ಕೃಷ್ಣ ಎಂದೊಡನೆ ನೆನಪಾಗುವುದು ಆತನ ಲೀಲೆಗಳು ಹಾಗೂ ತುಂಟತನ. ರಾಜ ಮನೆತನಕ್ಕೆ ಸೇರಿದವನಾದರೂ ಹುಟ್ಟಿದ್ದು ಸೆರೆಮನೆಯಲ್ಲಿ. ಬೆಳೆದದ್ದು ಗೊಲ್ಲರೊಂದಿಗೆ. ದೇವಕಿ ಮತ್ತು ವಸುದೇವನ ಕಂದನಾದರೂ ಅಪ್ಪ-ಅಮ್ಮ ಎಂದು ಕರೆದು, ಆಡಿದ್ದು ಯಶೋಧನಂದರ ಮಡಿಲಿನಲ್ಲಿ.
ಶ್ರಾವಣ ಮಾಸದ ಕೃಷ್ಣಪಕ್ಷದ ಎಂಟನೆಯ ದಿನದಂದು ದೇವಕಿಯು ಕೃಷ್ಣನಿಗೆ ಜನ್ಮವಿತ್ತಳು. ದೇವಕಿಯ ಅಣ್ಣನಾದ ಕಂಸನು ದೇವಕಿಯು ಜನ್ಮ ನೀಡುವ ಪ್ರತೀ ಮಗುವನ್ನು ಕೊಲ್ಲುತ್ತಾ ಬಂದಿರುವುದು ದೇವಕಿಗೆ ತಿಳಿದೇ ಇತ್ತು. ಹಾಗಾಗಿ ಕೃಷ್ಣನನ್ನು ಉಳಿಸಿಕೊಳ್ಳುವ ಪಣತೊಟ್ಟಳು. ಆ ಕ್ಷಣಕ್ಕೆ ಪಂಚಭೂತಗಳು ಕೃಷ್ಣನ ಉಳಿವಿಗೆ ಸಹಕರಿಸಿದವು. ಅಂದರೆ ಕಾರಾಗೃಹ ತಾನಾಗಿಯೇ ತೆರೆದುಕೊಂಡಿತು. ವಸುದೇವನು ಕೃಷ್ಣನಾದ ಪುಟ್ಟ ಕಂದನನ್ನು ಹೊತ್ತು ಹೊರಬಂದನು ತುಂಬಿ ಹರಿಯುತ್ತಿದ್ದ ಯಮುನೆಯು ಎರಡು ಭಾಗವಾಗಿ ಮಧ್ಯ ದಾರಿಯನ್ನೇ ಕಲ್ಪಿಸಿದಳು. ಕೃಷ್ಣನು ಯಶೋಧೆ ಮತ್ತು ನಂದನ ಮಡಿಲು ಸೇರಿದನು.
ಕಂಸನು ಪೂತನಿ ಎಂಬ ರಾಕ್ಷಸಿಯನ್ನು ಕರೆದು ಶ್ರಾವಣ ಮಾಸದಲ್ಲಿ ಜನಿಸಿದ ಪ್ರತಿಯೊಬ್ಬ ಮಗುವನ್ನು ಕೊಲ್ಲಲು ತಿಳಿಸಿದನು. ಕೃಷ್ಣ ಪೂತನಿಯ ರಾಕ್ಷಸತ್ವ ತಿಳಿದು, ಆಕೆಯನ್ನು ವಧೆ ಮಾಡಿದನು. ಕಂಸ ಕೃಷ್ಣನನ್ನು ತನ್ನ ಪಾಲಿನ ಯಮನೆಂದೆ ಸ್ವೀಕರಿಸಿದನು. ಕೃಷ್ಣ ಚಿಕ್ಕವಯಸ್ಸಿನಿಂದಲೂ ತನ್ನ ಚತುರತನದಿಂದ ಮತ್ತು ದೈವಿಕ ಶಕ್ತಿಯಿಂದ ರಾಕ್ಷಸರೆಲ್ಲರನ್ನು ವಧೆ ಮಾಡುತ್ತಾ ತನ್ನ ಸಾಹಸ ಮೆರೆಯುತ್ತಾ ಬಂದನು. ಗೋಕುಲದಲ್ಲಿರುವ ಎಲ್ಲರಿಗೂ ಕೃಷ್ಣ ಅಚ್ಚುಮೆಚ್ಚಿನ ಮಗನಾದನು.
ಕೃಷ್ಣ ಎಂದರೆ ಪ್ರಪಂಚಕ್ಕೆ ಪ್ರೀತಿ ಪರಿಚಯಿಸಿದವನು. ಧರ್ಮವನ್ನು ಸಾರಿದವನು. ಪ್ರೀತಿಯ ಮುಖೇನವೇ ಕೃಷ್ಣನನ್ನು ನೋಡುವುದಾದರೇ ತನ್ನ ಹೆಸರಿನಿಂದಲೂ ಕೃಷ್ಣನು ಪ್ರೀತಿಯನ್ನು ಸಾರುತ್ತ ಹೋಗುತ್ತಾನೆ.ರಾಧಾಕೃಷ್ಣರೆಂದೇ ಕೃಷ್ಣನು ಪ್ರಪಂಚಕ್ಕೆ ಪರಿಚತನಾದನು. ಲಕ್ಷ್ಮೀನಾರಾಯಣರ ರೂಪವಾದ ರಾಧಾಕೃಷ್ಣರು ಪ್ರತೀ ಕ್ಷಣವು ಭೂಮಿಗೆ ಪ್ರೀತಿ ಸಾರುತ್ತಾ, ಪ್ರೀತಿ ಹಂಚುತ್ತ, ಪ್ರೀತಿಯಿಂದಲೇ ಭೂಮಿಯ ಬೆಳವಣಿಗೆ ಎಂದು ಸಾರಿದರು. ಕೃಷ್ಣಪ್ರೀತಿಯ ಜತೆಗೆ ಧರ್ಮದ ಸಾರವನ್ನು ಮಹಾಭಾರತ ಮೂಲಕ ಸಾರಿದನು. ಇದೆಲ್ಲವನ್ನು ಹೊರತುಪಡಿಸಿ ಅಷ್ಟಮಿಯಂದು ಎಲ್ಲೆಲ್ಲೂ ಕೃಷ್ಣನ ವೇಷದಾರಿಯಾಗಿ ಓಡಾಡುವ ಪುಟ್ಟ ಮಕ್ಕಳಲ್ಲಿ ಮತ್ತೆ ಮತ್ತೆ ಕೃಷ್ಣನನ್ನು ಕಾಣಬಹುದಾಗಿದೆ. ಭಗವದ್ಗೀತೆಯಲ್ಲಿ ಕೃಷ್ಣನ ಸಾರವನ್ನು ಕೇಳಬಹುದಾಗಿದೆ. ಮಹಾಭಾರತದಲ್ಲಿ ಕೃಷ್ಣನ ಧರ್ಮದ ಚಾತುರ್ಯವನ್ನು ನೋಡಬಹು ದಾಗಿದೆ. ಭೂಮಿ ಮೇಲಿನ ಧರ್ಮದ ನಡೆ ಮತ್ತು ಪ್ರೀತಿಯ ಜೀವಂತಿಕೆ ಕಾಣ ಸಿಗುವವರೆಗೂ ಕೃಷ್ಣನು ನಮ್ಮೊಂದಿಗೆ ಇರುವನು.
ಶಮ್ಮಿ ಶೆಟ್ಟಿ, ಬೆಂಗಳೂರು ವಿವಿ