Advertisement

ಚುನಾವಣೆಯಲ್ಲೂ ಕೃಷ್ಣೆಯ ಜಪ

02:35 PM Apr 21, 2019 | pallavi |

ಉಗಾರ ಬಿಕೆ: ರಾಷ್ಟ್ರದ ಭವಿಷ್ಯಕ್ಕೆ ದಿಕ್ಸೂಚಿಯಾಗಿರುವ ಲೋಕಸಭಾ ಚುನಾವಣೆಗೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಗಡಿ ಭಾಗದ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಆಖಾಡಾ ಸಿದ್ಧವಾಗಿದ್ದು ರಾಜಕೀಯ ಪಕ್ಷಗಳ ಪ್ರಚಾರ ಉರಿ ಬಿಸಿಲಿನ ನಡುವೆಯೂ ಜೋರಾಗಿ ನಡೆದಿದೆ.

Advertisement

ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಪರ ಕಾರ್ಯಕರ್ತರ ಗುಂಪುಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಅಭ್ಯರ್ಥಿಗಳ ಸಾಧನೆ ಹಾಗೂ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಹಿಡಿತದಲ್ಲಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಜೋರಾಗಿ ನಡೆದಿದ್ದರೂ ಇದುವರೆಗೆ ಎರಡೂ ಪಕ್ಷಗಳ ಪ್ರಮುಖ ನಾಯಕರು ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿಲ್ಲ. ಹೀಗಾಗಿ ಶಾಸಕರ ಹಾಗೂ ಹಾಲಿ ಸಂಸದರ ಅಭಿವೃದ್ಧಿ ಕಾರ್ಯಗಳೇ ಮತದಾರರ ಮೇಲೆ ಪರಿಣಾಮ ಬೀರಬೇಕಾಗಿವೆ.

ಸ್ಥಳೀಯ ಸಮಸ್ಯೆ ಹಾಗೂ ಪ್ರಭಾವಿ ನಾಯಕರ ವರ್ಚಸ್ಸು ಬಿಟ್ಟು ಬೇರೆ ವಿಷಯಗಳ ಬಗ್ಗೆ ಕ್ಷೇತ್ರದ ಮತದಾರರಿಗೆ ಅಂತಹ ಆಸಕ್ತಿ ಇಲ್ಲ. ರಫೆಲ್ ಡೀಲ್, ಬಾಲಾಕೋಟ್ ದಾಳಿ ಸಂಗತಿಗಳ ಬಗ್ಗೆ ಇಲ್ಲಿಯ ಜನರಿಗೆ ಮಾಹಿತಿ ಇಲ್ಲ. ಆದರೆ ಬೇಸಿಗೆಯ ಸಮಯದಲ್ಲಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಯಾರು ನೀರು ಬಿಡಿಸುತ್ತಾರೆ ಎಂಬ ಚರ್ಚೆ ಮಾತ್ರ ಕ್ಷೇತ್ರದಲ್ಲಿ ನಡೆದಂತೆ ಕಾಣುತ್ತದೆ.

Advertisement

ಮಹಾರಾಷ್ಟ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಾಗವಾಡ ಕ್ಷೇತ್ರ ಬಹುತೇಕ ರೈತ ಸಮುದಾಯವನ್ನೇ ಹೊಂದಿದೆ. ಇಲ್ಲಿನ ಜನರು ನೆರೆಯ ಮಹಾರಾಷ್ಟ್ರದ ಮಿರಜ ಹಾಗೂ ಸಾಂಗ್ಲಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕೃಷ್ಣಾ ನದಿಯಲ್ಲಿ ಸದಾ ನೀರು ಹರಿಯಬೇಕು. ಈ ಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡಬೇಕು. ವಿಳಂಬ ಮಾಡದೆ ಹಣ ಪಾವತಿಸಬೇಕು ಎಂಬುದು ಇವರ ಪ್ರಮುಖ ಬೇಡಿಕೆ.

ಅಭಿವೃದ್ಧಿಯ ದೃಷ್ಟಿ ಯಲ್ಲಿ ಈ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತಿಲ್ಲ. ಈ ಮೊದಲು ಬಿಜೆಪಿ ವಶದಲ್ಲಿದ್ದ ಕ್ಷೇತ್ರ ಈಗ ಕಾಂಗ್ರೆಸ್‌ ಪಾಲಾಗಿದೆ. ಸಕ್ಕರೆ ಕಾರ್ಖಾನೆಯ ಮಾಲೀಕರು ಈಗ ಕ್ಷೇತ್ರದ ಶಾಸಕರು. ಸವುಳು-ಜವುಳು ಸಮಸ್ಯೆ ಇಲ್ಲಿನ ರೈತರನ್ನು ಬಹಳ ಕಾಡುತ್ತಿದೆ. ಇದಕ್ಕೆ ಇದುವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅನುದಾನದ ಕೊರತೆ ಇದಕ್ಕೆ ಅಡ್ಡಿಯಾಗಿದೆ.

ಪಕ್ಕದಲ್ಲೇ ಕೃಷ್ಣಾ ನದಿ ಹರಿಯುತ್ತಿದ್ದರೂ ಕಾಗವಾಡ ಕ್ಷೇತ್ರ ಬರಗಾಲ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಈ ಮತಕ್ಷೇತ್ರದ ಉತ್ತರ ಭಾಗದಲ್ಲಿ 22 ಹಳ್ಳಿಗಳು ಈಗಲೂ ಬರ ಹಾಗೂ ಜಲಕ್ಷಾಮದಿಂದ ಬಳಲುತ್ತಿವೆ. ಬಸವೇಶ್ವರ ಯಾತ ನೀರಾವರಿ ಯೋಜನೆ ಮತ್ತು ತಾಲೂಕಿನ 17 ಕೆರೆ ತುಂಬುವ ಅಭಿವೃದ್ಧಿ ಕಾಮಗಾರಿಗಳು ಪೂರ್ಣ ಗೊಳ್ಳಬೇಕಿವೆ.

ಕ್ಷೇತ್ರದ ದಕ್ಷಿಣ ಭಾಗದಲ್ಲೂ ಇದೇ ಸ್ಥಿತಿ. ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದು ಕುಡಿಯುವ ನೀರಿಗೆ ಜನ ಪರದಾಡುವಂತಾಗಿದೆ. ಕೃಷ್ಣಾ ನದಿಗೆ ಯಾರು ನೀರು ಹರಿಸುವರೋ ಅಂತಹ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಮತದಾರರಲ್ಲಿದೆ.

ಒಟ್ಟು ಮತದಾರರು 1,81,680ಪುರುಷರು 94353ಮಹಿಳೆಯರು 87327

Advertisement

Udayavani is now on Telegram. Click here to join our channel and stay updated with the latest news.

Next