ಬೆಂಗಳೂರು: ನಾಲ್ಕು ದಿನಗಳಲ್ಲಿ ಸುಮಾರು 15.67 ಲಕ್ಷ ಜನರ ಭೇಟಿ, 5.28 ಕೋಟಿ ರೂ. ವಹಿವಾಟು, ವಿಜ್ಞಾನಿಗಳಿಂದ ಸಲಹೆ ಪಡೆದ ಸಾವಿರಾರು ರೈತರು. ಗ್ರಾಮೀಣ ಕಲೆ-ಸಂಸ್ಕೃತಿಗೆ ವೇದಿಕೆಯಾದ ರೈತರ ಸಂತೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಹಮ್ಮಿಕೊಂಡಿದ್ದ “ಕೃಷಿ ಮೇಳ’ದ ಪ್ರಮುಖಾಂಶಗಳಿವು.
ಇದರೊಂದಿಗೆ ನಾಲ್ಕು ದಿನಗಳ ಮೇಳಕ್ಕೆ ಸೋಮವಾರ ಅದ್ಧೂರಿ ತೆರೆಬಿದ್ದಿತು. ಮೊದಲ ದಿನ ಕೃಷಿ ಮೇಳ ತುಸು ಮಂಕಾಗಿತ್ತು. ನಂತರದ ಎರಡು ದಿನಗಳು ಬೆಂಗಳೂರು ಸುತ್ತಲಿನ ಜನ ಅಕ್ಷರಶಃ ಮುಗಿಬಿದ್ದರು. ಇದರಿಂದ ಜಾತ್ರೆಯ ಸ್ವರೂಪ ಪಡೆದಿತ್ತು. ಶನಿವಾರ ಮತ್ತು ಭಾನುವಾರ ಎರಡೇ ದಿನಗಳಲ್ಲಿ ಅಂದಾಜು 10 ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದರು.
ಯುವ ರೈತರು, ರೈತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಪ್ರೇಮಿಗಳು ಸೇರಿದಂತೆ ಎಲ್ಲ ವರ್ಗದ ಜನಕ್ಕೆ ರೈತರ ಸಂತೆ ಸಾಕ್ಷಿಯಾಯಿತು. ವಿವಿಧ ವಿಭಾಗಗಳು ಸೇರಿ 650ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲಿ ಕೊನೆಯ ದಿನದ ಸಂಜೆವರೆಗೆ ಕೋಟ್ಯಂತರ ರೂ. ವಹಿವಾಟು ನಡೆಯಿತು. ಈ ಪೈಕಿ ಯಂತ್ರೋಪಕರಣ, ಸಿರಿ ಧಾನ್ಯ, ಸಾವಯವ, ತೋಟಗಾರಿಕೆ ಸೇರಿದಂತೆ ಬೆಂಗಳೂರು ಕೃಷಿ ವಿವಿಯ ನೂರಾರು ಮಳಿಗೆಗಳಿದ್ದವು. ಅದರಲ್ಲಿ ಕೂಡ ಲಕ್ಷಾಂತರ ವಹಿವಾಟು ನಡೆದಿದೆ. ಒಟ್ಟಾರೆ ವಹಿವಾಟಿನಲ್ಲಿ ಯಂತ್ರೋ ಪಕರಣಗಳು, ಸ್ವ- ಸಹಾಯ ಸಂಘ ಗಳಲ್ಲಿನ ಉತ್ಪನ್ನಗಳು, ಸಿರಿಧಾನ್ಯ ಗಳ ಖರೀದಿ ಭರಾಟೆ ಹೆಚ್ಚು. ಅಷ್ಟೇ ಅಲ್ಲ, ಸಾವಿರಾರು ಜನ ಯಂತ್ರೋಪಕರಣಗಳ ಖರೀದಿಸಲು ಮುಂಗಡ ಹಣ ಪಾವ ತಿಸಿ, ವಿಳಾಸ ದಾಖಲಿಸಿದ್ದಾರೆ ಎಂದು ವಿಶ್ವವಿದ್ಯಾ ಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸೋಮವಾರ ಕೆಲಸದ ದಿನವಾಗಿದ್ದ ರಿಂದ ಭೇಟಿ ನೀಡುವವರ ಸಂಖ್ಯೆ ತುಸು ಕಡಿಮೆ ಇತ್ತು. ಆದರೆ, ಭಾನುವಾರ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿ ನಡು ವೆಯೂ ಜನಸಾಗರ ಹರಿದು ಬಂದಿತು. ಪಂದ್ಯದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಆಗಮಿಸಿ, ರಜಾ- ಮಜಾ ಅನುಭವಿಸಿದರು. ಇನ್ನು ಪಂದ್ಯದ ಹಿನ್ನೆಲೆ ಲಕ್ಷಾಂತರ ಜನ ಮೇಳದ ಭೇಟಿಯನ್ನು ಕೊನೆಯ ದಿನಕ್ಕೆ ಮುಂದೂಡಿದ್ದರು. ಅವರಿಗೆ “ಪಿಕ್ನಿಕ್ ತಾಣ’ವಾಗಿ ಮಾರ್ಪಟ್ಟಿತು. ಕೆಲಸಕ್ಕೆ ರಜೆ ಹಾಕಿ, ಗ್ರಾಮೀಣ ಸೊಗಡು ಸವಿದರು.
