ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದ ವಿವಿಧ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಅಗತ್ಯವಿರುವ ಕ್ರಿಯಾಯೋಜನೆ ತಯಾರಿಸಿದ್ದು ಈ ಸಂಬಂಧ ಕಾಮಗಾರಿ ಅನುಷ್ಠಾನಕ್ಕಾಗಿ ಪರಿಶೀ ಲನೆ ನಡೆಸಲಾಗಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ನಗರದಲ್ಲಿ ಕೈಗೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಪರಿವೀಕ್ಷಣೆಗಾಗಿ ನಗರ ಸಂಚಾರ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎಸ್‌ಎಫ್ಸಿ ಅನುದಾನದಡಿ 38 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪರಿಶಿಷ್ಟಜಾತಿ ಉಪಯೋಜನೆಯಡಿ 50 ಲಕ್ಷ ರೂ. ಪರಿಶಿಷ್ಟ ವರ್ಗ ಘಟಕ ಯೋಜನೆಯಡಿ 1 ಕೋಟಿ ರೂ. ಅನುದಾನ ಸಹ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಡಾವಣೆಗಳಿಗೆ ಕಾಮಗಾರಿ ಹಮ್ಮಿಕೊಳ್ಳುವ ಸಂಬಂಧ ಅಧಿಕಾರಿ ಗಳು ಕ್ರಿಯಾ ಯೋಜನೆ ತಯಾರು ಮಾಡಿ ದ್ದಾರೆ. ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅನುಷ್ಠಾನ ಪ್ರಕ್ರಿಯೆ ಕೈಗೊಳ್ಳಲು ಪೂರ್ವಭಾವಿಯಾಗಿ ವ್ಯಾಪಕವಾಗಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ನಗರದ 31 ವಾರ್ಡ್‌ಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕಾಮಗಾರಿ ಕೈಗೊಳ್ಳಲು 30 ಲಕ್ಷ ರೂ. ಅನು ದಾನ ನಿಗದಿ ಮಾಡಲಾಗಿತ್ತು. ಆದರೆ ಕೊಳಚೆ ನಿರ್ಮೂಲನಾ ಮಂಡಳಿಯ ನೂತನ ಅಧ್ಯಕ್ಷರನ್ನು ಭೇಟಿ ಮಾಡಿ ಹೆಚ್ಚುವರಿ ನೆರವು ನೀಡುವಂತೆ ಕೋರಿದ್ದೆ. ನಮ್ಮ ಮನವಿಗೆ ಅಧ್ಯಕ್ಷರು ಸ್ಪಂದಿಸಿದ್ದು ತಲಾ 1 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಅನುದಾನಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಮುಂದಿನ ಪ್ರಕ್ರಿಯೆಗೆ ಅನುವು ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಅಭಿವೃದ್ಧಿ ಕಾಮಗಾರಿಗೆ ಸೂಚನೆ: ಚನ್ನೀಪುರದಮೋಳೆಯಲ್ಲಿ ಉಪ್ಪಾರ ಸಮುದಾಯ ವಾಸವಾಗಿದ್ದು ಈ ವಾರ್ಡ್ ಕೊಳಚೆ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಸೇರಿರಲಿಲ್ಲ. ಹೀಗಾಗಿ ಇಲ್ಲಿಯೂ ಮಂಡಳಿಯಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಸಲುವಾಗಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಈ ಭಾಗದಲ್ಲಿ ರಾಜಕಾಲುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು.
ಎಲ್ಲ ಬಡಾವಣೆಗಳಿಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ, ಶೌಚಾಲಯ ಸೇರಿದಂತೆ ಎಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಬದ್ಧವಾಗಿದ್ದು ಲಭ್ಯವಿರುವ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆಯೂ ಸಾಕಷ್ಟು ವಾರ್ಡ್‌ಗಳಿಗೆ ಭೇಟಿ ನೀಡಿ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಲಾಗಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಕಳಪೆ ಕಾಮಗಾರಿಗೆ ಅಸಮಾಧಾನ: ವಾರ್ಡ್ ನಂ. 17, 23, 24 ಭಾಗದ ಬಡಾವಣೆಗಳಿಗೆ ಭೇಟಿ ನೀಡಿದ ಪುಟ್ಟರಂಗಶೆಟ್ಟಿ ಅವರು, ಅಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ, ರಸ್ತೆ, ಇನ್ನಿತರ ಕಾಮಗಾರಿ ಪರಿಶೀಲಿಸಿದರು. ಕೆಲವೆಡೆ ಕಾಮಗಾರಿ ನಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಗುಣಮಟ್ಟದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ನಗರಸಭಾಧ್ಯಕ್ಷೆ ಎಸ್.ಎನ್.ರೇಣು ಕಾ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಸದಸ್ಯರಾದ ಚಿನ್ನಸ್ವಾಮಿ, ಕೆಂಪರಾಜು, ಮುಖಂ ಡರಾದ ಚಿಕ್ಕಮಹದೇವು, ಜಯಕುಮಾರ್, ಪೌರಾಯುಕ್ತ ರಾಜಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತ್ಯ ಮೂರ್ತಿ, ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.