Advertisement

ಕಟಪಾಡಿಯ ಮಟ್ಟು ಸೇತುವೆಗೆ ಸಂಪರ್ಕ: ರಾಜಧಾನಿಯಿಂದ ದೌಡಾಯಿಸಿದ ಅಧಿಕಾರಿಗಳು

08:08 AM Mar 04, 2022 | Team Udayavani |

ಕಟಪಾಡಿ: ಕಾಮಗಾರಿ ಬಹುತೇಕ ಮುಗಿದರೂ ರಸ್ತೆ ಸಂಪರ್ಕ ರಹಿತ, ಸಾರ್ವಜನಿಕರಿಗೆ ಕೈಗೆಟುಕದ ಮಟ್ಟು ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಮುಂದಡಿ ಇರಿಸಲು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್‌. ಮೆಂಡನ್‌ ನೇತೃತ್ವದಲ್ಲಿ ರಾಜ್ಯದ ರಾಜಧಾನಿಯಿಂದ ಕೆಆರ್‌ಡಿಸಿಎಲ್‌ ಅಧಿಕಾರಿಗಳ ದಂಡು ಉಡುಪಿ ಜಿಲ್ಲೆಯ ಕಾಪು ತಾ|ನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು  ಸೇತುವೆ  ನಿರ್ಮಾಣ ಪ್ರದೇಶಕ್ಕೆ  ಮಾ. 3ರಂದು ದೌಡಾಯಿಸಿ ಕಾರ್ಯಾಚರಣೆಗಿಳಿದಿದೆ.

Advertisement

“ಉದಯವಾಣಿ ಸುದಿನ’ದಲ್ಲಿ  ಫೆ. 23ರಂದು “ಸಾರ್ವಜನಿಕರಿಗೆ ಕೈಗೆಟುಕದ ಮಟ್ಟು ಸೇತುವೆ’ ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು.

ಕೆಆರ್‌ಡಿಸಿಎಲ್‌ ಬೆಂಗಳೂರು ಇದರ ಅಧೀಕ್ಷಕ ಅಭಿಯಂತ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ರವೀಂದ್ರನಾಥ್‌, ಕೆ.ಆರ್‌.ಡಿ.ಸಿ.ಎಲ್‌. ಮೈಸೂರು ಇದರ ಕಾರ್ಯಪಾಲಕ ಅಭಿಯಂತ ರಘು ಎಲ್‌.,  ಹಾಸನ ಉಪವಿಭಾಗೀಯ ಅಭಿಯಂತ ಮಂಜೇಶ್‌,  ಕೆ.ಆರ್‌.ಡಿ.ಸಿ.ಎಲ್‌. ಬೆಂಗಳೂರು ಇದರ ತಹಶೀಲ್ದಾರ್‌ ಸೌಮ್ಯಾ ರಾವ್‌ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ನಿರ್ಮಾಣ ಹಂತದಲ್ಲಿರುವ ಮಟ್ಟು ಸೇತುವೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಸರ್ವೇ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.

ಆ ಮೂಲಕ ಮಟ್ಟು ಗ್ರಾಮದ ರಾಜಪಥವಾಗಿ ತೆರೆದುಕೊಳ್ಳಬೇಕಿದ್ದ  ಬೃಹತ್‌ ಯೋಜನೆಯಡಿ ನಿರ್ಮಾಣಗೊಂಡ ನೂತನ ಮಟ್ಟು ಸೇತುವೆಯು ರಸ್ತೆಯ ಸಂಪರ್ಕ ಪಡೆಯುವಲ್ಲಿ ಎರಡು ತಿಂಗಳೊಳಗಾಗಿ ಸಫಲಗೊಳ್ಳಲಿದೆ ಎಂಬ ಅಧಿಕಾರಿಗಳ ಭರವಸೆಯ ಮೂಲಕ ಹರಿಯುತ್ತಿರುವ ಮಟ್ಟು ಹೊಳೆಯಲ್ಲಿ ತೇಲುವಂತೆ ಭಾಸವಾಗುತ್ತಿ¤ದ್ದ ಸೇತುವೆಯು ರಸ್ತೆ ಸಂಪರ್ಕ ಪಡೆದು ಈ ಭಾಗದ ಗ್ರಾಮಸ್ಥರ, ಪ್ರವಾಸಿಗರ  ಕನಸು ನನಸಾಗಲಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ.

ಕರ್ನಾಟಕ ರೋಡ್‌ ಡೆವಲಪ್‌ಮೆಂಟ್‌ ಕಾರ್ಪೋರೇಶನ್‌ ಲಿ. ಯೋಜನೆಯಡಿ 9,12,07,158 ರೂ. ಅನುದಾನವನ್ನು ಬಳಸಿಕೊಂಡು 145.88 ಮೀ ಉದ್ದ, 10.50 ಮೀ. ಅಗಲದ ಸೇತುವೆಯ ನಿರ್ಮಾಣ ಕೆಲಸ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಆದರೆ ಸೇತುವೆಯ ಇಕ್ಕೆಲಗಳಲ್ಲಿ ರಸ್ತೆಯ ಸಂಪರ್ಕ ಇಲ್ಲದೆ ಬೃಹತ್‌ ಯೋಜನೆಯೊಂದು ನಿಷ್ಪ್ರಯೋಜಕವಾಗುವ ಭೀತಿಯು ಮುಕ್ತಿ ಕಾಣುವ ಇಂಗಿತ ವ್ಯಕ್ತವಾಗುತ್ತಿದೆ.

