Advertisement

ಕೃಷಿ ವಾಣಿ!

05:08 PM Oct 30, 2017 | |

ಇದಕ್ಕೆ ಅದೃಷ್ಟ ಅನ್ನುತ್ತೀರೋ, ಪವಾಡ ಎನ್ನುತ್ತೀರೋ ಅಥವಾ ಇನ್ನಾವುದಾದರೂ ಪದವನ್ನು ಹುಡುಕುತ್ತೀರೋ ನಿಮಗೆ ಬಿಟ್ಟಿದ್ದು. ಒಬ್ಬ ನಟಿ ಎರಡು ವರ್ಷದ ಹಿಂದೆ ಒಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಆ ಚಿತ್ರ ಮುಗಿಯುವಷ್ಟರಲ್ಲಿ ಇನ್ನೆರೆಡು ಚಿತ್ರಗಳಲ್ಲಿ ಆಕೆಗೆ ಅವಕಾಶ ಸಿಗುತ್ತದೆ. ಆ ಎರಡರಲ್ಲಿ ಒಂದು ಮುಗಿದು ಬಿಡುಗಡೆಯಾಗುತ್ತಿದ್ದಂತೆಯೇ, ಇನ್ನೊಂದೆರೆಡು ಚಿತ್ರಗಳ ಟೈಟಲ್‌ ಕಾರ್ಡ್‌ಗಳಲ್ಲಿ ಆಕೆಯ ಹೆಸರು ಸೇರಿಕೊಳ್ಳುತ್ತದೆ. ಕಳೆದ ತಿಂಗಳವರೆಗೂ ಆಕೆಯ ಅಭಿನಯದ ಚಿತ್ರ ಅಂತ ಬಿಡುಗಡೆಯಾಗಿದ್ದು ಒಂದೇ ಒಂದು. ಆದರೆ, ಆಕೆಯ ಅಕೌಂಟಿನಲ್ಲಿ ಇರುವ ಚಿತ್ರಗಳ ಸಂಖ್ಯೆ ಮಾತ್ರ ಐದು. ಅದೇ ಕಾರಣಕ್ಕೆ ಹೇಳಿದ್ದು, ಇದಕ್ಕೆ ಅದೃಷ್ಟ ಅನ್ನುತ್ತೀರೋ, ಪವಾಡ ಎನ್ನುತ್ತೀರೋ ಅಥವಾ ಇನ್ನಾéವುದಾದರೂ ಪದವನ್ನು ಹುಡುಕುತ್ತೀರೋ ಎಂದು. ಹಾಗೆ ಆರಂಭದಲ್ಲೇ ಸಖತ್‌ ಬಿಝಿಯಾಗಿರುವ ನಟಿಯ ಹೆಸರು ಕೃಷಿ ತಪಂಡ. ಈಕೆಯ ಮೊದಲ ಚಿತ್ರ “ಕಹಿ’ ಎರಡನೆಯ ಚಿತ್ರ “ಅಕಿರಾ’  ಈಗ ಇನ್ನೊಂದಿಷ್ಟು ಚಿತ್ರಗಳು ಬೇರೆ ಬೇರೆ ಹಂತದಲ್ಲಿದೆ. ಇದು ಅದೃಷ್ಟವೋ, ಪವಾಡವೋ ಎಂಬ ಕುತೂಹಲದಿಂದಲೇ ಕೃಷಿ ಅವರನ್ನು ಮಾತನಾಡಿಸಲಾಯಿತು.

