Advertisement

Udupi ಶ್ರೀಕೃಷ್ಣಾಷ್ಟಮಿ ಸಂದೇಶ: ಜಗದ್ರಕ್ಷಣೆಗಾಗಿ ಜಗದೋದ್ಧಾರಕನಲ್ಲಿ ಪ್ರಾರ್ಥನೆ

02:08 AM Aug 26, 2024 | Team Udayavani |

ಭಗವಂತ ಶ್ರೀಕೃಷ್ಣನಾಗಿ ಅವತರಿಸಿದ್ದು ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರ ಕೂಡಿಬಂದಾಗ. ಶ್ರೀಕೃಷ್ಣಾವತಾರವಾದದ್ದು ಮಧ್ಯರಾತ್ರಿ ಚಂದ್ರೋದಯದ ಕಾಲದಲ್ಲಿ. ಈ ಹೊತ್ತಿನಲ್ಲಿ ಭಗವಂತನನ್ನು ಹಾರ್ದಿಕವಾಗಿ ಸ್ವಾಗತಿಸಬೇಕು.

Advertisement

ಶ್ರೀಕೃಷ್ಣನ ಅವತಾರದ ಉದ್ದೇಶವೇ “ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್‌| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||’ ಎಂದು ಹೇಳಿದಂತೆ ಜಗತ್ತಿನ ಉದ್ಧಾರಕ್ಕಾಗಿ. ಆತ ಜನ್ಮತಳೆದ ದಿನ, ಹೊತ್ತಿನಲ್ಲಿ ಆತನನ್ನು ಭಕ್ತಿಯಿಂದ ಸ್ಮರಿಸುವುದು ಮತ್ತು ಆತ ಕೈಗೊಂಡ ಕೆಲಸದಲ್ಲಿ ನಾವೂ ಕೈಜೋಡಿಸುವುದು ಅತ್ಯಂತ ಪವಿತ್ರವಾಗಿದೆ. ಶ್ರೀಕೃಷ್ಣನನ್ನು ಜ್ಞಾನದ ದೃಷ್ಟಿಯಿಂದ ಚಿಂತನೆ ನಡೆಸಬೇಕು. ಇದೇ ವೇಳೆ ಲೀಲೆಯ ನೆಲೆಯಲ್ಲಿಯೂ ಆಚರಿಸುವುದನ್ನು ಶ್ರೀಕೃಷ್ಣಲೀಲೋತ್ಸವ ಎನ್ನುತ್ತೇವೆ. ಇಂದು (ಸೋಮವಾರ) ಮಧ್ಯರಾತ್ರಿ 12.07 ಗಂಟೆಗೆ ಶ್ರೀಕೃಷ್ಣನಿಗೆ ಶುದ್ಧ ಜಲದಿಂದ ಅರ್ಘ್ಯವನ್ನು ಅರ್ಪಿಸಿ ಅವನನ್ನು ಮತ್ತು ಆತ ಜಗತ್ತಿನ ಉದ್ಧಾರಕ್ಕಾಗಿ ಪಟ್ಟ ಶ್ರಮವನ್ನು ನೆನಪಿಸಿಕೊಳ್ಳಬೇಕು. ಅರ್ಘ್ಯವೆಂದರೆ ಕೃತಜ್ಞತೆ ಸೂಚಕ. ಇದಕ್ಕೂ ಮುನ್ನ ಬಿಲ್ವ, ತುಳಸಿ, ಗರಿಕೆ, ಪಾರಿಜಾತ, ಕಮಲ ಪುಷ್ಪಗಳಿಂದ ಮೂರು ಹೊತ್ತು ಪೂಜಿಸಬೇಕು. ಇದನ್ನು ಸ್ತ್ರೀಪುರುಷ, ಬಾಲವೃದ್ಧರಾದಿಯಾಗಿ ಎಲ್ಲರೂ ಮಾಡಬೇಕು.

ಮರು ದಿನ ಶ್ರೀಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಲೀಲೋತ್ಸವವನ್ನು ಆಚರಿಸಬೇಕು. ಜಗತ್ತಿನ ಸೇವೆ ಮಾಡಲು ಇದೊಂದು ಅಪೂರ್ವ ಅವಕಾಶ. ದ್ವಾರಕೆಯಲ್ಲಿ ಸುಮಾರು 5,000 ವರ್ಷಗಳ ಹಿಂದಿದ್ದ ಐತಿಹಾಸಿಕವಾದ ಶ್ರೀಕೃಷ್ಣನ ಶಿಲಾವಿಗ್ರಹವನ್ನು ಆಚಾರ್ಯ ಮಧ್ವರು ಮೋಕ್ಷಪ್ರದವಾದ ಸಪ್ತಕ್ಷೇತ್ರಗಳಲ್ಲಿ ಮೊದಲನೆಯದಾದ ರೂಪ್ಯಪೀಠಪುರದಲ್ಲಿ (ಉಡುಪಿ) ಪ್ರತಿಷ್ಠಾಪಿಸಿ ಭಕ್ತರಿಗೆ ವಿಶೇಷ ಅವಕಾಶವನ್ನು ಕಲ್ಪಿಸಿಕೊಟ್ಟರು. ವರ್ಷಕ್ಕೊಂದಾವರ್ತಿ ಆಚರಿಸುವ ಈ ಹಬ್ಬವನ್ನು ಆಚರಿಸುವ ಕ್ರಮವನ್ನೂ “ಜಯಂತೀ ಕಲ್ಪ’ ಮತ್ತು “ಜಯಂತೀ ನಿರ್ಣಯ’ ಎಂಬ ಕೃತಿಯ ಮೂಲಕ ತೋರಿಸಿಕೊಟ್ಟರು. ಇಂದು ಇಡೀ ಜಗತ್ತಿನಲ್ಲಿ ಆತಂಕಗಳು ಎದ್ದು ಕಾಣುತ್ತಿದೆ. ಮನುಕುಲ ಎದುರಿಸುವ ಆತಂಕಗಳು ಕಡಿಮೆಯಾಗಲು ಕೃಷ್ಣಾವತಾರದ ಕೆಲಸ ಇಂದು ಅತ್ಯಗತ್ಯವಾಗಿದೆ. ಜಗತ್ತಿನ ಉದ್ಧಾರ ನಿರಂತರವಾಗಿ ನಡೆಯಲಿ ಎಂದು ಜಗದೋದ್ಧಾರಕನನ್ನು ಪ್ರಾರ್ಥಿಸೋಣ, ಹಾಗೆ ನಡೆಯೋಣ.
– ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next