Advertisement

ಕೋಟೆ-ಮಟ್ಟು ಗ್ರಾಮವು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು  ಸೇತುವಾಗಿ ನೂತನ ಮಟ್ಟು ಸೇತುವೆಯು ಸಿಂಹಪಾಲು ಪಡೆದುಕೊಳ್ಳಲಿದೆ ಎಂಬ ಅಭಿವೃದ್ಧಿಯ ಕನಸು ನನಸಾಗುವ ಸಂತಸದ ಛಾಯೆ ನಾಗರಿಕರದ್ದಾಗಿದೆ.

ಈ ಸಂದರ್ಭ ಕೋಟೆ ಗ್ರಾ.ಪಂ. ಸದಸ್ಯರಾದ ನಾಗರಾಜ ಮಟ್ಟು, ರಮೇಶ್‌ ಪೂಜಾರಿ, ನ್ಯಾಯವಾದಿ ಕೆ. ಗಣೇಶ್‌ ಕುಮಾರ್‌, ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್‌ ಡಿ. ಬಂಗೇರ, ಪ್ರಮುಖರಾದ ಗೋಪಾಲಕೃಷ್ಣ ರಾವ್‌ ಮಟ್ಟು, ಸಂತೋಷ್‌ ಮೆಂಡನ್‌, ಸುಜಿತ್‌, ಪ್ರಾಜೆಕ್ಟ್ ಎಂಜಿನಿಯರ್‌ ಸಂತೋಷ್‌ ಎಂ.ಸಿ., ಗುತ್ತಿಗೆದಾರ ರೋವನ್‌ ಡಿ’ಕೋಸ್ಟಾ,  ಕೋಟೆ ಗ್ರಾಮ ಲೆಕ್ಕಿಗ ಲೋಕನಾಥ್‌ ಲಮ್ಹಾಣಿ, ಕಾಪು ಪೊಲೀಸ್‌ ಠಾಣಾ ಎ.ಎಸೈ. ದಯಾನಂದ್‌, ರಾಜೇಂದ್ರ ಮಣಿಯಾಣಿ, ಭೂಸಂತ್ರಸ್ತರು ಉಪಸ್ಥಿತರಿದ್ದರು.

9 ಕೋಟಿ 12 ಲಕ್ಷ  ರೂ. ಗೆ ಸೇತುವೆ ಮಂಜೂರಾತಿ ಪಡೆದಿರುತ್ತದೆ. ಕೋವಿಡ್‌ ಕಾರಣದಿಂದ ಸ್ವಲ್ಪ ವಿಳಂಬಗೊಂಡಿದ್ದು, ಈಗಾಗಲೇ ಸೇತುವೆಯ ನಿರ್ಮಾಣ ಕೆಲಸ ಕಾರ್ಯ ಬಹುತೇಕ ಪೂರ್ಣಗೊಂಡಿದೆ.  ಭೂಸ್ವಾಧೀನ ಸಮಸ್ಯೆ ಏನಿತ್ತೋ ಅದನ್ನು ಇಂದು ಬಗೆಹರಿಸಲಾಗಿದೆ. ಇನ್ನು ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಕೊಡಲಿದ್ದೇವೆ. ರೈತರಿಂದ ನೇರ ಖರೀದಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ನಿಗದಿ ಪಡಿಸಿದ ದರದಂತೆ  ಭೂಸಂತ್ರಸ್ತರಿಗೆ ಪಾವತಿಸಲಾಗುತ್ತದೆ.ರೈತರಿಗೆ ಅನುಕೂಲವಾಗುವಂತೆ ಸುಮಾರು 32 ಸೆಂಟ್ಸ್‌ ಸ್ಥಳ ಸ್ವಾಧೀನತೆಗೆ ಮುಂದಾಗಲಿದ್ದೇವೆ. – ರವೀಂದ್ರನಾಥ್‌, ಅಧೀಕ್ಷಕ ಅಭಿಯಂತರು ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ,  ಕೆಆರ್‌ಡಿಸಿಎಲ್‌ ಬೆಂಗಳೂರು

ಬೃಹತ್‌ ಯೋಜನೆಗೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಭೂಮಿಯನ್ನು ತ್ಯಾಗ ಮಾಡುತ್ತಿರುವ ಭೂ ಸಂತ್ರಸ್ತ ರಿಂದ ಹೆಚ್ಚುವರಿ ಭೂಧಾರಣೆಯ ಬೇಡಿಕೆ ಇರಿಸಿದ್ದಾರೆ. ಜಿಲ್ಲಾಧಿಕಾರಿಯ ಗಮನಕ್ಕೂ ತರಲಾಗಿದೆ. ಕೊಡು ಮತ್ತು ಕೊಳ್ಳುವಿಕೆ ಮೂಲಕ ಭೂ ಸಂತ್ರಸ್ತರೊಂದಿಗೆ ಪರಸ್ಪರ ಒಪ್ಪಂದಕ್ಕೆ ಬರುವ ನಿರ್ಣಾಯಕ ಹಂತದಲ್ಲಿದ್ದಾರೆ. ಸೌಹಾರ್ದಯುತ ಪರಿಹಾರಕ್ಕಾಗಿ ಸಮಷ್ಠಿಯ ಪ್ರಯತ್ನ ಸಾಗುತ್ತಿದೆ. ಒಳ್ಳೆಯ ಕೆಲಸ ಕಾರ್ಯ ನಡೆದಿದೆ. ಕಾಮಗಾರಿ ಪೂರೈಸಿ ಕೂಡಲೇ ಲೋಕಾರ್ಪಣೆಗೊಳಿಸಲಾಗುತ್ತದೆ.– ಲಾಲಾಜಿ ಆರ್‌. ಮೆಂಡನ್‌, ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ, ಕಾಪು

Advertisement

Udayavani is now on Telegram. Click here to join our channel and stay updated with the latest news.

Next