Advertisement

ಕೃಷ್ಣರ ಕೈ ಕಮಲದತ್ತ: ಚಿತ್ತ ಉಪರಾಷ್ಟ್ರಪತಿ ಹುದ್ದೆಯತ್ತ?

03:45 AM Feb 08, 2017 | |

ಕಾಂಗ್ರೆಸ್‌ ತೊರೆದಿರುವ ಎಸ್‌. ಎಂ. ಕೃಷ್ಣ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಒಂದು ವಿಧದ ಘನತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿರುವವರು. ವೃತ್ತಿ ಜೀವನದ ಕೊನೆಯ ಈ ಹಂತದಲ್ಲಿ ಅದನ್ನವರು ಉಳಿಸಿಕೊಳ್ಳಬೇಕಿದೆ. ಉಪರಾಷ್ಟ್ರಪತಿ ಹುದ್ದೆಯತ್ತ ಕಣ್ಣಿರಿಸಿ ಅವರು ಕಾಂಗ್ರೆಸ್‌ ತ್ಯಜಿಸಿದ್ದಾರೆಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಸೇರದೆಯೇ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಗೊಳ್ಳುವ ಅರ್ಹತೆಯುಳ್ಳ ವ್ಯಕ್ತಿ ಅವರು.

Advertisement

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ತ್ಯಜಿಸಿ ರುವುದರಿಂದ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯ ಬಗ್ಗೆ ಭಾರೀ ಊಹಾಪೋಹಗಳೆದ್ದಿವೆ. ಅಲ್ಲದೆ ಈಗಿನ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ತಮ್ಮ ಅವಧಿಯನ್ನು ಮುಗಿಸಿದ ಬಳಿಕ ಕೃಷ್ಣ ಅವರನ್ನು ಮುಂದಿನ ಉಪರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

1972ರಲ್ಲಿ ದೇವರಾಜ ಅರಸ್‌ ಅವರ ಸಚಿವ ಸಂಪುಟವನ್ನು ಸೇರಿದಂದಿನಿಂದ ಈ ವರೆಗಿನ ಅವರ ವೃತ್ತಿಜೀವನವನ್ನು ಅವಲೋಕಿಸಿದಲ್ಲಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ವೃತ್ತಿಜೀವನದ ಈ ಅಂತಿಮ ಹಂತದಲ್ಲಿ ಪಕ್ಷಾಂತರ ಮಾಡಲಾಗದಷ್ಟು ಎತ್ತರದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎನ್ನಬೇಕಾಗುತ್ತದೆ. ಯಾಕೆಂದರೆ ಅವರು ಇಂದಿನ ಹಾರುರೆಕ್ಕೆಗಳ ರಾಜಕಾರಣಿಗಳಂತಲ್ಲ.

ಕೃಷ್ಣ ಅವರು ಬಿಜೆಪಿಗೆ ಸೇರಕೂಡದು; ಸೇರಿದರೆ ಅದು ಪಕ್ಷಾಂತರವೆಂದೇ ಅರ್ಥ ಎಂಬ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ಕೃಷ್ಣ ಅವರು ಮಹಾರಾಷ್ಟ್ರದಂಥ ಪ್ರಮುಖ ರಾಜ್ಯಗಳಲ್ಲೊಂದರ ರಾಜ್ಯಪಾಲರೂ ಆಗಿದ್ದವರು. ವಿದೇಶಾಂಗ ವ್ಯವಹಾರ ಖಾತೆಯ ಸಚಿವರೂ ಆಗಿದ್ದವರು. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಗಳಿಸಿದ ವರ್ಚಸ್ಸು ಹಾಗೂ ಸಮಾಜದ ಸುಶಿಕ್ಷಿತ ವರ್ಗಗಳ ದೃಷ್ಟಿಯಲ್ಲಿ ಪಡೆದಿರುವ ಉನ್ನತಿಕೆಯನ್ನವರು ಉಳಿಸಿಕೊಳ್ಳಬೇಕಾದ ಅಗತ್ಯವಿದೆ.

