Advertisement
ಶರವನದಲ್ಲಿ ನಮ್ಮಿಬ್ಬರನ್ನೂ ಕಂಡ ಶಂತನು ಚಕ್ರವರ್ತಿಗಳು ಕನಿಕರಿಸಿ ಹಸ್ತಿನಾವತಿಗೆ ಕರೆತಂದರಂತೆ. ಕೆಲವು ಸಂವತ್ಸರಗಳ ನಂತರ ನಮ್ಮ ತಂದೆ ಶರದ್ವಂತರು ಹಸ್ತಿನಾವತಿಯ ಅರಮನೆಗೆ ಬಂದಿದ್ದರು. ಅಣ್ಣನಿಗೆ ಉಪನಯನಾದಿ ಸಂಸ್ಕಾರಗಳನ್ನು ನೆರವೇರಿಸಿ, ಧನುರ್ವಿದ್ಯಾ ರಹಸ್ಯಗಳನ್ನು ಉಪದೇಶಿಸಿ, ಅಸ್ತ್ರವಿದ್ಯಾವಿಶಾರದನನ್ನಾಗಿ ಮಾಡಿದರು. ತಂದೆಯವರಿಗೆ ಮಗಳಾದ ನನ್ನ ಬಗ್ಗೆ ಯಾವ ಕರ್ತವ್ಯವೂ ನೆನಪಿಗೆ ಬಾರದೇ ಇದ್ದದ್ದು ನನ್ನ ದುರಾದೃಷ್ಟವೇ ಸರಿ.
Related Articles
Advertisement
ಮಲಗಿದ್ದ ಹಾವನ್ನು ಬಡಿದೆಬ್ಬಿಸಿದಂತಾಗಿತ್ತು. ನಮ್ಮವರ ಒಳಗಿದ್ದ ದ್ವೇಷದ ಬೆಂಕಿ ಭುಗಿಲೆದ್ದಿತ್ತು. “ಎಲವೋ ದ್ರುಪದ, ಸ್ನೇಹಿತನಂತೆ ನಡೆಸಿಕೊಳ್ಳದೆ, ಪರಿಚಯವೂ ಇಲ್ಲದವನಂತೆ ಅವಮಾನ ಮಾಡಿದೆಯಲ್ಲವೇ? ನನ್ನದೇ ಶಿಷ್ಯನನ್ನು ಸಿದ್ಧಗೊಳಿಸಿ, ನಿನ್ನನ್ನು ಪರಾಭವಗೊಳಿಸದಿದ್ದರೆ ನಾನು ದ್ರೋಣನೇ ಅಲ್ಲ. ಇದು ನನ್ನ ಶಪಥ’ ಎನ್ನುತ್ತಾ ದ್ರುಪದರ ಅರಮನೆಯಿಂದ ಹೊರಬಂದರು. ಅಂದಿನಿಂದ ಕನಸಿನಲ್ಲಿಯೂ-ಮನಸಿನಲ್ಲಿಯೂ “ಶಿಷ್ಯನೊಬ್ಬನನ್ನು ಸಿದ್ಧಗೊಳಿಸಬೇಕು. ದ್ರುಪದ ಮಾಡಿದ ಅವಮಾನಕ್ಕೆ ಪ್ರತೀಕಾರ ಮಾಡಬೇಕು.’ ಎಂಬುದೊಂದೇ ನನ್ನವರ ಜಪವಾಯಿತು!
ನಂತರದಲ್ಲಿ ನನ್ನ ಮೇಲಾಗಲೀ, ಮಗ ಅಶ್ವತ್ಥಾಮನ ಮೇಲಾಗಲಿ ಅವರ ಗಮನ ಇರಲೇ ಇಲ್ಲ. “ದ್ವೇಷ ಸಾಧನೆ ಬ್ರಾಹ್ಮಣರಿಗೆ ಶ್ರೇಯಸ್ಕರವಲ್ಲ. ಬಿಟ್ಟು ಬಿಡಿ. ದ್ರುಪದ ಅವಮಾನ ಮಾಡಿದರೆಂದು ನೀವು ಅವರನ್ನು ಅವಮಾನಿಸುತ್ತೀರಿ. ಆತ ಅದರಿಂದ ಕ್ರೋಧಗೊಂಡು ಮತ್ತೆ ನಿಮ್ಮ ಮೇಲೆ ದ್ವೇಷ ಸಾಧನೆ ಮಾಡುತ್ತಾರೆ. ಇದಕ್ಕೆ ಕೊನೆಯೆಲ್ಲಿರುತ್ತದೆ? ಸುಮ್ಮನೆ ನಮ್ಮ ಜೀವನಕ್ಕಾಗುವಷ್ಟು ಆದಾಯ ಬರುವ ಯಾವುದಾದರೂ ಮಾರ್ಗ ಕಂಡುಕೊಳ್ಳಿ. ಸಾಕು’ ಎಂಬ ನನಗೆ ತೋಚಿದ ಮಾತುಗಳನ್ನು ಆಗಾಗ ಹೇಳುತ್ತಿದ್ದೆ. ಆದರೆ, ದ್ರೋಣರಿಗೆ ನನ್ನ ಮಾತು ಪಥ್ಯವಾಗುತ್ತಿರಲಿಲ್ಲ. “ನಿನಗೇನು ಗೊತ್ತಾಗುತ್ತದೆ? ಸುಮ್ಮನಿರು’ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದರು.
