೆ. ನಾವು ಏನನ್ನಾದರೂ ತಿನ್ನುವಾಗ ನಮ್ಮ ಸುತ್ತಲಿರುವವರಿಗೆ ಕೊಟ್ಟು ತಿನ್ನಬೇಕು.ಸುದಾಮನು ಬಹಳ ಬಡ ಕುಟುಂಬದಿಂದ ಬಂದವನಾಗಿದ್ದನು. ಕೃಷ್ಣ ಶ್ರೀಮಂತ ಮನೆಯಿಂದ ಬಂದವನು. ಇವರಿಬ್ಬರ ನಡುವೆ ಸಾಮಾಜಿಕವಾದ ವ್ಯತ್ಯಾಸ ಇದ್ದರೂ ಇವರ ಸ್ನೇಹ ಮಾತ್ರ ಉತ್ತಮವಾಗಿತ್ತು. ಇಬ್ಬರೂ ವಿದ್ಯಾಭ್ಯಾಸ ಮುಗಿಸಿ, ಮರಳಿದ ಮೇಲೆ ಸಂಪರ್ಕಗಳನ್ನು ಕಳೆದುಕೊಂಡಿದ್ದರು.

ಸುದಾಮನಿಗೆ ವಿವಾಹವಾಗಿತ್ತು. ಆತ ಕಷ್ಟದ ಜೀವನ ನಡೆಸುತ್ತಿದ್ದನು. ಬಡತನದಿಂದಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವುದು ಕಷ್ಟವಾಗಿತ್ತು. ಊಟಕ್ಕೂ ಹಣವಿಲ್ಲದೆ ಕಷ್ಟಪಡುತ್ತಿದ್ದನು. ಆಗ ಅವನ ಹೆಂಡತಿ ಸುಶೀಲ ಸುದಾಮನಿಗೆ ಗೆಳೆಯ ಶ್ರೀಕೃಷ್ಣನ ಸಹಾಯ ಪಡೆಯಲು ನೆನಪಿಸಿದಳು. ಹೆಂಡತಿಯ ಮಾತಿಗೆ ಒಪ್ಪಿಕೊಂಡ ಸುದಾಮ ಕೃಷ್ಣನನ್ನು ಭೇಟಿಯಾಗಲು ಸಿದ್ಧನಾದನು. ಗೆಳೆಯನನ್ನು ಭೇಟಿಯಾಗಿ ಕೊಡಲು ಸುದಾಮನ ಬಳಿ ಏನೂ ಇರಲಿಲ್ಲ. ಕೃಷ್ಣನಿಗೆ ಇಷ್ಟವಾದ ಅವಲಕ್ಕಿ ಮನೆಯಲ್ಲಿ ಸ್ವಲ್ಪ ಇರುವುದು ನೆನಪಾಯಿತು. ಅದನ್ನೇ ಕೊಡಲು ನಿರ್ಧರಿಸಿ, ಕೊಂಡೊಯ್ದನು. ಕೃಷ್ಣನನ್ನು ಭೇಟಿಯಾದನು. ಹಳೆಯ ಸ್ನೇಹಿತನನ್ನು ಕಂಡು ಕೃಷ್ಣ ಬಹಳ ಸಂತೋಷಪಟ್ಟನು. ಕೃಷ್ಣನು ಸುದಾಮನಿಗೆ ಪ್ರೀತಿಯಿಂದ ಸತ್ಕಾರವನ್ನು ನೀಡಿದನು.

ಮೃಷ್ಟಾನ್ನ ಭೋಜನವನ್ನು ಸ್ವೀಕರಿಸಿದ ಸುದಾಮನು ಸ್ನೇಹಿತನಲ್ಲಿ ತನ್ನ ಕಷ್ಟವನ್ನು ಹೇಳದೆ ಸುಮ್ಮನಾದನು. ಜತೆಗೆ ತಾನು ತಂದ ಅವಲಕ್ಕಿಯನ್ನು ಕೊಡಲು ಹಿಂಜರಿದನು. ಆದರೆ ಸುದಾಮನ ಸ್ಥಿತಿ ಹಾಗೂ ಮನದಿಂಗಿತವನ್ನು ಅರಿತ ಕೃಷ್ಣನು, ಸುದಾಮನಲ್ಲಿ ಅವಲಕ್ಕಿಯನ್ನು ಕೇಳಿ ಪಡೆದನು. ಜತೆಗೆ ರುಕ್ಷ್ಮಿಣಿಯ ಬಳಿ ಲಕ್ಷ್ಮೀಯ ಅವತಾರ ತಾಳಿ, ಸುದಾಮನ ಕಷ್ಟಗಳನ್ನು ಪರಿಹರಿಸಲು ಹೇಳಿದನು.

ಬಂದಿರುವ ವಿಚಾರವನ್ನು ಕೃಷ್ಣನಿಗೆ ಹೇಳದೆಯೇ ಮನೆಗೆ ಹಿಂತಿರುಗಿದನು. ಆದರೆ ಸುದಾಮನು ಮನೆಗೆ ಬರುವಷ್ಟರಲ್ಲಿ ಮನೆಯ ಪರಿಸ್ಥಿತಿಗಳು ಬದಲಾಗಿದ್ದವು. ಹೆಂಡತಿ ಮಕ್ಕಳು ಉತ್ತಮ ಬಟ್ಟೆಯನ್ನು ತೊಟ್ಟಿದ್ದರು. ಜತೆಗೆ ಮನೆಯ ಸುಧಾರಣೆ ಹಾಗೂ ಬಡತನವು ನಿವಾರಣೆಯಾಗಿತ್ತು. ಉತ್ತಮ ಸ್ಥಿತಿಯಿಂದ ಕುಟುಂಬವು ಸುದಾಮನ ಆಗಮನಕ್ಕೆ ಕಾಯುತ್ತಿದ್ದರು. ಇದೆಲ್ಲವೂ ಕೃಷ್ಣನ ಲೀಲೆ ಎನ್ನುವುದನ್ನು ತಿಳಿದ ಸುದಾಮ ಮತ್ತು ಅವನ ಕುಟುಂಬದವರು ಕೃಷ್ಣನಿಗೆ ಧನ್ಯವಾದ ಸಲ್ಲಿಸಿದರು.

*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ

Advertisement

Udayavani is now on Telegram. Click here to join our channel and stay updated with the latest news.

Next