ಹಾಗೆ ನೋಡಿದರೆ ಅವರು ಬಿಜೆಪಿಗೆ ಸೇರ್ಪಡೆಗೊಂಡರೆ ಅದನ್ನು ಒಂದೇ ಏಟಿಗೆ “ಪಕ್ಷಾಂತರ’ ಎಂದು ವ್ಯಾಖ್ಯಾನಿಸು ವಂತಿಲ್ಲ. ಕಾರಣ, ಅವರು ಸಂಸತ್ಸದಸ್ಯನೂ ಅಲ್ಲ; ಯಾವುದೇ ರಾಜ್ಯದ ಶಾಸಕಾಂಗ ಸದಸ್ಯನೂ ಅಲ್ಲ. 1967ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪಕ್ಷಾಂತರ ಮಾಡುವ ಮೂಲಕ ಚಂದ್ರಭಾನು ಗುಪ್ತರ ಕಾಂಗ್ರೆಸ್‌ ಸರಕಾರವನ್ನು ಉರುಳಿಸುವ ಉದ್ದೇಶವನ್ನು ಈಡೇರಿಸಿಕೊಳ್ಳಲು ಹೊರಟಿದ್ದ ಮಾಜಿ ಪ್ರಧಾನಿ ಚೌಧುರಿ ಚರಣ್‌ಸಿಂಗ್‌ ಅವರ “ಸದನದ ಲಾಗಾಟ’ ಕತೆಗಿಂತ ಕೃಷ್ಣರ ಈಗಿನ ಸನ್ನಿವೇಶ ಭಿನ್ನವಾಗಿದೆ. ಚರಣ್‌ ಸಿಂಗ್‌ ಭಾರತದ ರಾಜಕಾರಣದಲ್ಲೇ ಅತ್ಯಂತ ಕೆಟ್ಟ ಪಕ್ಷಾಂತರ ಪ್ರಯೋಗ ಪರಿಣತನೆಂಬ ಖ್ಯಾತಿಯ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್‌ ಅವರಂತಲ್ಲ. ಜೌಧುರಿ ಸಾಹೇಬರ ಅಭಿಮಾನಿಗಳು ಇಂದೂ ದೇಶದಲ್ಲಿದ್ದಾರೆ. ಇವರಿಬ್ಬರ ಪಕ್ಷಾಂತರ ಪ್ರಸಂಗಗಳು ನಡೆದಿರುವುದು ದೇಶದಲ್ಲಿ ಇನ್ನೂ ಪಕ್ಷಾಂತರ ತಡೆ ಕಾಯ್ದೆ ಇಲ್ಲದಿದ್ದ ದಿನಗಳಲ್ಲಿ. 

Advertisement

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿಯವರ ಸೇವಾವಧಿ ಈ ವರ್ಷದ ಆಗಸ್ಟ್‌ನಲ್ಲಿ ಮುಗಿಯುತ್ತದೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರ ಅಧಿಕಾರಾವಧಿ ಇದೇ ವರ್ಷದ ಜುಲೈಯಲ್ಲಿ ಅಂತ್ಯಗೊಳ್ಳುತ್ತದೆ. ಡಾ| ಎಸ್‌. ರಾಧಾಕೃಷ್ಣನ್‌ (1952-62) ಅವರ ಬಳಿಕ ಎರಡು ಅವಧಿಗಳಿಗೆ ಈ ಹುದ್ದೆ ನಿರ್ವಹಿಸಿದವರೆಂದರೆ ಅನ್ಸಾರಿಯವರೇ. ರಾಜಕೀಯ ಕಾರಣಗಳಿಗಾಗಿ ಮೋದಿ ಸರಕಾರ ಅನ್ಸಾರಿಯವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಕಾಣಲು ಬಹುಶಃ ಇಷ್ಟಪಡಲಾರದು. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಡಾ| ಮುರಳೀ ಮನೋಹರ ಜೋಶಿಯವರು ನೇಮಕಗೊಳ್ಳುವ ಸಾಧ್ಯತೆಯಿದೆ. ಉಪರಾಷ್ಟ್ರಪತಿ ಹುದ್ದೆಗೆ ಅದು ಕಟ್ಟಾ ಬಿಜೆಪಿ ಅಥವಾ ಆರೆಸ್ಸೆಸ್‌ ನಾಯಕನಲ್ಲದ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬಹುದು. ಎಸ್‌.ಎಂ. ಕೃಷ್ಣ ಅವರ ಹೆಸರು ಕೇಳಿಬರುತ್ತಿರುವುದು ಈ ಹಿನ್ನೆಲೆಯಲ್ಲೇ. ಅಲ್ಲದೆ ರಾಷ್ಟ್ರಪತಿಯಾಗಿ ಉತ್ತರಭಾರತದ ಒಬ್ಬರು, ಉಪರಾಷ್ಟ್ರಪತಿಯಾಗಿ ದಕ್ಷಿಣ ರಾಜ್ಯಗಳ ಒಬ್ಬರು ಇರಲೆಂದು ಅದು ಬಯಸಬಹುದು. 

