Advertisement

ಎಸ್‌.ಎಂ.ಕೃಷ್ಣ ಪರಿವಾರಕ್ಕೆ ಗಣ್ಯರ ಸಾಂತ್ವನ

01:11 AM Jul 31, 2019 | Team Udayavani |

ಬೆಂಗಳೂರು: ಕೆಫೆ ಕಾಫಿ ಡೇ ಮುಖ್ಯಸ್ಥ, ಉದ್ಯಮಿ ವಿ.ಜಿ.ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಅವರ ಮಾವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ನಿವಾಸಕ್ಕೆ ಗಣ್ಯರು ಆಗಮಿಸಿ ಧೈರ್ಯ ತುಂಬಿದರು.

Advertisement

ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಜಗದೀಶ್‌ ಶೆಟ್ಟರ್‌, ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ, ಮಾಜಿ ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗೂಂಡೂರಾವ್‌, ಮಾಜಿ ಶಾಸಕ ಕೆ.ಬಿ.ಕೋಳಿವಾಡ ಆಗಮಿಸಿ ಕುಟುಂಬ ಸದಸ್ಯರಿಗೆ ಸಮಾಧಾನ ಹೇಳಿದರು.

ಮಾಜಿ ಸಚಿವರಾದ ಕೆ.ಜೆ.ಜಾರ್ಜ್‌, ಕೃಷ್ಣಭೈರೇಗೌಡ, ಜಮೀರ್‌ ಅಹ್ಮದ್‌, ಡಿ.ಕೆ.ಶಿವಕುಮಾರ್‌, ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌, ಪ್ರಿಯಾಂಕ ಖರ್ಗೆ, ಸಿ.ಎಸ್‌.ಪುಟ್ಟರಾಜು, ಆರ್‌.ರೋಷನ್‌ ಬೇಗ್‌, ಕಾಂಗ್ರೆಸ್‌ ಮುಖಂಡರಾದ ಬಿ.ಎಲ್‌.ಶಂಕರ್‌, ಬಿಜೆಪಿಯ ಮಾಜಿ ಸಚಿವ ರಾಮಚಂದ್ರೇಗೌಡ, ವಿಧಾನಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ್‌ ಪೂಜಾರಿ, ಮಾಜಿ ಸದಸ್ಯೆ ತಾರಾ, ಶಾಸಕ ಕುಮಾರ್‌ ಬಂಗಾರಪ್ಪ, ಶ್ರೀರಾಮುಲು, ಆರಗ ಜ್ಞಾನೇಂದ್ರ,

ಮಾಜಿ ಶಾಸಕ ಜೀವರಾಜ್‌, ಅನರ್ಹ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌, ಭೈರತಿ ಬಸವರಾಜು, ಎಂಟಿಬಿ ನಾಗರಾಜ್‌, ನಟರಾದ ರಾಘವೇಂದ್ರ ರಾಜ್‌ ಕುಮಾರ್‌, ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ ಕುಮಾರ್‌, ಶ್ರೀನಾಥ್‌ ಸೇರಿ ಇತರ ಚಿತ್ರರಂಗದ ಗಣ್ಯರು ಹಾಗೂ ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ, ರಾಜ್ಯ ಗುಪ್ತಚರ ಇಲಾಖೆ ಐಜಿಪಿ ದಯಾನಂದ, ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್‌ ಆಗಮಿಸಿ ಕುಟುಂಬ ಸದಸ್ಯರಿಗೆ ಸಮಾಧಾನಪಡಿಸಿ ಧೈರ್ಯ ಹೇಳಿದರು.

ಪೊಲೀಸ್‌ ಬಿಗಿ ಭದ್ರತೆ: ನೂರಾರು ಮಂದಿ ಸಂಬಂಧಿಕರು, ಸ್ನೇಹಿತರು, ಆಪ್ತರು, ಅಭಿಮಾನಿಗಳು ಆಗಮಿಸುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಸ್‌.ಎಂ.ಕೃಷ್ಣ ಅವರ ಮನೆ ಬಳಿ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಯಿತು. ಕೃಷ್ಣ ಅವರ ಮನೆ ರಸ್ತೆಯ ಎರಡು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಅಲ್ಲದೆ, ಸದಾಶಿವನಗರದ ಆರನೇ ಕ್ರಾಸ್‌ನಲ್ಲಿರುವ ಸಿದ್ಧಾರ್ಥ ಅವರ ಮನೆಗೂ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