Advertisement

“ಅದೇನೋ ನನಗೆ ಗೊತ್ತಿಲ್ಲ …’ ಅಂತಲೇ ಮಾತು ಶುರು ಮಾಡುತ್ತಾರೆ ಕೃಷಿ. ಅದು ಅವರಿಗೂ ಬಗೆಹರಿಯದ ಪ್ರಶ್ನೆ. ಏಕೆಂದರೆ ಅವರು ಓದಿದ್ದು ಏನನ್ನೋ, ಮಾಡಿದ್ದು ಇನ್ನೇನನ್ನೋ, ಈಗ ಮಾಡುತ್ತಿರುವುದು ಮತ್ತಿನ್ನೇನನ್ನೋ. ಒಂದೇ ಒಂದು ದಿನಕ್ಕೂ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸನ್ನೂ ಕಂಡಿರಲಿಲ್ಲವಂತೆ ಕೃಷಿ. ಇನ್ನು ಗುರಿ, ಯೋಚನೆ ಯಾವುದೂ ಇರಲಿಲ್ಲವಂತೆ. ಆದರೆ, ಒಂದು ವಿಷಯ ಮನಸ್ಸಿನಲ್ಲಿತ್ತಂತೆ. ಅದೇನೆಂದರೆ, ಏನೇ ಮಾಡಿದರೂ 100 ಪರ್ಸೆಂಟ್‌ ಮಾಡಬೇಕು ಎಂದು. ಆ ನಿಟ್ಟಿನಲ್ಲಿ ಮಲ್ಟಿ ನ್ಯಾಷನಲ್‌ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ, “ಕಹಿ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. ಸರಿ, ಒಂದು ಚಾನ್ಸ್‌ ನೋಡೋಣ ಎಂದು ಎರಡು ವರ್ಷಗಳ ನಂತರ ಮಾಡಿದ ಕೆಲಸವನ್ನು ಬಿಟ್ಟು, ಚಿತ್ರರಂಗಕ್ಕೆ ಅವರು ಧುಮುಕಿದ್ದಾರೆ. ಅಲ್ಲಿಂದ …

“ನಿಜ ಹೇಳಬೇಕೆಂದರೆ, ನಾನೊಂಥರಾ ಲಕ್ಕಿ ಅನಿಸುತ್ತೆ. ನನಗೆ ಹೇಗೆ ಅವಕಾಶ ಸಿಕ್ಕಿತು, ಅರವಿಂದ್‌ ಅವರು ನನಗೆ ಹೇಗೆ “ಕಹಿ’ ಸಿನಿಮಾಗೆ ಸೆಲೆಕ್ಟ್ ಮಾಡಿದರು ಅಂತ ನನಗೆ ಇನ್ನೂ ಗೊತ್ತಿಲ್ಲ. ಅದ್ಯಾರು ನನ್ನ ರೆಫೆರೆನ್ಸ್‌ ಕೊಟ್ಟರೋ ಗೊತ್ತಿಲ್ಲ. ಒಂದು ದಿನ ಅಚಾನಕ್ಕಾಗಿ ಅರವಿಂದ್‌ ಅವರಿಂದ ಫೋನ್‌ ಬಂತು. ಹೀಗೆ “ಕಹಿ’ ಅಂತ ಸಿನಿಮಾ ಮಾಡ್ತಿದ್ದೀವಿ, ನೀವು ಅದರಲ್ಲಿ ಅಭಿನಯಿಸಬೇಕು ಎಂದು ಆಫ‌ರ್‌ ಕೊಟ್ಟರು. ಅವರು ಯಾಕೆ ಆಫ‌ರ್‌ ಕೊಟ್ಟರು ಅಂತ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಬಿಡೋದು ಬೇಡ ಎಂದು ಕೆಲಸ ಬಿಟ್ಟು ಸಿನಿಮಾಗೆ ಬಂದೆ. ಮೊದಲ ಸಿನಿಮಾದಿಂದ ನನಗೆ, ಪ್ರತಿ ಚಿತ್ರಗಳಲ್ಲೂ ಎಕ್ಸ್‌ಪೆರಿಮೆಂಟ್‌ ಮಾಡೋಕೆ ಅವಕಾಶಗಳು ಸಿಗ್ತಿವೆ. ಏನು ಅಂತ ಗೊತ್ತಿಲ್ಲ. ಇಷ್ಟಕ್ಕೂ ನಿರ್ದೇಶಕರು ಯಾವ ನಂಬಿಕೆಯಿಂದ ನನಗೆ ಅವಕಾಶ ಕೊಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಒಳ್ಳೆಯ ಅನುಭವಗಳಂತೂ ಆಗುತ್ತಿವೆ. “ಅಕಿರಾ’ ಮತ್ತು “ಕಹಿ’ ಚಿತ್ರಗಳು ಬಿಡುಗಡೆಯಾಗಿವೆ. “ಅಲ್ಪ ವಿರಾಮ’, “ಎರಡು ಕನಸು’, “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಅಂತ ಚಿತ್ರಗಳನ್ನು ಮುಗಿಸಿದ್ದೀನಿ. ರಾಜ್‌ವರ್ಧನ್‌ ಮತ್ತು ವಸಿಷ್ಠ ಸಿಂಹ ಜೊತೆಗೆ “ಐರಾ’ ಚಿತ್ರ ಮುಗಿದಿದೆ. ತಮಿಳಿನಲ್ಲಿ “ನೇಯ್‌’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದೀನಿ. ಹೀಗೆ ಕೈತುಂಬಾ ಚಿತ್ರಗಳಿವೆ. ಬಿಝಿಯಾಗಿದ್ದೇನೆ’ ಎನ್ನುತ್ತಾರೆ ಕೃಷಿ.

