ಉಡುಪಿ: ಭಗವಂತನ ಯಾವ ರೂಪದಲ್ಲೂ ಗುಣಪ್ರಿಯವಾದ ವ್ಯತ್ಯಾಸಗಳಿಲ್ಲ. ಶ್ರೀ ಕೃಷ್ಣನ ಅವತಾರವು ಕಲಿಯುಗಕ್ಕೆ ಹತ್ತಿರವಾಗಿದೆ. ನಿರಂತರ ದೇವರ ನಾಮಸ್ಮರಣೆಯಿಂದ ಸಾಧನೆಯ ಸನ್ಮಾರ್ಗ ಪಡೆಯಲು ಸಾಧ್ಯ ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀಕೃಷ್ಣ ಜಯಂತಿಯ “ಅಷ್ಟದಿನೋತ್ಸವ’ವನ್ನು ಶ್ರೀಗಳು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.ಶ್ರೀ ಕೃಷ್ಣ ಎಲ್ಲರಿಗೂ ಹತ್ತಿರವಾದ ದೇವರು. ನಾವೆಲ್ಲರೂ ಸುಖ, ಸಂತೋಷವನ್ನು ಸದಾ ಅಪೇಕ್ಷಿಸುತ್ತೇವೆ. ಆದರೆ, ಸುಖಕ್ಕೆ ಬೇಕಾದ ಶಾಶ್ವತ ಮಾರ್ಗವನ್ನು ಮರೆತು ಬಿಡುತ್ತೇವೆ. ಶ್ರೀ ಕೃಷ್ಣ ದೇವರ ನಾಮಸ್ಮರಣೆಯನ್ನು ಬಾಲ್ಯ, ಯೌವನ ಹಾಗೂ ವೃದ್ಧಾಪ್ಯದಲ್ಲೂ ಪಠನೆ ಮಾಡಬೇಕು. ಶಾರೀರಕ ಶಕ್ತಿ ಚೆನ್ನಾಗಿದ್ದಾಗ ದೇವರ ಸ್ಮರಣೆಯನ್ನು ಮರೆತು ಮುಪ್ಪಿನಲ್ಲಿ ದೇವರನ್ನು ಸ್ಮರಿಸುತ್ತೇವೆ ಎಂಬ ಭಾವನೆ ಸರಿಯಲ್ಲ ಎಂದರು.
ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವದಿಸಿ, ಶ್ರೀ ಕೃಷ್ಣನ ಸಂದೇಶವು ಕಲಿಯುಗದಲ್ಲಿ ಅನುಷ್ಠಾನಯೋಗ್ಯವಾಗಿದೆ. ಮನುಷ್ಯ ಸಾಧನೆ ಮಾಡದೇ ಸತ್ತರೆ ಅದು ವ್ಯರ್ಥ ಜೀವನವಾಗುತ್ತದೆ. ಸಾಧನೆಯ ಮಾರ್ಗದಲ್ಲಿ ನಡೆಯಲು ದೇವರ ಸ್ಮರಣೆ ಸದಾ ಮಾಡಬೇಕಾಗುತ್ತದೆ. ನಮಗೆ ಸಹಾಯ ಮಾಡಿದವರನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಆದರೆ, ದೇವರು ಎಷ್ಟೋ ಸಂದರ್ಭದಲ್ಲಿ ನಮಗೆ ಸಹಾಯ ಮಾಡಿರುತ್ತಾನೆ. ಅದನ್ನು ನಾವು ಮರೆತೆ ಬಿಟ್ಟಿರುತ್ತೇವೆ. ಲೌಕಿಕ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಕರ್ಷಿತರಾಗುವಂತೆ ದೇವರಲ್ಲಿಯೂ ಆಕರ್ಷಿತರಾಗಬೇಕು. ದೇವರು ನಮಗೆ ಮಾಡುವ ಸಹಕಾರ ಸದಾ ಸ್ಮರಣೆಗೆ ಬರುತ್ತಿರಬೇಕು ಎಂದು ಹೇಳಿದರು.
ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ವಿಶೇಷ ಪ್ರವಚನ ಮಾಲಿಕೆಯಲ್ಲಿ ಶ್ರೀಕೃಷ್ಣನ ಸಂದೇಶವನ್ನು ನೀಡಿದರು.
ಗೋಪಾಲಕೃಷ್ಣ ಉಪಾಧ್ಯರು ಸ್ವಾಗತಿಸಿ, ನಿರೂಪಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ದಿನ ವಿ| ರೂಪಾ ಗಿರೀಶ್ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.