Advertisement

ಕೃಷ್ಣ ಮನವೊಲಿಕೆಗೆ ಮುಂದುವರಿದ ಕಾಂಗ್ರೆಸ್‌ ಕಸರತ್ತು

03:45 AM Jan 31, 2017 | Team Udayavani |

– ದೂರವಾಣಿ ಮೂಲಕ ಸೋನಿಯಾ ಮಾತುಕತೆ, ಮನವೊಲಿಕೆ ಯತ್ನ
– ಕೃಷ್ಣರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿಯಿಂದ ಯತ್ನ
ಬೆಂಗಳೂರು:
ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್‌ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ  ಅವರ ಮನವೊಲಿಕೆಗೆ ಹೈಕಮಾಂಡ್‌ ಮುಂದಾಗಿದ್ದು, ಸ್ವತ: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸೋಮವಾರ ಖುದ್ದು ಕೃಷ್ಣ ಜತೆ ಮಾತುಕತೆ ನಡೆಸಿ, ಮನವೊಲಿಕೆ ಯತ್ನ ಮಾಡಿದ್ದಾರೆ. ಇದೇ ವೇಳೆ, ಕೃಷ್ಣ ಬಂದರೆ ಅವರನ್ನು ಸ್ವಾಗತಿಸಲು ಬಿಜೆಪಿ ಕೂಡ ಮಾನಸಿಕವಾಗಿ ಸಿದ್ಧವಾಗಿದ್ದು, ಅವರನ್ನು ಬಿಜೆಪಿಗೆ ಸೆಳೆಯಲು ಹೈಕಮಾಂಡ್‌ ಮಟ್ಟದಲ್ಲಿಯೇ ತೆರೆಮರೆಯ ಕಸರತ್ತು ನಡೆದಿದೆ. ಈ ನಿಟ್ಟಿನಲ್ಲಿ ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್‌ನ‌ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೃಷ್ಣ ಅವರು, ತಮ್ಮ ಮುಂದಿನ ನಡೆ ಕುರಿತು ಗಂಭೀರವಾದ ಚಿಂತನೆಯಲ್ಲಿ ಮುಳುಗಿದ್ದಾರೆ.