Advertisement

ಸರಳ ವ್ಯಕ್ತಿತ್ವದ ಸಿದ್ಧಾರ್ಥ: “ಕೆಫೆ ಕಾಫಿ ಡೇ ಹಾಗೂ ಇತರ ಉದ್ಯಮಗಳಲ್ಲಿ ಗುರುತಿಸಿಕೊಂಡಿದ್ದ ಸಿದ್ಧಾರ್ಥ ಅವರದ್ದು ಸರಳ ವ್ಯಕ್ತಿತ್ವ. ಐವತ್ತು ಸಾವಿರ ಮಂದಿಗೆ ಉದ್ಯೋಗ ನೀಡಿದ್ದ ಉದ್ಯಮಿ ಈ ರೀತಿ ನಿಗೂಢವಾಗಿ ನಾಪತ್ತೆಯಾಗಿರುವುದು ದುರಾದೃಷ್ಟಕರ’ ಎಂದು ಸ್ನೇಹಿತರು ಹಾಗೂ ಸಂಬಂಧಿಕರು ಬೇಸರ ವ್ಯಕ್ತಪಡಿಸಿದರು. ಡ್ರೆಸ್‌ ಕೋಡ್‌ ಬಗ್ಗೆ ಕಾಳಜಿ ಹೊಂದಿದ್ದ ಸಿದ್ಧಾರ್ಥ, ಫಾರ್ಮಲ್‌ ಶರ್ಟ್‌, ಪ್ಯಾಂಟ್‌ ಹಾಗೂ ಕೋಟ್‌ ಧರಿಸುತ್ತಿದ್ದರು. ಯಾರಿಗೂ ಏಕವಚನದಲ್ಲಿ ಕರೆಯುತ್ತಿರಲಿಲ್ಲ. ಸದಾ ಹಸನ್ಮುಖೀಯಾಗಿದ್ದ ಅವರು ಸಿಬ್ಬಂದಿ ಹಾಗೂ ಉದ್ಯಮಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದರು.

ಪ್ರಮುಖವಾಗಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿ ಮಲೆನಾಡು ಭಾಗದ ಯುವಕರ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಅವರು, ತಮ್ಮ ಕಾಫಿ ಡೇ ಹಾಗೂ ಇತರ ಕಚೇರಿಗಳಲ್ಲಿ ಅವರಿಗೆ ಕೆಲಸ ಕೊಟ್ಟಿದ್ದರು. ಅವರೊಂದಿಗೆ ಕೆಲಸ ಮಾಡಿದ ನೂರಾರು ಮಂದಿ ಯಶಸ್ವಿಯಾಗಿ ಸ್ವಂತ ಉದ್ಯೋಗ ಸೃಷ್ಟಿಸಿಕೊಂಡಿದ್ದಾರೆ. ಇನ್ನು ಕೆಲವರು ಅವರಿಂದ ಲಾಭ ಪಡೆದು ನಾಪತ್ತೆಯಾದವರು ಇದ್ದಾರೆ ಎನ್ನುತ್ತಾರೆ ಅವರ ದೂರದ ಸಂಬಂಧಿ ಸುಕೇಶ್‌. ಆದರೆ, ಇತ್ತೀಚೆಗೆ ಅವರು ಕೋಟ್‌ ಧರಿಸದೆ ಫಾರ್ಮಲ್‌ ಶರ್ಟ್‌ ಮತ್ತು ಪ್ಯಾಂಟ್‌ ಧರಿಸುತ್ತಿದ್ದರು. ಅವರ ದಿಢೀರ್‌ ವರ್ತನೆ ಸಿಬ್ಬಂದಿ ಹಾಗೂ ಸ್ನೇಹಿತರಲ್ಲಿ ಅನುಮಾನ ಮೂಡಿತ್ತು ಎಂದು ಹೇಳಿದರು.

ನಿಗಾ ವಹಿಸಲು ಗುರೂಜಿ ಸಲಹೆ?: ಕೆಲ ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಗುರೂಜಿಯೊಬ್ಬರನ್ನು ಸಿದ್ಧಾರ್ಥ ಕುಟುಂಬ ಸದಸ್ಯರು ಭೇಟಿಯಾಗಿದ್ದರು. ಈ ವೇಳೆ ಆ ಗುರೂಜಿ, ಸಿದ್ಧಾರ್ಥ ಒತ್ತಡದಲ್ಲಿದ್ದು, ಅವರ ಮೇಲೆ ಸ್ವಲ್ಪ ನಿಗಾ ವಹಿಸುವಂತೆ ಕುಟುಂಬ ಸದಸ್ಯರಿಗೆ ಎಚ್ಚರಿಸಿದ್ದರು.

ಪುತ್ರನಿಗೆ ಉದ್ಯಮ ವಹಿಸಲು ಚಿಂತನೆ: ವಿದೇಶದಲ್ಲಿ ವ್ಯಾಸಂಗ ಮಾಡಿದ್ದ ತಮ್ಮ ಪುತ್ರ ಅಮರ್ಥ್ಯ ಒಂದೂವರೆ ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಹೀಗಾಗಿ ತಮ್ಮ ಸಂಪೂರ್ಣ ವ್ಯವಹಾರದ ಬಗ್ಗೆ ಅವರಿಗೆ ಮಾಹಿತಿ ನೀಡುವ ಸಲುವಾಗಿ ಕಳೆದೊಂದು ವರ್ಷದಿಂದ ತಮ್ಮ ಉದ್ಯಮ ಹಾಗೂ ಇತರ ವ್ಯವಹಾರಗಳ ಸಭೆಗಳಿಗೆ ಪುತ್ರನನ್ನು ಕರೆದೊಯ್ಯುತ್ತಿದ್ದರು. ಸಹ ಉದ್ಯಮಿಗಳಿಗೆ ಪರಿಚಯಿಸುತ್ತಿದ್ದರು ಎಂದು ಸಂಬಂಧಿಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next