ಹಸ್ತಿನಾವತಿಯ ರಾಜಾಶ್ರಯ ದೊರೆತ ಮೇಲೆ ಬದುಕು ಬದಲಾಯಿತು. ಉಂಡುಡುವುದಕ್ಕೆ ಯಾವ ಕೊರತೆಯೂ ಇರಲಿಲ್ಲ. ಆದರೆ, ಮಗ ದಾರಿ ತಪ್ಪಲಾರಂಭಿಸಿದ. ಅವನು ದುರ್ಯೋಧನನನ್ನು ಓಲೈಸತೊಡಗಿದ್ದು ನನ್ನ ಗಮನಕ್ಕೆ ಬರುತ್ತಲೇ ಇತ್ತು. ಗಂಡನಿಗೋ ತಾನು ಕುರುವಂಶದ ಧನುರ್ವಿದ್ಯಾ ಗುರುವೆಂಬ ಹಮ್ಮು. ಮಗನಿಗೆ ತಾನು ರಾಜಕುಮಾರನ ಗೆಳೆಯನೆಂಬ ಭ್ರಮೆ! ತಮ್ಮದೇ ಲೋಕದಲ್ಲಿ ಅವರಿಬ್ಬರೂ ಕಳೆದು ಹೋಗಿದ್ದರು. ನಾನು ಮೌನವನ್ನೇ ಆಭರಣವೆಂದು ಧರಿಸಿಕೊಂಡೆ.
ಧರ್ಮದ ಪಕ್ಷ ವಹಿಸದ ದ್ರೋಣರ ಬಗ್ಗೆ ನನಗೇ ಅಸಮಾಧಾನವಿತ್ತು. ಭೀಷ್ಮರು ಕೌರವರ ಪರವಾಗಿ ನಿಂತರೆಂದು ತಾನೂ ನಿಲ್ಲುವುದೇ? ಪಾಂಡವರಿಗೆ ಅರ್ಧ ರಾಜ್ಯ ಕೊಡಬೇಕೆಂಬ ಪ್ರಸ್ತಾಪ ಬಂದಾಗ “ನೀವು ಯಾವ ಕಾಲಕ್ಕೂ ಹಸ್ತಿನಾವತಿಯನ್ನು ಮತ್ತು ನನ್ನನ್ನು ಬಿಟ್ಟು ಹೋಗುವುದಿಲ್ಲ ಎಂಬ ಮಾತು ಕೊಟ್ಟರೆ ಮಾತ್ರ ಪಾಂಡವರಿಗೆ ರಾಜ್ಯದಲ್ಲಿ ಪಾಲು ಕೊಡುವ ನಿರ್ಧಾರಕ್ಕೆ ಒಪ್ಪುವೆ’. ಎಂದು ಮಾತಿನಲ್ಲಿಯೇ ಭೀಷ್ಮರನ್ನು ಕಟ್ಟಿ ಹಾಕಿದ್ದರಂತೆ ಧೃತರಾಷ್ಟ್ರ ಮಹಾಪ್ರಭುಗಳು.