Advertisement

ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇಂತಹ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿರುವ ಕೃಷ್ಣ ಅವರನ್ನು ಕಾಂಗ್ರೆಸ್‌ನಿಂದ ದೂರವಾಗಲು ಬಿಟ್ಟರೆ ಆ ಸಮುದಾಯದ ಮತಗಳಿಗೆ ಧಕ್ಕೆಯಾಗಬಹುದು. ಒಂದೊಮ್ಮೆ, ಅವರು ಬಿಜೆಪಿ ಸೇರಿದರೆ ಅದಕ್ಕೆ ಲಾಭವಾಗಬಹುದು. ಹೀಗಾಗಿ, ಹೇಗಾದರೂ ಮಾಡಿ ಕೃಷ್ಣ ಅವರ ಮನವೊಲಿಸಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ರಾಜ್ಯದ ಕಾಂಗ್ರೆಸ್‌ ನಾಯಕರು ಯತ್ನ ಮಾಡುತ್ತಿದ್ದಾರೆ. ಒಂದೊಮ್ಮೆ ಕಾಂಗ್ರೆಸ್‌ನಿಂದ ದೂರವಾದರೂ ಬಿಜೆಪಿಯತ್ತ ಹೋಗದಂತೆ ತಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮನವೊಲಿಸಲು ಅಖಾಡಕ್ಕಿಳಿದ ಸೋನಿಯಾ:
ಇದೇ ವೇಳೆ, ಕೃಷ್ಣ ಅವರನ್ನು ಭಾನುವಾರ ದೂರವಾಣಿ ಮೂಲಕ ಮಾತನಾಡಿಸಿದ ಸೋನಿಯಾ ಗಾಂಧಿ, ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಪಕ್ಷ ತೊರೆಯದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. “ನಿಮಗೆ ಆಗಿರುವ ನೋವನ್ನು ಶಮನ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಸೇವೆ ಪಕ್ಷಕ್ಕೆ ಅಗತ್ಯವಿದೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯಬಾರದು’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ, ರಾಜ್ಯದ ಕಾಂಗ್ರೆಸ್‌ ನಾಯಕರು ತಮ್ಮನ್ನು ನಡೆಸಿಕೊಂಡ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಸೋನಿಯಾ ಅವರು, ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಇನ್ನೊಂದೆಡೆ, ಕೆಪಿಸಿಸಿ ಕಚೇರಿಯಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಎಸ್‌.ಎಂ.ಕೃಷ್ಣ ಅವರಿಗೆ ನೋವಾಗುವಂತೆ ಯಾವ ನಾಯಕರೂ ನಡೆದುಕೊಂಡಿಲ್ಲ. ಹೈ ಕಮಾಂಡ್‌ ಮೂಲಕ ಅವರ ಮನವೊಲಿಸುವ ಯತ್ನ ನಡೆದಿದೆ. ಕೃಷ್ಣ ಅವರು ಹಿರಿಯ ರಾಜಕಾರಣಿ. ಅವರ ನಿರ್ಧಾರ ನಮಗೆಲ್ಲರಿಗೂ ನೋವು ತಂದಿದೆ. ಈಗಾಗಲೇ ಅವರ ಮನವೊಲಿಸುವ ಯತ್ನ ಮಾಡಿದ್ದು, ಪ್ರಸ್ತುತ ಬೆಳವಣಿಗೆಗಳನ್ನು ಹೈಕಮಾಂಡ್‌ ಗಮನಕ್ಕೂ ತರಲಾಗಿದೆ. ಅವರ ಮೂಲಕವೂ ಮನವೊಲಿಸುವ ಪ್ರಯತ್ನ ನಡೆಯುತ್ತಿದ್ದು, ಸೋನಿಯಾ ಗಾಂಧಿಯವರು ಕೃಷ್ಣ ಅವರ ಮನವೊಲಿಸುವ ವಿಶ್ವಾಸವಿದೆ. ಬಿಜೆಪಿಯವರು ಕೃಷ್ಣ ಗೆ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ನಮ್ಮಿಂದ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ಆದರೆ, ಅವರ ಹಿರಿತನದ ಮುಂದೆ ನಮ್ಮ ತಪ್ಪುಗಳು ಲೆಕ್ಕಕ್ಕೆ ಬರುವುದಿಲ್ಲ. ಅದೆಲ್ಲವನ್ನು ಮರೆತು ಅವರು ಪಕ್ಷದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.

ದೆಹಲಿಗೆ ತೆರಳಿದ ಹುಕ್ಕೇರಿ:
ಈ ಮಧ್ಯೆ, ಕೃಷ್ಣ ಅವರು ಕಾಂಗ್ರೆಸ್‌ಗೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯದಿದ್ದರೆ ನಾವೂ ಅವರ ದಾರಿಯನ್ನೇ ತುಳಿಯಬೇಕಾಗುತ್ತದೆ ಎಂದು ಭಾನುವಾರವಷ್ಟೇ ಹೇಳಿಕೆ ನೀಡಿದ್ದ ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ, ಸೋಮವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ಬಳಿಕ ಮಾತು ಬದಲಿಸಿದ್ದಾರೆ. “ನಾನು ಕಾಂಗ್ರೆಸ್‌ ತೊರೆಯುವುದಿಲ್ಲ. ಕೃಷ್ಣ ಅವರನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ದೆಹಲಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದರು.

Advertisement

“ಪಕ್ಷದ ಹಿತದೃಷ್ಠಿಯಿಂದ ಕೃಷ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಸೋನಿಯಾ ಗಾಂಧಿಗೆ ಮನವಿ ಮಾಡಲು ದೆಹಲಿಗೆ ತೆರಳುತ್ತಿದ್ದೇನೆ. ಕೃಷ್ಣ ಅವರು ಪ್ರಭಾವಿ ರಾಜಕಾರಣಿಯಾಗಿದ್ದು, ಪಕ್ಷದಲ್ಲೇ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದು ಹೇಳಿದರು.

