ಲಕ್ನೋ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣ ಸುಖಾಂತ್ಯ ಕಂಡ ಬಳಿಕ ಈಗ ಕೃಷ್ಣ ಜನ್ಮಭೂಮಿ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಶ್ರೀಕೃಷ್ಣ ಹುಟ್ಟಿದ ಸ್ಥಳವನ್ನು ಸಂಪೂರ್ಣವಾಗಿ ವಾಪಸು ಪಡೆಯುವ ಸಂಬಂಧ ಮಥುರಾ ಕೋರ್ಟ್‌ನಲ್ಲಿ ಸಿವಿಲ್ ದಾವೆ ಹೂಡಲಾಗಿದೆ.
“ಭಗವಾನ್ ಶ್ರೀಕೃಷ್ಣ ವಿರಾಜಮಾನ್’ ಪರವಾಗಿ ವಕೀಲರಾದ ಹರಿಶಂಕರ್ ಮತ್ತು ವಿಷ್ಣು ಜೈನ್, ಮಥುರಾ ಕೋರ್ಟ್‌ನಲ್ಲಿ ಸಿವಿಲ್ ದಾವೆ ಹೂಡಿದ್ದಾರೆ. “ಈ ಪ್ರದೇಶದ ಪ್ರತಿ ಇಂಚು ಭೂಮಿಯೂ ಶ್ರೀಕೃಷ್ಣನ ಭಕ್ತರಿಗೆ ಮತ್ತು ಹಿಂದೂ ಸಮುದಾಯದ ಪಾಲಿಗೆ ಪವಿತ್ರವಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖೀಸಲಾಗಿದೆ.
ಏನಿದೆ ಅಲ್ಲಿ?: ಪ್ರಸ್ತುತ ಶ್ರೀಕೃಷ್ಣ ಜನ್ಮಭೂಮಿಯ 13.37 ಎಕರೆ ಜಾಗದ ಮೇಲಿನ ಹಕ್ಕನ್ನು ಮರಳಿ ಪಡೆಯುವ ಸಂಬಂಧ ಈ ದಾವೆ ಹೂಡಲಾಗಿದೆ. ಇಲ್ಲಿನ ಪುರಾತನ ದೇಗುಲದ ಪಾರ್ಶ್ವದಲ್ಲಿ ಕಟ್ಟಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆರೆವು ಮಾಡಬೇಕೆಂಬ ಬೇಡಿಕೆಯನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಚರಿತ್ರೆಗೆ ತಳುಕು: ಈ ವಿವಾದಿತ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಸೂಚನೆ ಮೇರೆಗೆ ಮಸೀದಿ ಸಮಿತಿ ಇಲ್ಲಿ ಕಟ್ಟಡ ನಿರ್ಮಿಸಿದೆ ಎನ್ನುವುದು ಅರ್ಜಿದಾರರ ವಾದ. “ಈ ಸಂಗತಿ ಸಂಪೂರ್ಣವಾಗಿ ಚರಿತ್ರೆಗೆ ತಳುಕು ಹಾಕಿಕೊಂಡಿದೆ. ಔರಂಗಜೇಬ್ 1658-1707ರವರೆಗೆ ದೇಶವನ್ನು ಆಳಿದ್ದ. ಈ ಸಮಯದಲ್ಲಿ ತನ್ನ ಕಟ್ಟಾನುಯಾಯಿಗಳಿಗೆ ಅಪಾರ ಸಂಖ್ಯೆಯಲ್ಲಿದ್ದ ಹಿಂದೂ ದೇಗುಲಗಳನ್ನು ನಾಶಪಡಿಸಲು ಆದೇಶಿಸಿದ್ದ. 1669-70ರ ಅವಧಿ ಯಲ್ಲಿ ಮಥುರಾದ ಕಾಟ್ರಾ ಕೇಶವ್ ದೇವ್‌ನಲ್ಲಿನ ಶ್ರೀಕೃಷ್ಣ ಜನ್ಮಸ್ಥಳದ ಮಂದಿರವನ್ನು ಕೆಡವಲೂ ಸೂಚಿಸಿದ್ದ’ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
“ಔರಂಗಜೇಬನ ಸೇನೆಯು ಕೇಶವ್ ದೇವ್ ಮಂದಿರದ ಅರ್ಧಭಾಗವನ್ನು ಉರುಳಿಸಿತ್ತು. ಮಂದಿರದ ಪಕ್ಕದಲ್ಲಿಯೇ ಅಕ್ರಮವಾಗಿ ಈದ್ಗಾ ಮಸೀದಿ ಹೆಸರಿನಲ್ಲಿ ಕಟ್ಟಡ ನಿರ್ಮಿಸಲಾಗಿತ್ತು’ ಎಂದು ಹೇಳಿದ್ದಾರೆ.
ತೀವ್ರ ಆಕ್ಷೇಪ: ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪಿನ ವೇಳೆಯೇ, “ರಾಮಮಂದಿರದ ಹೊರತಾಗಿ ಮಥುರಾ, ಕಾಶಿ ಅಥವಾ ದೇಶದ ಇನ್ನಾವುದೇ ಭಾಗದಲ್ಲಿ ಅಯೋಧ್ಯೆ ಮಾದರಿಯ ವಿವಾದ ಸೃಷ್ಟಿ ಸಬಾರದು’ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೂ ಮಥುರಾದಲ್ಲಿ ವಿವಾದ ಸೃಷ್ಟಿಸಲು ಸಿವಿಲ್ ದಾವೆ ಹೂಡಿರುವುದು ಅಸಂಬದ್ಧವಾಗಿ ತೋರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಜಿ ಮೆಹಬೂಬ್ ಆಕ್ಷೇಪ ತೆಗೆದಿದ್ದಾರೆ.