ನನ್ನವರ ಸ್ವಂತ ಬುದ್ಧಿ ಹೋಯಿತೆಲ್ಲಿಗೆ? ಕೌರವರ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರಿಂದ ಅರಮನೆಯ ಅಧರ್ಮದ ಪರಿಣಾಮದ ಪಾಲನ್ನು ಹೊರುವುದು ನನ್ನವರಿಗೆ ಅನಿವಾರ್ಯವಾಗಿ ಹೋಯಿತು. ಅವರವರು ಮಾಡಿದ ಕರ್ಮ ಅವರವರಿಗೆ. ನನ್ನವರಿಗೆ ಕೌರವರ ಪಕ್ಷದಲ್ಲೇ ಉಳಿಯುವ ಅನಿವಾರ್ಯವಿತ್ತೇ? ಗುರು ಎಂಬ ಪಟ್ಟದಲ್ಲಿದ್ದು ನಿಷ್ಪಕ್ಷಪಾತವಾಗಿ ವ್ಯವಹರಿಸಬೇಕಿತ್ತಲ್ಲವೇ? ಕೊನೆಯ ಪಕ್ಷ ವಿದುರನಂತೆ “ತಾನು ಯಾರ ಪಕ್ಷವನ್ನೂ ವಹಿಸುವುದಿಲ್ಲ’ ಎಂಬ ನಿರ್ಧಾರವನ್ನು ತಳೆಯುವುದಕ್ಕೆ ನನ್ನವರಿಗೆ ಯಾಕೆ ಸಾಧ್ಯವಾಗಲಿಲ್ಲ? ನಮ್ಮವರಿಗೂ ಕೌರವನ ಸೇನಾಧಿಪತಿಯಾಗುವ ಆಸೆ ಇತ್ತೇ?
ತದನಂತರರೆಲ್ಲಾ ಅವಾಂತರಗಳೇ. ಕುರುಕ್ಷೇತ್ರದಲ್ಲಿ ಅದೆಷ್ಟು ಜನರ ಮಾರಣಹೋಮ! ಬಾಲಕ ಅಭಿಮನ್ಯುವನ್ನು ನನ್ನವರು ಮೋಸದಿಂದ ಕೊಲ್ಲಿಸಿದರಂತೆ. ಕೌರವನನ್ನು ಮೆಚ್ಚಿಸಬೇಕೆಂಬ ಹುಚ್ಚಿನಲ್ಲಿ ಅದೇಕೆ ಈ ಅನರ್ಥವನ್ನು ಮಾಡಿದರು? ಕೌರವನ ಪರ ನಿಂತಿದ್ದ ಪಾಪದ ಪರಿಣಾಮವಾಗಿ ಕುರುಕ್ಷೇತ್ರದಲ್ಲಿ ನನ್ನವರ ಶಿರಚ್ಛೇದನವಾಗಿತ್ತು. ಕುರುಕ್ಷೇತ್ರ ಯುದ್ಧದ ಕೊನೆ ಕೊನೆಯ ದಿನಗಳಿವು. ಅಶ್ವತ್ಥಾಮ ರಾತ್ರೋರಾತ್ರಿ ಪಾಂಡವರ ಶಿಬಿರಕ್ಕೆ ನುಗ್ಗಿ, ನಿದ್ದೆಯಲ್ಲಿದ್ದ ಉಪಪಾಂಡವರ ಶಿರಗಳನ್ನು ಕತ್ತರಿಸಿದ್ದ! ಅಯ್ಯೋ, ಕ್ಷತ್ರಿಯ ಕುಮಾರರು ಯುದ್ಧಭೂಮಿಯಲ್ಲಿ ಸಾವನ್ನಪ್ಪುವುದು ಸಹಜವೇ. ಆದರೆ, ಅಪರಾತ್ರಿಯಲ್ಲಿ ಹೀಗೆ ಮಲಗಿದ್ದ ಮಕ್ಕಳನ್ನು ಕೊಂದದ್ದು ಮಹಾಪರಾಧ. ಈ ತಪ್ಪನ್ನು ಮಾಡಿದ್ದು ನನ್ನ ಮಗ! ಅಯ್ಯೋ!
ನಿಶ್ಪಾಂಡವ ಪೃಥ್ವಿಯನ್ನು ಸೃಷ್ಟಿಸುವೆನೆಂಬ ಹುಚ್ಚಿನಲ್ಲಿ ಉತ್ತರೆಯ ಗರ್ಭಕ್ಕೇ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ ಮಗನೀಗ ಮತಿಭ್ರಮಣೆಯಿಂದ ಊರೂರು ಅಲೆಯುತ್ತಿದ್ದಾನಂತೆ. “ನನ್ನ ಮಗ ಚಿರಂಜೀವಿ’ ಎಂದು ತಿಳಿದಾಗ ಸಂತೋಷಪಟ್ಟಿದ್ದೆ. ಆದರೆ, ಹೀಗಾಗುತ್ತದೆಂದು ಮೊದಲೇ ತಿಳಿದಿದ್ದರೆ ನಾನು ಮಗನನ್ನು ಹೆರುತ್ತಲೇ ಇರಲಿಲ್ಲ… ಧಿಕ್ಕಾರವಿರಲಿ ನನ್ನ ಮಾತೃತ್ವಕ್ಕೆ!
-ಸುರೇಖಾ ಭೀಮಗುಳಿ