ಕೃಷ್ಣ ಮನೋ  ಇಂಗಿತ ಅರಿತು ಬಿಜೆಪಿಗೆ ಆಹ್ವಾನ:
ಈ ಮಧ್ಯೆ, ಎಸ್‌.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನಕ್ಕೆ ಕೈಹಾಕಲಾಗಿದೆ. ಕೃಷ್ಣ ಅವರು ಪಕ್ಷಕ್ಕೆ ಬಂದರೆ ಯಾವುದೇ ಸ್ಥಾನಮಾನ ಬಯಸುವ ಸಾಧ್ಯತೆ ಇಲ್ಲದ ಕಾರಣ ಈಗಾಗಲೇ ವರಿಷ್ಠರೊಂದಿಗೆ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅವರ ಮನೋ ಇಂಗಿತ ಏನು ಎಂಬುದನ್ನು ತಿಳಿದುಕೊಂಡ ಬಳಿಕ ಖುದ್ದು ಆಹ್ವಾನ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಅವರನ್ನು ಬಿಜೆಪಿಗೆ ಆಹ್ವಾನಿಸುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕೃಷ್ಣ ಅವರು ಬಿಜೆಪಿಗೆ ಬಂದರೆ ನಮಗೆ ದೊಡ್ಡ ಬಲ ಬಂದಂತಾಗಲಿದೆ. ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರು ಉತ್ತಮ ರಾಜಕಾರಣಿಯಾಗಿದ್ದಾರೆ. ಆದರೆ, ಬಿಜೆಪಿಗೆ ಆಹ್ವಾನಿಸುವ ಮೊದಲು ಅವರ ಮನೋ ಇಂಗಿತವನ್ನು ಅರಿತು ಹೆಜ್ಜೆ ಇಡಲಾಗುವುದು. ಕೃಷ್ಣ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದಿಲ್ಲ. ಅದನ್ನು ತಿಳಿದ ಬಳಿಕ ಮಾತನಾಡುತ್ತೇನೆ. ನೇರವಾಗಿ ನಾನೇ ಮಾತನಾಡೋದು ತಪ್ಪಾಗುತ್ತದೆ ಎಂದರು.

ಇದೇ ವೇಳೆ, ಕೃಷ್ಣ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದು ರಾಜ್ಯದಲ್ಲಿ ಬಿಜೆಪಿ ಪರ ರಾಜಕೀಯ ಧ್ರುವೀಕರಣವಾಗುತ್ತಿರುವುದನ್ನು ತೋರಿಸುತ್ತದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರೆ, ಕೃಷ್ಣ ಅವರ ವಿಷಯವನ್ನು ದೊಡ್ಡವರು ಕುಳಿತು ಯೋಚನೆ ಮಾಡಬೇಕಾದ ವಿಚಾರ. ಆದರೆ, ಯುಗಾದಿ ನಂತರ ನಡೆಯುವ ಬಿಜೆಪಿ ಪರ ರಾಜಕೀಯ ಧ್ರುವೀಕರಣದಿಂದ ಕಾಂಗ್ರೆಸ್‌ಗೆ ದೊಡ್ಡ ಆಘಾತ ವಾಗಲಿದೆ ಎನ್ನುವ ಮೂಲಕ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಕೃಷ್ಣ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಈಗಾಗಲೇ ಎಸ್‌.ಎಂ.ಕೃಷ್ಣ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದು, ಪ್ರಸ್ತುತ ಬೆಳವಣಿಗೆಗಳನ್ನು ಹೈಕಮಾಂಡ್‌ ಗಮನಕ್ಕೂ ತರಲಾಗಿದೆ. ಅವರ ಮೂಲಕವೂ ಪ್ರಯತ್ನ ನಡೆಯುತ್ತಿದ್ದು, ಸೋನಿಯಾ ಗಾಂಧಿಯವರು ಕೃಷ್ಣ ಅವರ ಮನವೊಲಿಸುತ್ತಾರೆ ಎಂಬ ವಿಶ್ವಾಸವಿದೆ.
– ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ
ಕೃಷ್ಣ ಅವರು ಬಿಜೆಪಿಗೆ ಬಂದರೆ ನಮಗೆ ದೊಡ್ಡ ಬಲ ಬಂದಂತಾಗಲಿದೆ. ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರು ಉತ್ತಮ ರಾಜಕಾರಣಿಯಾಗಿದ್ದಾರೆ. ಬಿಜೆಪಿಗೆ ಆಹ್ವಾನಿಸುವ ಮೊದಲು ಅವರ ಮನೋ ಇಂಗಿತವನ್ನು ಅರಿತು ಹೆಜ್ಜೆ ಇಡಲಾಗುವುದು.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next