ಚಿಂಚೋಳಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ನಾವು ಎಂದಿಗೂ ಮರೆಯಬಾರದು. ಆತನ ಸೇವೆ ದೇಶಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕುರಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಕಲ್ಯಣಾ ಮಂಟಪದಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕುರುಬರ ಸಂಘ, ಗೊಂಡ ಸಂಘ, ಕ್ರಾಂತಿವೀರ ಯುವ ಗರ್ಜನೆ ಸಂಘ, ತಾಲೂಕು ಸರಕಾರಿ ಕುರುಬರ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 219ನೇ ಜಯಂತ್ಯುತ್ಸವ ಮತ್ತು ಕುರುಬ ಜನಜಾಗೃತಿ ಸಮಾವೇಶ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ, ಕುರುಬ ಸಮುದಾಯಕ್ಕೆ 269 ಕೋಟಿ ರೂ. ಅನುದಾನ ನೀಡಿದ ಧೀಮಂತ ನಾಯಕರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರಿಗಾಗಿ ಉಚಿತ ಅಕ್ಕಿ ವಿತರಣೆ, ಅನ್ನಭಾಗ್ಯ ಸಾಲ ಮನ್ನಾ ಅನೇಕ ಜನರ ಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನಾವೆಲ್ಲರೂ ಮುಖ್ಯಮಂತ್ರಿಗಳಿಗೆ ಬೆಂಬಲಿಸಬೇಕಾಗಿದೆ ಎಂದರು.
ಕುರುಬ ಗೊಂಡ ಸಮಾಜ ಅತಿ ಹಿಂದುಳಿದ ಜನಾಂಗವಾಗಿದೆ. ನಾವೆಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರಕಾರದ ಸವಲತ್ತು ಪಡೆದುಕೊಳ್ಳುವುದಕ್ಕಾಗಿ ಜನರನ್ನು ಜಾಗೃತಿಗೊಳಿಸಬೇಕಾಗಿದೆ ಎಂದು ಹೇಳಿದರು. ಶಾಸಕ ಡಾ| ಉಮೇಶ ಜಾಧವ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಯುಗದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣರಾಗಿದ್ದಾರೆ. ಹಿಂದುಳಿದ ಪ್ರದೇಶದ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರನ್ನು ಚಿಂಚೋಳಿ ತಾಲೂಕಿಗೆ ಕರೆ ತರಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ದೇವೆಂದ್ರಪ್ಪ ಮರತೂರ, ಜಿಲ್ಲಾ ಗೊಂಡ ಸಮಾಜ ಅಧ್ಯಕ್ಷ ಮಹಾಂತೇಶ ಕೌಲಗಿ, ರೇವಣಸಿದ್ದಪ್ಪ ಸಾತನೂರ ಮಾತನಾಡಿದರು. ಆಹಾರ ಆಯೋಗ ರಾಜ್ಯ ನಿರ್ದೇಶಕಿ ಮಂಜುಳ ಸಾತನೂರ, ಮಾರುತಿ ವಗ್ಗೆ, ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ| ಪಾಂಡುರಂಗ ಪೂಜಾರಿ, ಮಸ್ತಾನ ಅಲಿ ಪಟ್ಟೆದಾರ, ಲಕ್ಷ್ಮಣ ಆವಂಟಿ, ಎಪಿಪಿ ರವಿಕುಮಾರ ಬಾಚಿಹಾಳ, ಜಿಪಂ ಸದಸ್ಯ ದೀಲಿಪ ಪಾಟೀಲ, ತಾಪಂ ಸದಸ್ಯೆ ಅಂಜನಾದೇವಿ ಕುಪನೂರ ಇದ್ದರು.
ತಾಲೂಕು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸಿದ್ಧಪ್ಪ ಪೂಜಾರಿ ರುಸ್ತಂಪೂರ ಸ್ವಾಗತಿಸಿದರು, ಮಲ್ಲಿಕಾರ್ಜುನ ಮಾಳಗಿ ನಿರೂಪಿಸಿದರು, ರಾಜಕುಮಾರ ಪೂಜಾರಿ ವಂದಿಸಿದರು.