ನಟ ದರ್ಶನ್ ಅಭಿನಯದ “ಕ್ರಾಂತಿ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಜನವರಿ 26ಕ್ಕೆ “ಕ್ರಾಂತಿ’ ಸಿನಿಮಾ ತೆರೆಗೆ ಬರುತ್ತಿದ್ದು, ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ ಶನಿವಾರ “ಕ್ರಾಂತಿ’ ಸಿನಿಮಾದ ಮೊದಲ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನ ನಗರದ ಮಾಲ್‌ವೊಂದರಲ್ಲಿ ನಡೆದ “ಕ್ರಾಂತಿ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ್, ನಟಿಯರಾದ ರಚಿತಾ ರಾಮ್, ನಿಮಿಕಾ ರತ್ನಾಕರ್, ಹಿರಿಯ ನಟಿ ಗಿರಿಜಾ ಲೋಕೇಶ್, ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್, ನಿರ್ದೇಶಕ ವಿ. ಹರಿಕೃಷ್ಣ, ನಿರ್ಮಾಪಕಿ ಶೈಲಜಾ ನಾಗ್, ನಟ ಕಂ ನಿರ್ದೇಶಕ ಬಿ. ಸುರೇಶ್, ಗಾಯಕಿ ವಾಣಿ ಹರಿಕೃಷ್ಣ, ನಟಿ ಸಂಯುಕ್ತಾ ಹೊರನಾಡ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸೌಂದರ್ಯ ಜಗದೀಶ್, ರಾಮಮೂರ್ತಿ ಸೇರಿದಂತೆ ಚಿತ್ರದ ಅನೇಕ ಗಣ್ಯರು ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದರು.
ಇನ್ನು ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಿರುವಂತೆ, ಸರ್ಕಾರಿ ಶಾಲೆಯೊಂದನ್ನು ಉಳಿಸಿಕೊಳ್ಳಲು ನಡೆಯುವ ಹೋರಾಟ ಎಂಬುದು ಬಿಡುಗಡೆಯಾಗಿರುವ “ಕ್ರಾಂತಿ’ ಸಿನಿಮಾದ ಟ್ರೇಲರ್‌ನಲ್ಲಿ ಸಾಬೀತಾಗಿದೆ.
ಶಾಲೆಯ ದೃಶ್ಯದ ಮೂಲಕ ಆರಂಭವಾಗುವ ಟ್ರೇಲರಿನಲ್ಲಿ ದರ್ಶನ್ “ಒಂದು ಸಣ್ಣ ಕಥೆ ಹೇಳ್ತೀನಿ’ ಎಂದು ಶಾಲೆಯ ಜಾಗವನ್ನು ಖಳನಾಯಕ ಕಸಿದುಕೊಳ್ಳಲು ಯತ್ನಿಸುವುದು ಹಾಗೂ ಅದನ್ನು ಕಾಪಾಡಲು ತಾನು ಬರುವುದನ್ನು ಮಾವಿನ ತೋಟ ಹಾಗೂ ಮಾವಿನ ತೋಟದ ಮಾಲೀಕನಿಗೆ ಹೋಲಿಸಿ ಡೈಲಾಗ್ ಹೊಡೆಯುತ್ತಾರೆ. ಕೊನೆಯಲ್ಲಿ ಬರುವ “ಕರ್ಮ ನಿಮ್ಮನ್ನು ಬಿಟ್ರೂ “ಕ್ರಾಂತಿ’ ಮಾತ್ರ ನಿಮ್ಮನ್ನು ಬಿಡುವುದಿಲ್ಲ’ ಎನ್ನುವ ಮಾಸ್ ಡೈಲಾಗ್ ಕೇಳುತ್ತದೆ. “ಕ್ರಾಂತಿ’ ಸಿನಿಮಾಕ್ಕೆ ವಿ. ಹರಿಕೃಷ್ಣ ನಿರ್ದೇಶನವಿದೆ. ಶೈಲಜಾ ನಾಗ್, ಬಿ. ಸುರೇಶ್ ಚಿತ್ರವನ್ನು ನಿರ್ಮಿಸಿದ್ದಾರೆ.