ನಮ್ಮ ಪಾಲಿನ ಕೆಲಸವನ್ನು ಮೊದಲು ಮಾಡುವುದು ಸ್ವಕರ್ಮ, ಸ್ವಧರ್ಮದ ಸಂದೇಶ. ವಿಮಾನ, ಕಾರಿನಲ್ಲಿ ಹೋಗುವವರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರರ್ಥವಿಷ್ಟೆ ಎಲ್ಲಾದರೂ ಅಪಘಾತ ಸಂಭವಿಸಿದರೆ ಸೀಟ್ ಬೆಲ್ಟ್ ಹಾಕದೆ ಇದ್ದರೆ ಇತರರಿಗೆ ತೊಂದರೆಯಾಗುವ ಸಂಭವವಿದೆ.
ಸೀಟ್ ಬೆಲ್ಟ್ ಸ್ವಧರ್ಮ ಪಾಲನೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಆತ ಮಾಡಿದ ತಪ್ಪಿನಿಂದ ಕಷ್ಟ ಬಂತು ಎಂದು ವಾದಿಸುವವರು ಇದ್ದಾರೆ. ಆದರೆ ಶ್ರೀಕೃಷ್ಣ “ಕಷ್ಟದಲ್ಲಿರುವವರ ಸೇವೆ ಮಾಡುವುದು ನಿನ್ನ ಕೆಲಸ. ಅದರ ಕಾರಣ ನನಗೆ ಸಂಬಂಧಪಟ್ಟದ್ದು’ ಎಂದು ಹೇಳುತ್ತಾನೆ.
ಭಿಕ್ಷುಕರಿಗೆ ಭಿಕ್ಷೆ ನೀಡುವುದು ತಪ್ಪು ಎಂದು ಕೆಲವರು ಹೇಳುವುದಿದೆ. ಇಂತಹ ಸಂದರ್ಭ ಪರಿಸ್ಥಿತಿ ನೋಡಿ ನಿರ್ಧಾರ ತಳೆಯಬೇಕು. ಭಿಕ್ಷೆ ಬೇಡುವವರಿಗೆ ಆ ಕೆಲಸ ಬಿಟ್ಟು ಬೇರೇನನ್ನೂ ಮಾಡಲಾಗದಿದ್ದರೆ ಭಿಕ್ಷೆ ನೀಡಬೇಕು. ಆದರೆ ಬೇರೆ ಕೆಲಸ ಮಾಡುವ ತಾಕತ್ತು ಇರುವಾಗ ಭಿಕ್ಷೆ ಕೊಟ್ಟು ಸೋಮಾರಿಯಾಗಿ ಮಾಡಕೂಡದು. ಹಸು ಕೊಡಬೇಕು, ಹಾಲು ಕೊಡಬಾರದು.
ಹೊಲಿಗೆ ಯಂತ್ರ ಕೊಡಬೇಕು, ಹಣ ಕೊಡಬಾರದು. ಒಟ್ಟಾರೆ ಕೆಲಸ, ಉದ್ಯೋಗಕ್ಕೆ ಸವಲತ್ತು ಇರಬೇಕು. “ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತಿ ಅಕರ್ಮಕೃತ್’ ಎಂಬಂತೆ ಎಲ್ಲರಿಗೂ ಕರ್ಮ ಅನಿವಾರ್ಯ. ಅದರಲ್ಲೂ ಸ್ವಕರ್ಮ, ಸ್ವಧರ್ಮ ಶ್ರೇಷ್ಠ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811