Advertisement

ಮೊದಲು ಬಿಡುಗಡೆಯಾದ “ಅಕಿರಾ’ ಚಿತ್ರದಲ್ಲಿ ಬಬ್ಲಿ ಹುಡುಗಿಯ ಪಾತ್ರವನ್ನು ಕೃಷಿ ತಪಂಡ ನಿರ್ವಹಿಸಿದರೆ, “ಕಹಿ’ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರವನ್ನು ಮಾಡಿದ್ದಾರೆ. “ಕಾಂಟ್ರಾಸ್ಟ್‌ ಅಂತಾರಲ್ಲ, ಅಲ್ಲಿ ಏನು ಪಾತ್ರ ಮಾಡಿದೊ°à, ಇಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರವಿದೆ. ನಿಜ ಏನೆಂದರೆ, “ಕಹಿ’ ಚಿತ್ರದಲ್ಲಿ ನನ್ನ ಪಾತ್ರವೇನಿದೆ, ಅದಕ್ಕೆ ತದ್ವಿರುದ್ಧವಾಗಿ ನಾನಿದ್ದೇನೆ. ನಾನು ಮೂಲತಃ ಒಬ್ಬ ಬಬ್ಲಿ ಹುಡುಗಿ. ಆದರೆ, ಇಲ್ಲಿ ಡಿಪ್ರಶನ್‌ಗೆ ಒಳಗಾಗಿರುವ ಮತ್ತು ಸದಾ ಅಳುತ್ತಿರುವ ಪಾತ್ರವಿದೆ. ಚಿತ್ರದ ಕಥೆಯೇ ಹಾಗಿದೆಯೆನ್ನಿ. ಚಿತ್ರದಲ್ಲಿ ನನ್ನದು ಒಬ್ಬ ಹೌಸ್‌ವೈಫ್ನ ಪಾತ್ರ. ಬೆಂಗಳೂರಿನಲ್ಲಿರುವ ಹೆಣ್ಣವಳು. ನಮಗೆ ಸಂಬಂಧವೇ ಇಲ್ಲದವರು, ಹೇಗೆ ನಮ್ಮ ಜೀವನವನ್ನ ಬದಲಾಯಿಸುತ್ತಾರೆ ಎಂದು ಈ ಚಿತ್ರದಲ್ಲಿ ಹೇಳ್ಳೋಕೆ ಹೊರಟಿದ್ದಾರೆ. ಈಗ ನೋಡಿ, ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. 