ಕೃಷ್ಣ ರಾಜೀನಾಮೆ ಹಿಂದಿನ ತಾರ್ಕಿಕತೆ
ಉಪರಾಷ್ಟ್ರಪತಿ ಹುದ್ದೆ ತೆರವಾಗಲು ಇನ್ನೂ ಏಳು ತಿಂಗಳಿರು ವಾಗಲೇ ಎಸ್‌. ಎಂ. ಕೃಷ್ಣ ಕಾಂಗ್ರೆಸ್‌ ಪಕ್ಷವನ್ನು ತೊರೆದಿರು
ವುದು ಅರ್ಥಪೂರ್ಣ ವಿದ್ಯಮಾನವಾಗಿ ಕಂಡುಬಂದಿದೆ. ಒಂದು ವೇಳೆ ಅವರು ಆಗಸ್ಟ್‌ ಹೊತ್ತಿನಲ್ಲಿ ಕಾಂಗ್ರೆಸ್‌ನಿಂದ ಬೇರ್ಪಡೆಗೊಂಡಿದ್ದಲ್ಲಿ ಅವರೊಬ್ಬ “ಅವಕಾಶವಾದಿ’ ಎಂಬ ಹಣೆಪಟ್ಟಿ ದೊರೆಯುವ ಸಾಧ್ಯತೆಯಿತ್ತು! ದೀರ್ಘ‌ಕಾಲ ಸೇವೆ ಸಲ್ಲಿಸಿದ್ದ ಪಕ್ಷಕ್ಕೆ ಉಪರಾಷ್ಟ್ರಪತಿ ಚುನಾವಣೆಗಿಂತ ಹಲವು ತಿಂಗಳುಗಳ ಮೊದಲೇ ಅವರು ರಾಜೀನಾಮೆ ಸಲ್ಲಿಸಿ ಸ್ವತಂತ್ರರಾಗಿರುವುದರಿಂದ ಅವರೀಗ ರಾಜಕೀಯೇತರ ವ್ಯಕ್ತಿ ಯೆಂದು ಪರಿಗಣಿಸಲ್ಪಡಬಹುದಾಗಿದೆ.

ಆದರೂ ಕಾಂಗ್ರೆಸ್‌ನಿಂದ ಹೊರಬೀಳುವ ಬಗೆಗಿನ ಕೃಷ್ಣ ಅವರ ನಿರ್ಧಾರಕ್ಕೆ ಈಗಾಗಲೇ ರಾಜಕೀಯ ಬಣ್ಣ ದೊರಕಿ ಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯ ಭವಿಷ್ಯ ಉಜ್ವಲವಾಗಬೇಕೆಂಬ ಉದ್ದೇಶದಿಂದಲೇ ಒಕ್ಕಲಿಗ ಸಮುದಾ ಯದ ಪ್ರಬಲ ಹಾಗೂ ಜನಪ್ರಿಯ ರಾಜಕಾರಣಿಯೊಬ್ಬರನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಬಯಸಿತ್ತು ಎಂಬ ಮಾತುಗಳೀಗ ಕೇಳಿಬರುತ್ತಿವೆ. ಜೆಡಿಎಸ್‌ನ ಎಚ್‌.ಡಿ. ದೇವೇಗೌಡರಂತೆಯೇ ಕೃಷ್ಣ ಅವರೂ ಉನ್ನತ ಮಟ್ಟದ ಒಕ್ಕಲಿಗ ನಾಯಕ. ಇತರ ಒಕ್ಕಲಿಗ ನಾಯಕರಾದ ಬಿಜೆಪಿಯ ಡಿ.ವಿ. ಸದಾನಂದ ಗೌಡರಾಗಲಿ, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿಯಾಗಲಿ, ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಅವರಾಗಲಿ ದೇವೇಗೌಡ – ಕೃಷ್ಣರಂಥ ಪ್ರಬಲ ನಾಯಕತ್ವದ ರಾಜಕಾರಣಿಗಳಲ್ಲ. ಇದುವರೆಗೆ ಒಕ್ಕಲಿಗ ಸಮುದಾಯದ ಸರಾಸರಿ ಮತದಾರರ ಒಲವು ಹಾಗೂ ನಿಷ್ಠೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ನತ್ತಲೇ. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೂ ಕೃಷ್ಣ ಅವರು ಬಿಜೆಪಿಗೆ ನಿಕಟರಾಗಲಿಲ್ಲ. 