ಸಸ್ಯಾಹಾರಿ ಮಾಂಸಾಹಾರಿ ಖಾದ್ಯಗಳು, ಬಟ್ಟೆಗಳು, ಆಟಿಕೆಗಳು, ನಗರ ಉದ್ಯಾನಕ್ಕೆಬೇಕಾದ ಸಾಮಗ್ರಿಗಳು, ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳು ಭರ್ತಿಯಾಗಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಜನ ಹರಿದು ಬಂದಿದ್ದರಿಂದ ಜಿಕೆವಿಕೆಗೆ ಸೇರುವ ರಸ್ತೆಯುದ್ದಕ್ಕೂ ಸಂಚಾರದಟ್ಟಣೆ ಹೆಚ್ಚಿತ್ತು. ಅದರಲ್ಲೂ ಹೆಬ್ಟಾಳ ಮೇಲ್ಸೇತುವೆಯಂತೂ ಪೀಕ್ ಅವರ್‌ನಲ್ಲಿ ವಾಹನಗಳಿಂದ ತುಂಬಿತುಳುಕುತ್ತಿತ್ತು.
ಸಾಮಾನ್ಯವಾಗಿ ಬೇಕರಿ ಉತ್ಪನ್ನಗಳ ತರಬೇತಿಗೆ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಈ ಕೇಂದ್ರದಲ್ಲಿ ಕನಿಷ್ಠ ಶುಲ್ಕದಲ್ಲಿ ಪ್ರಮಾಣಿಕೃತ ತರಬೇತಿ ಪಡೆಯಬಹುದು. ರಜಾ ಅವಧಿಯಲ್ಲಿ ತರಬೇತಿ ಪಡೆದು, ಹೋಮ್ ಬೇಕಿಂಗ್ ಮಾಡುವ ಚಿಂತನೆ ಇದೆ.
● ಉಷಾ ಎಸ್.ವಿ., ವಿದ್ಯಾರ್ಥಿನಿ
ಮಕ್ಕಳಿಗಾಗಿ ನಿತ್ಯ ಒಂದಲ್ಲ ಒಂದು ವಿಶೇಷ ತಿಂಡಿ ಮಾಡಬೇಕಾಗುತ್ತದೆ. ನಿತ್ಯ ಪಿಜ್ಜಾ, ಕೇಕ್‌ಗೆ ನೂರಾರು ರೂ. ವ್ಯಯಿಸುವುದು ಖರೀದಿಸುವುದು ಸಾಧ್ಯವಾಗದ ಮಾತು. ಹೊರಗಡೆ ತಿಂಡಿ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಹೀಗಾಗಿ ಕೃಷಿ ಮೇಳದಲ್ಲಿ ಪಿಜ್ಜಾ, ಬಿಸ್ಕತ್ತು ತರಬೇತಿ ಪಡೆದು, ತಯಾರಿ ಮಾಡಿದ್ದೇನೆ. ಮಕ್ಕಳು ರುಚಿ ನೋಡಿ ಸಂಭ್ರಮಿಸಿದರು.
● ಭಾಗ್ಯಶ್ರೀ, ಗೃಹಿಣಿ
ಕೃಷಿ ಮೇಳದಲ್ಲಿ “ಆನ್ ಸ್ಪಾಟ್ ಡು ಆಂಡ್ ಟೇಕ್’ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಧಿಕ ಸಂಖ್ಯೆಯಲ್ಲಿ ಪಿಜ್ಜಾ ಮಾಡಿ ಗ್ರಾಹಕರು ಸಂಭ್ರಮಿಸಿದರು. ಗೃಹಿಣಿಯರು, ಯುವಜನರು ಮುಂದೆ ಬಂದು ಕೋರ್ಸ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
● ಡಾ.ಸವಿತಾ ಎಂ., ಸಂಯೋಜಕರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನ ಸಂಸ್ಥೆ, ಜಿಕೆವಿಕೆ.