ಏನೇನೋ ಆಗುತ್ತಿರುತ್ತೆ ಮತ್ತು ನಾವು ಸುಮ್ಮನಿರಿ¤àವಿ. ಆಮೇಲೆ ಫಾರ್ವರ್ಡ್‌ ಮಾಡಿ ನೋಡಿದರೆ, ಆಗಿದ್ದೆಲ್ಲಾ ಒಳ್ಳೇದಕ್ಕೆ ಅನಿಸೋಕೆ ಶುರುವಾಗುತ್ತೆ. ಚಿತ್ರದಲ್ಲಿ ನಾನು ಒಬ್ಬ ಸಾಮಾನ್ಯ ಹೆಂಗಸನ್ನ ರಿಪ್ರಸೆಂಟ್‌ ಮಾಡುತ್ತಿದ್ದೀನಿ. ಯಾವುದೇ ಮೇಕಪ್‌ ಇಲ್ಲದೆ, ಹೆಚ್ಚು ಸಂಭಾಷಣೆಗಳಿಲ್ಲದ ಪಾತ್ರ ನನ್ನದು. ಮನಸ್ಸಿನಲ್ಲಿ ದುಗುಡವಿದೆ, ತುಂಬಾ ಕಷ್ಟಗಳಿವೆ. ಆದರೂ ಯಾರಿಗೂ ಹೇಳಿಕೊಳ್ಳಲಾಗದಂತಹ ಪಾತ್ರವನ್ನು ಮಾಡಿದ್ದೆ …’

“ನಿಜ ಹೇಳಬೇಕೆಂದರೆ, ಆ ಪಾತ್ರ ಬಹಳ ಕಷ್ಟವಾಯ್ತು. ನಾನು ರಿಯಲ್‌ ಲೈಫ್ನಲ್ಲಿ ಇದಕ್ಕೆ ತದ್ವಿರುದ್ಧ. ಯಾವಾಗಲೂ ನಗುನಗುತ್ತಾ ಇರುತ್ತೀನಿ. ತುಂಬಾ ಮಾತಾಡುತ್ತೀನಿ. ನನಗೆ ಅಳ್ಳೋದಕ್ಕೆ ಗೊತ್ತಿಲ್ಲ. ಅದೇ ಕಾರಣಕ್ಕೆ ನಿರ್ದೇಶಕ ಅರವಿಂದ್‌ ಶಾಸಿ ಅವರಿಗೆ  ನನಗೆ ಏನಾದರೂ ಮಾತಾಡೋದಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳುತ್ತಲೇ ಇದ್ದೆ’ ಎಂದು ನಗುತ್ತಾರೆ ಕೃಷಿ. ಅಂದಹಾಗೆ, ನಿಮಗೆ ಗೊತ್ತಿಲ್ಲದಿರಬಹುದು, ಕೃಷಿ ನಿಜಜೀವನದಲ್ಲಿ ಕ್ಲಾಸಿಕಲ್‌ ಡ್ಯಾನ್ಸರ್‌ ಅಂತೆ. ಅಥ್ಲೀಟ್‌ ಅಂತೆ. ಅಷ್ಟೇ ಅಲ್ಲ, ಥ್ರೋಬಾಲ್‌ ಮತ್ತು ಬ್ಯಾಡ್ಮಿಂಟನ್‌ ಸಹ ಆಡುತ್ತಾರಂತೆ. ಇತ್ತೀಚೆಗೆ ನಡೆದ ಬ್ಯಾಡ್ಮಿಂಟನ್‌ ಲೀಗ್‌ ಪಂದ್ಯಾವಳಿಗಳಲ್ಲಿ ಕೃಷಿ ಸಹ ಪಾಲ್ಗೊಂಡಿದ್ದರು.