ರಾಷ್ಟ್ರಪತಿ – ಉಪರಾಷ್ಟ್ರಪತಿ ಹುದ್ದೆ ರಾಜಕೀಯೇತರ ಆಗಿರಬೇಕೆ?
ರಾಜಕೀಯ ಹಿತಾಸಕ್ತಿಯ ಹೊರಗಿಟ್ಟು, ರಾಷ್ಟ್ರಪತಿ ಹುದ್ದೆ ಹಾಗೂ ಉಪರಾಷ್ಟ್ರಪತಿ ಹುದ್ದೆಗಳನ್ನು ಉನ್ನತ ಮಟ್ಟದಲ್ಲಿ ಕಾಣಬೇಕೆಂದು, ಹಾಗೆಯೇ ಈ ಹುದ್ದೆಗಳಿಗೆ ರಾಜಕೀಯೇತರ ವ್ಯಕ್ತಿಗಳನ್ನೇ ಚುನಾಯಿಸಬೇಕೆಂದು ಬಲವಾಗಿ ಪ್ರತಿಪಾದಿ ಸುವವರಿದ್ದಾರೆ. 1967ರ ವರೆಗೆ ಈ ಕ್ರಮ ಚಾಲ್ತಿಯಲ್ಲಿತ್ತು. ಆ ವರ್ಷ ಸುಪ್ರೀಂ ಕೋರ್ಟಿನ ಆಗಿನ ಶ್ರೇಷ್ಠ ನ್ಯಾಯಮೂರ್ತಿ ಕೋಕಾ ಸುಬ್ಬರಾವ್‌ ಅವರು ಸಂಯುಕ್ತ ವಿರೋಧ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು ಕಾಂಗ್ರೆಸ್‌ ಅಭ್ಯರ್ಥಿ ಡಾ| ಜಾಕೀರ್‌ ಹುಸೇನರೆದುರು ಸೋತರು. ಡಾ| ಹುಸೇನ್‌ ಅವರ ವ್ಯಕ್ತಿತ್ವವನ್ನು ಕೀಳುಗಳೆಯಲು ಈ ಮಾತು ಹೇಳಿದ್ದಲ್ಲ. ಆದರೆ 1969ರಲ್ಲಿ ಜಾಕೀರ್‌ ಹುಸೇನರ ಅಕಾಲಿಕ ನಿಧನದಿಂದಾಗಿ ನಡೆದ ರಾಷ್ಟ್ರಪತಿ ಚುನಾವಣೆ, ದೇಶವನ್ನು ರಾಜಕೀಯ ಗೊಂದಲಕ್ಕೆ ತಳ್ಳಿತು. ಈ ಚುನಾವಣೆಯಿಂದಾಗಿ ಅಧಿಕಾರಾರೂಢ ಕಾಂಗ್ರೆಸ್‌ ಎರಡು ಹೋಳಾಗುವಂತಾಯಿತು. ಇಂದಿರಾ ಗಾಂಧಿಯವರು, ತಮ್ಮದೇ ಪಕ್ಷದ ಅಧಿಕೃತ ಅಭ್ಯರ್ಥಿ ಎನ್‌. ಸಂಜೀವ ರೆಡ್ಡಿಯವರ ಬದಲಿಗೆ ವಿ.ವಿ. ಗಿರಿಯವರನ್ನು ಬೆಂಬಲಿಸಿದರು. ದೇಶದ ಉನ್ನತ ಹುದ್ದೆಗಳು ರಾಜಕೀಯೇತರವಾಗಿರಬೇಕು ಎಂಬ ವಿಚಾರದಲ್ಲಿ ಉಪರಾಷ್ಟ್ರಪತಿ ನೀಡಿರುವ ಅಭಿಪ್ರಾಯವಿದು: “”ಈ ದೇಶದ ಯಾವನೇ ಪ್ರಜೆ ಸಾರ್ವಜನಿಕ ವ್ಯವಹಾರಗಳನ್ನು ಕುರಿತಂತೆ ಆಸಕ್ತಿ ತಳೆದೇ ಇರುತ್ತಾನೆ. ಹಾಗಾಗಿ ಯಾವ ಪೌರನೂ ರಾಜಕೀಯೇತರನಲ್ಲ!” ಈ ಮಾತನ್ನು ಆಡಿರುವ ಅನ್ಸಾರಿ ಯವರೇ ಸ್ವತಃ ಒಬ್ಬ ರಾಜಕೀಯೇತರ ವ್ಯಕ್ತಿ. ಭೂತಪೂರ್ವ ಕಾಂಗ್ರೆಸ್‌ ಅಧ್ಯಕ್ಷ ಡಾ| ಎಂ.ಎ. ಅನ್ಸಾರಿಯವರ ಮೊಮ್ಮಗ ನೆಂಬುದರಿಂದ ಹಮೀದ್‌ ಅನ್ಸಾರಿಯವರ ಹೆಸರು ಕಾಂಗ್ರೆಸ್‌ನೊಂದಿಗೆ ತಳಕು ಹಾಕಿಕೊಂಡಿದೆ.

ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಸಾಮಾನ್ಯವಾಗಿ ಆಡಳಿತಾರೂಢ ಪಕ್ಷಗಳು ರಾಜಕೀಯೇತರ ವ್ಯಕ್ತಿಗಳ ಮೇಲೆ ಒಲವನ್ನು ಹೊಂದಿದ್ದಂತೆ ತೋರಿಬರುತ್ತಿಲ್ಲ. ಭಾರತದ ಭೂತಪೂರ್ವ ಶ್ರೇಷ್ಠ ನ್ಯಾಯಮೂರ್ತಿ ಎಂ. ಹಿದಾಯತುಲ್ಲಾ ಕೂಡ, ತಮ್ಮ ಉಪರಾಷ್ಟ್ರಪತಿ ಹುದ್ದೆಯ ಅವಧಿ ಅಂತ್ಯಗೊಂಡಾಗ ರಾಷ್ಟ್ರಪತಿ ಹುದ್ದೆಯ ಸ್ಪರ್ಧೆಗೆ ಪರಿಗಣಿಸಲ್ಪಡಲಿಲ್ಲ. ಅವರು 1969ರಲ್ಲಿ ಹಂಗಾಮಿ ರಾಷ್ಟ್ರಪತಿಯಾಗಿ ಕೆಲಸ ಮಾಡಿದ್ದುಂಟು. ಯಾಕೆಂದರೆ ಆಗ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಹುದ್ದೆಗಳೆರಡೂ ತೆರವಾಗಿದ್ದವು. ಡಾ| ಜಾಕೀರ್‌ ಹುಸೇನ್‌ ತೀರಿಕೊಂಡಿದ್ದರು. ವಿ.ವಿ. ಗಿರಿಯವರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲೆಂದು ತಮ್ಮ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಹಂಗಾಮಿ ರಾಷ್ಟ್ರಪತಿಯಾಗಿದ್ದಾಗ ಹಿದಾಯತುಲ್ಲಾ ಆಗ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರನ್ನು ಶಿಷ್ಟಾಚಾರಕ್ಕನುಗುಣವಾಗಿ ಬರಮಾಡಿಕೊಂಡಿದ್ದರು. 

ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ರಾಜಕೀಯೇತರ ವ್ಯಕ್ತಿಯಾಗಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರನ್ನು ಗೆಲ್ಲಿಸಿ ಕೊಂಡಿತು. ಇನ್ನೋರ್ವ ಅಭ್ಯರ್ಥಿ ಡಾ| ಎ.ಪಿ. ಅಲೆಗಾÕಂಡರ್‌ ಇಂದಿರಾ ಗಾಂಧಿಯವರಿಗೆ ಸೇವೆ ಸಲ್ಲಿಸಿದ್ದ ವ್ಯಕ್ತಿಯಾಗಿದ್ದರೂ ಕಾಂಗ್ರೆಸ್‌ ಅವರ ಉಮೇದ್ವಾರಿಕೆಯನ್ನು ವಿರೋಧಿಸಿದ್ದರ ಫ‌ಲವಾಗಿ ಡಾ| ಕಲಾಂ ಗೆಲುವು ಸಾಧಿಸಿದರು. 1977ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಪ್ರಥಮ ಆಯ್ಕೆ ರುಕ್ಮಿಣೀದೇವಿ ಅರುಂಡೇಲ್‌ ಆಗಿದ್ದರು. ಆದರೆ ಜನತಾಪಕ್ಷದಲ್ಲಿನ ಮೊರಾರ್ಜಿಯವರ ಸಹೋದ್ಯೋಗಿಗಳು ಪ್ರಧಾನಿಯ ಈ ಪ್ರಯತ್ನಕ್ಕೆ ವಿರೋಧ ಹೇಳಿದ್ದರಿಂದ ಸಂಜೀವ ರೆಡ್ಡಿ ಆಯ್ಕೆಯಾದರು.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next