Advertisement

ಗಾರ್ಮೆಂಟ್ಸ್‌ ತುಂಬಾ ಮಾತು

09:10 AM Apr 27, 2019 | Team Udayavani |

ಕೆಲವರು ಮೈಕ್‌ ಹಿಡಿದರೆ, ಪಕ್ಕದಲ್ಲಿ ಇರೋರು, “ಇವರು ಯಾವಾಗ ಮಾತು ನಿಲ್ಲಿಸುತ್ತಾರೆ’ ಎಂದು ಚಡಪಡಿಸುತ್ತಾರೆ. ಆ ಮಟ್ಟಿಗೆ ಒಂದೇ ಸಮನೆ ಮಾತನಾಡುತ್ತಾರೆ. “ಕೃಷ್ಣ ಗಾರ್ಮೆಂಟ್ಸ್‌’ ಚಿತ್ರದ ನಿರ್ದೇಶಕ ಸಿದ್ಧು ಪೂರ್ಣಚಂದ್ರ ಕೂಡಾ ಇದೇ ಕೆಟಗರಿಗೆ ಸೇರುವ ವ್ಯಕ್ತಿ. ವೇದಿಕೆ ತುಂಬಾ ತಮ್ಮ ತಂಡವನ್ನು ಕೂರಿಸಿಕೊಂಡು ಮೈಕ್‌ ಎತ್ತಿಕೊಂಡ ಸಿದ್ಧು, ಜೋಶ್‌ನಲ್ಲಿ ಒಂದೇ ಸಮನೆ ಮಾತನಾಡುತ್ತಾ ಹೋದರು.

Advertisement

ಸಿನಿಮಾ ಆರಂಭವಾದ ದಿನದಿಂದ ಮುಗಿಯುವ ವೇಳೆಗೆ ಏನೇನಾಯಿತು, ಯಾರ್ಯಾರು ಏನೇನು ಅಂದರು, ಸೆಟ್‌ನಲ್ಲಿ ನಡೆದ ಕಾಮಿಡಿ, ಸಿಟ್ಟು ಮಾಡಿಕೊಂಡ ರೀತಿ, ಛಾಯಾಗ್ರಾಹಕರ ಲವ್‌ಸ್ಟೋರಿ… ಸಿನಿಮಾದ ಅಗತ್ಯ ಮಾಹಿತಿಯೊಂದನ್ನು ಬಿಟ್ಟು ಮಿಕ್ಕಂತೆ ಮಾತನಾಡಿದ್ದೇ ಮಾತನಾಡಿದ್ದು. ಅವರ ಉದ್ದೇಶ ಚೆನ್ನಾಗಿತ್ತು. ಸಿನಿಮಾಕ್ಕೆ ದುಡಿದ ಪ್ರತಿಯೊಬ್ಬರ ಬಗ್ಗೆ ನಾಲ್ಕು ಪ್ರೋತ್ಸಾಹದ ಮಾತುಗಳನ್ನಾಡಬೇಕೆಂಬುದು.

ಈ “ಪ್ರೋತ್ಸಾಹ’ದಲ್ಲಿ ಅವರು ಸ್ವಲ್ಪ ಹೆಚ್ಚೇ ಸಮಯ ತಗೊಂಡರು. ಅಂದಹಾಗೆ, “ಕೃಷ್ಣ ಗಾರ್ಮೆಂಟ್ಸ್‌’ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ತೆರೆಕಾಣಲಿದೆ. ಹೆಸರಿಗೆ ತಕ್ಕಂತೆ ಇದು ಮಧ್ಯಮ ವರ್ಗದ ಕುಟುಂಬದ ಕಥೆ. ಬಹುತೇಕ ನಿರ್ದೇಶಕರು ಹೇಳುವಂತೆ, ಇದು ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾ ಎನ್ನಲು ಸಿದ್ಧು ಕೂಡಾ ಮರೆಯಲಿಲ್ಲ. ಜಿ ಬೆಂಡಿಗೇರಿ ಅವರು ಈ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಚಿತ್ರದ ಮೂರು ಹಾಡುಗಳನ್ನು ಆನಂದ್‌ ಆಡಿಯೋ ಮೂಲಕ ಹೊರತರಲಾಯಿತು. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ.

‘ಶ್ರೀಮಾನ್‌ ಶ್ರೀಮತಿ’ ಧಾರಾವಾಹಿ ಖ್ಯಾತಿಯ ಭಾಸ್ಕರ್‌ ನೀನಾಸಂ ಚಿತ್ರದ ನಾಯಕರಾಗಿ ನಟಿಸಿದ್ದು, “ಬ್ರಹ್ಮಾಸ್ತ್ರ” ಧಾರಾವಾಹಿ ರಶ್ಮಿತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಇಬ್ಬರು ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. ನಿರ್ದೇಶಕರ ಮಾತಿನ ಬಳಿಕ ವೇದಿಕೆ ಮೇಲಿದ್ದವರೆಲ್ಲ ಎರಡೆರಡೇ ಮಾತುಗಳನ್ನಾಡಿ ತೃಪ್ತರಾದರು.

ಚಿತ್ರದಲ್ಲಿ ಚಂದು, ರಾಜೇಶ್‌ ನಟರಂಗ, ಲಕ್ಷ್ಮೀನರಸಿಂಹ, ರಜನಿಕಾಂತ್‌, ವರ್ಧನ್‌ ಹೆಚ್‌.ಎಂ.ಟಿ. ಜಯ್‌, ಕಿರಣ್‌ ಹೊನ್ನಾವರ ಮುಂತಾ­ದವರು ನಟಿಸಿದ್ದಾರೆ. ಚಿತ್ರಕ್ಕೆ ರಘು ಧನ್ವಂತ್ರಿ ಸಂಗೀತವಿದೆ. ಹಾಸನ, ದೊಡ್ಡ­ಬಳ್ಳಾಪುರ, ಬೆಂಗ­ಳೂರು, ಶ್ರವಣ ಬೆಳಗೊಳ, ಚನ್ನಪಟ್ಟಣ­ದಲ್ಲಿ 35ದಿನಗಳ ಕಾಲ ಚಿತ್ರೀಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next