ಸರಿ, ನಿಮಗೆ ಯಾವ ತರಹದ ಪಾತ್ರಗಳಿಷ್ಟ, ಏನೆಲ್ಲಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಎಂದರೆ, ಆಕಾಶ ನೋಡುತ್ತಾರೆ ಕೃಷಿ. ಅವರು ಹೇಳುವಂತೆ ಅವರು ತಮ್ಮ ಜೀವನವನ್ನು ಚಿತ್ರರಂಗಕ್ಕೆ ಮುಡಿಪಾಗಿಟ್ಟುಬಿಟ್ಟಿದ್ದಾರಂತೆ. “ನಾನು ನನ್ನ ಲೈಫ್ನ ಚಿತ್ರರಂಗಕ್ಕೆ ಡಿಡಿಕೇಟ್‌ ಮಾಡಿಬಿಟ್ಟಿದ್ದೀನಿ. ನನಗೆ ಯಾವುದೇ ರೀತಿಯ ರೆಸ್ಟ್ರಿಕ್ಷನ್‌ ಇಲ್ಲ. ಫ್ಲೋ ಹೇಗಿದೆಯೋ ಹಾಗೆ ಇರುತ್ತೀನಿ. ಇಂಥದ್ದೇ ಪಾತ್ರ ಮಾಡಬೇಕೆಂದಿಲ್ಲ, ಕನ್ನಡಕ್ಕೇ ಸೀಮಿತವಾಗಬೇಕು ಅಂತೇನಿಲ್ಲ. ಯಾವ ಚಿತ್ರರಂಗದಲ್ಲಿ ಅವಕಾಶ ಸಿಗುತ್ತದೋ, ಅಲ್ಲಿಗೆ ಹೋಗುತ್ತೀನಿ. ಸಂಭಾವನೆ ವಿಚಾರದಲ್ಲೂ ಬಹಳ ಕಟ್ಟುನಿಟ್ಟೇನಲ್ಲ ನಾನು. ಅದಕ್ಕೆ ಸರಿಯಾಗಿ ಇದುವರೆಗೂ ನನಗೆ ಎಲ್ಲೂ ಸಂಭಾವನೆ ವಿಚಾರದಲ್ಲಿ ಸಮಸ್ಯೆಯಾಗಿಲ್ಲ. ಒಂದಂತೂ ಬಹಳವಾಗಿ ನಂಬಿದವಳು ನಾನು. ನಾವೇನು ಕೊಡುತ್ತೀವೋ, ಅದನ್ನು ಪಡೆಯುತ್ತೀವಿ ಅಂತ. ಅದೇ ರೀತಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋದರೆ, ಎಲ್ಲವೂ ಸರಿಯಾಗಿ ಆಗುತ್ತದೆ ಎಂಬ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿಯಾಗಿ 100 ಪರ್ಸೆಂಟ್‌ ಕೆಲಸ ಮಾಡುತ್ತಿದ್ದೀನಿ. ಲೆಟ್ಸ್‌ ಸೀ …’ ಎಂದು ಮಾತು ಮುಗಿಸುತ್ತಾರೆ ಅವರು.

ಸಿಂಪಲ್ಲಾಗೊಂದ್‌ ಬಯೋಡೇಟ

ಹೆಸರು: ಕೃಷಿ ತಪಂಡ
ಹುಟ್ಟಿದ್ದು: ಕೊಡಗಿನಲ್ಲಿ
ಇರೋದು: ಎಚ್‌.ಎಸ್‌.ಆರ್‌. ಲೇಔಟ್‌ನಲ್ಲಿ
ಓದಿದ್ದು: ಬಿ.ಇ ಮತ್ತು ಡಿಪ್ಲೋಮಾ ಇನ್‌ ಇನ್ಫೋರ್ಮೇಷನ್‌ ಸೈನ್ಸ್‌
ಮುಂಚೆ: ಮಲ್ಟಿನ್ಯಾಷನಲ್‌ ಕಂಪನಿಯೊಂದರಲ್ಲಿ ಕೆಲಸ
ಸದ್ಯಕ್ಕೆ: ಚಿತ್ರರಂಗದಲ್ಲಿ ಬಿಝಿ
ಕನ್ನಡ ಚಿತ್ರಗಳು: ಅಕಿರಾ ಮತ್ತು ಕಹಿ, ಎರಡು ಕನಸು, ಕನ್ನಡಕ್ಕಾಗಿ ಒಂದನ್ನು ಒತ್ತಿ, ಅಲ್ಪ ವಿರಾಮ, ಐರಾ ಮತ್ತು ನೇಯ್‌ (ತಮಿಳು)

Advertisement

Udayavani is now on Telegram. Click here to join our channel and stay updated with the latest news.

Next