Advertisement

ದೇಶದಲ್ಲೇ ಮೊದಲು  ಈರುಳ್ಳಿ ಕಾಂಡ ಕತ್ತರಿಸುವ ಯಂತ್ರ

06:00 AM Nov 16, 2018 | |

ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ದೇಶದಲ್ಲಿಯೇ ಮೊದಲ ಬಾರಿಗೆ ಈರುಳ್ಳಿ ಕಾಂಡ ಕೊಯ್ಯುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ ಕೃಷಿ ಮೇಳ ಆರಂಭವಾಗಿದ್ದು, ಮೇಳದಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ.

Advertisement

ಐದು ಜನ ಇಡೀ ದಿನ ಕುಳಿತು ಮಾಡುವ ಕೆಲಸವನ್ನು ಈ ಯಂತ್ರ ಕೇವಲ ಒಂದು ತಾಸಿನಲ್ಲಿ ಮಾಡಿ ಮುಗಿಸುತ್ತದೆ. ಇದರಿಂದ ರೈತರಿಗೆ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಮೂರು ತಿಂಗಳ ಹಿಂದಷ್ಟೇ ಅಭಿವೃದ್ಧಿಪಡಿಸಿರುವ ಈ ಯಂತ್ರವನ್ನು ಮೇಳದ ಯಂತ್ರೋಪಕರಣಗಳ ವಿಭಾಗದಲ್ಲಿ ಕಾಣಬಹುದು.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ 300 ಕೆ.ಜಿ ಈರುಳ್ಳಿ ಕಾಂಡ ಕೊಯ್ಯುತ್ತಾನೆ. ಐದು ಜನ ಸೇರಿ ಹೆಚ್ಚೆಂದರೆ, 1,500 ಕೆ.ಜಿ ಕತ್ತರಿಸಬಹುದು. ಅವರಿಗೆ ತಲಾ 500 ರೂ.ಕೂಲಿ ನೀಡಬೇಕು. ಆದರೆ, ವಿದ್ಯುತ್‌ಚಾಲಿತ ಈರುಳ್ಳಿ ಕಾಂಡ ಕತ್ತರಿಸುವ ಯಂತ್ರವು ಆ ಐದು ಜನ ಮಾಡುವ ಕೆಲಸವನ್ನು ಕೇವಲ ಒಂದು ತಾಸಿನಲ್ಲಿ ಮಾಡುತ್ತದೆ. 4 ಎಚ್‌ಪಿ ಸಾಮರ್ಥ್ಯದ ಈ ಯಂತ್ರಕ್ಕೆ ಗಂಟೆಗೆ 1ರಿಂದ 1.5 ಯೂನಿಟ್‌ ವಿದ್ಯುತ್‌ ಬೇಕಿದ್ದು, ಶೇ.100ರಷ್ಟು ಕಾರ್ಯಕ್ಷಮತೆ ಹೊಂದಿದೆ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಐಐಎಚ್‌ಆರ್‌ನ ತಾಂತ್ರಿಕ ಇಂಜಿನಿಯರ್‌ ದಯಾನಂದ ತಿಳಿಸಿದರು.

ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇರಲಿ ಅಥವಾ ಇಲ್ಲದಿರಲಿ ಬೆಳೆದ ರೈತರಂತೂ ಅದರ ಕಾಂಡವನ್ನು ಕತ್ತರಿಸಿಯೇ ಮಾರುಕಟ್ಟೆಗೆ ತರಬೇಕು. ಇದಕ್ಕಾಗಿ ಹಣ ಮತ್ತು ಸಮಯ ಎರಡೂ ವ್ಯಯ ಆಗುತ್ತಿದೆ. ಈ ಯಂತ್ರದಿಂದ ಅದು ಉಳಿತಾಯ ಆಗಲಿದೆ. ಉತ್ತರ ಕರ್ನಾಟಕದಲ್ಲಿ ಹೇರಳವಾಗಿ ಈರುಳ್ಳಿ ಬೆಳೆಯುವುದರಿಂದ ಆ ಭಾಗದ ರೈತರಿಗೆ ಹೆಚ್ಚು ಅನುಕೂಲ ಆಗಲಿದೆ. ಶೀಘ್ರದಲ್ಲಿ ಇದಕ್ಕೆ ಗ್ರೇಡಿಂಗ್‌ ಯಂತ್ರವನ್ನೂ ಅಳವಡಿಸಲಿದ್ದು, ಇದರಿಂದ ರೈತರು ಉತ್ತಮ ಮತ್ತು ಮಧ್ಯಮ ಗಾತ್ರದ ಬೆಳೆಯನ್ನು ಸುಲಭವಾಗಿ ಬೇರ್ಪಡಿಸಿ, ಹೆಚ್ಚು ಲಾಭ ಗಳಿಸಲು ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಮನೆಯಲ್ಲಿ ಕುಳಿತೇ ಪ್ರಾಣಿ-ಪಕ್ಷಿ ಓಡಿಸಿ!
ನಿಮ್ಮ ಹೊಲಕ್ಕೆ ದಾಳಿ ಇಟ್ಟ ಪ್ರಾಣಿ-ಪಕ್ಷಿಗಳನ್ನು ನೀವು ಕುಳಿತಲ್ಲಿಂದಲೇ ಓಡಿಸಬಹುದು! ಇದಕ್ಕಾಗಿ ಜಿಕೆವಿಕೆ ಕೃಷಿ ಇಂಜಿನಿಯರಿಂಗ್‌ ಮಹಾವಿದ್ಯಾಲಯ, ಮೊಬೈಲ್‌ ಫೋನ್‌ ಚಾಲಿತ ಸೌರಶಕ್ತಿ ಹೂಟರ್‌ ಯಂತ್ರ ಪರಿಚಯಿಸಿದೆ. ಈ ಯಂತ್ರಕ್ಕೆ ಸೈರನ್‌ ಮತ್ತು ತಟ್ಟೆ ಅಳವಡಿಸಲಾಗಿದೆ. ಅದರಲ್ಲಿ ಟೈಮ್‌ ನಿಗದಿಪಡಿಸಲಾಗಿರುತ್ತದೆ. ಅದರಂತೆ ಸೈರನ್‌ ಸದ್ದು ಮಾಡಲು ಆರಂಭಿಸುತ್ತದೆ. ಮತ್ತೂಂದೆಡೆ ತಟ್ಟೆ ಬಡಿಯಲು ಶುರುವಾಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ದ್ರೋಣಾಚಾರಿ ಮಾನ್ವಿ ತಿಳಿಸುತ್ತಾರೆ.

Advertisement

ಸಾಮಾನ್ಯವಾಗಿ ಪ್ರಾಣಿ-ಪಕ್ಷಿಗಳು ಲಗ್ಗೆ ಇಡುವ ಸಮಯ ರೈತರಿಗೆ ಗೊತ್ತಿರುತ್ತದೆ. ಆ ಸಮಯದ ಆಸುಪಾಸು ನಿರಂತರವಾಗಿ ಸೈರನ್‌ ಮತ್ತು ತಟ್ಟೆ ಸದ್ದುಮಾಡುವಂತೆ ಸಮಯ ನಿಗದಿಪಡಿಸಿದರೆ ಸಾಕು. ಅಟೋಮೆಟಿಕ್‌ ಆಗಿ ಇದು ಕಾರ್ಯ ನಿರ್ವಹಿಸುತ್ತದೆ. ಇದರ ಸದ್ದಿನಿಂದ ಪ್ರಾಣಿ-ಪಕ್ಷಿಗಳು ಓಡಿಹೋಗುತ್ತವೆ. ಇದರಿಂದ ರೈತರು ನಿತ್ಯ ಬೆಳೆಗಳನ್ನು ಹಾಳು ಮಾಡುವ ಪ್ರಾಣಿ-ಪಕ್ಷಿಗಳನ್ನು ಕಾಯಲು ಜಮೀನಿಗೆ ಹೋಗಬೇಕಿಲ್ಲ. ಕುಳಿತಲ್ಲಿಂದಲೇ ನಿಯಂತ್ರಿಸಬಹುದು. ಯಂತ್ರದಲ್ಲಿ ಜಿಎಸ್‌ಎಂ ಮಾಡ್ಯುಲ್‌ ಅಳವಡಿಸಲಾಗಿರುತ್ತದೆ. ಅದಕ್ಕೆ ಟೈಮ್‌ ಕೂಡ ನಿಗದಿಪಡಿಸಲಾಗಿರುತ್ತದೆ. ಸುಮಾರು ಎರಡು ಹೆಕ್ಟೇರ್‌ ಸುತ್ತಮುತ್ತ ಪ್ರಾಣಿ-ಪಕ್ಷಿಗಳು ಬರದಂತೆ ಕಾಯುತ್ತದೆ. ಇದರ ಬೆಲೆ 5,500 ರೂ. ಸೂರ್ಯಕಾಂತಿ, ಭತ್ತ, ರಾಗಿ ಸೇರಿದಂತೆ ಎಲ್ಲ ಪ್ರಕಾರದ ಬೆಳೆಗಳಿಗೂ ಇದನ್ನು ಅಳವಡಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next