Advertisement
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆ ಹಣವೂ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಬಳಕೆಯಾಗದೆ ಪೋಲಾಯಿತು. ಆನಂತರದಲ್ಲಿ ಸರ್ಕಾರದಿಂದ ಯಾವುದೇ ಅನುದಾನವೂ ಬರಲಿಲ್ಲ. ಅಭಿವೃದ್ಧಿ ಎಂಬುದು ಹಳ್ಳ ಹಿಡಿಯುವಂತಾಯಿತು.
Related Articles
Advertisement
ರಸ್ತೆಗಳೂ ಉತ್ತಮವಾಗಿಲ್ಲ: ಪಟ್ಟಣದೊಳಗಿನ ರಸ್ತೆಗಳೂ ಉತ್ತಮವಾಗಿಲ್ಲ. ಪ್ರಮುಖ ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದು ಹಳ್ಳ-ಗುಂಡಿಗಳು ನಿರ್ಮಾಣಗೊಂಡಿವೆ. ಪಟ್ಟಣದ ಶೇ.30ರಷ್ಟು ರಸ್ತೆಗಳು ಇನ್ನೂ ಡಾಂಬರನ್ನೇ ಕಂಡಿಲ್ಲ. ಅಲ್ಲದೆ, ಬಡಾವಣೆಯ ಬಹುತೇಕ ರಸ್ತೆಗಳು ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೂ ಅನಾನುಕೂಲವಾಗಿದೆ. ವಿಶಾಲವಾದ ರಸ್ತೆಗಳೊಂದಿಗೆ ಬಡಾವಣೆಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕೂ ಪುರಸಭೆ ಮನಸ್ಸು ಕೊಟ್ಟಿಲ್ಲದಿರುವುದು ಕಂಡು ಬರುತ್ತಿದೆ.
ಕುಡಿವ ನೀರಿನ ಸಮಸ್ಯೆ: ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದೊಳಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಾರಿಗೊಳಿಸಿಲ್ಲ. ಈ ವೇಳೆಗೆ ಮೂರು ಹಂತದ ಕುಡಿಯುವ ನೀರಿನ ಯೋಜನೆ ಜಾರಿಯಾಗಬೇಕಿತ್ತು. ಆದರೆ, ಇನ್ನೂ ಒಂದು ಹಂತವಷ್ಟೇ ಪೂರ್ಣಗೊಂಡಿದೆ. ಪಟ್ಟಣದ ಜನರು ಕುಡಿಯುವ ನೀರಿಗೆ ಹೇಮಾವತಿ ನದಿ ನೀರನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದ ಹೇಮಾವತಿ ಬಡಾವಣೆ, ಅಗ್ರಹಾರ, ಅಂಬೇಡ್ಕರ್ ನಗರಗಳಿಗೆ ಕುಡಿಯುವ ನೀರಿನ ತೊಂಬೆಗಳ ಮೂಲಕ ಈಗಲೂ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುವುದು ಪಟ್ಟಣದ ಜನರು ಹೇಳುವ ಮಾತಾಗಿದೆ.
ಪಟ್ಟಣದೊಳಗೆ ಸ್ವಚ್ಛತೆ ಮಾಯವಾಗಿದೆ. ಕಸ ಎಲ್ಲೆಂದರಲ್ಲಿ ಬಿದ್ದಿದೆ. ಪೌರ ಕಾರ್ಮಿಕರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪುರಸಭೆಯಲ್ಲಿ ಮೂರು ರೀತಿಯ ಪೌರ ಕಾರ್ಮಿಕರಿದ್ದಾರೆ. ಕಾಯಂ, ಗುತ್ತಿಗೆ ಹಾಗೂ ಪುರಸಭೆಯಿಂದ ನೇಮಕ ಮಾಡಿಕೊಂಡಿರುವ ಗುತ್ತಿಗೆ ನೌಕರರು. ಕಾಯಂ ಪೌರ ಕಾರ್ಮಿಕರು ಬೆರಳೆಣಿಕೆಯಷ್ಟಿದ್ದು ಅವರೆಲ್ಲರಿಗೂ ವಯಸ್ಸಾಗಿದೆ. 21 ಮಂದಿ ಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳೂ ಸಂಬಳ ನೀಡುತ್ತಿಲ್ಲ. ಆರು ಅಥವಾ ಎಂಟು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಹಾಗಾಗಿ ಅವರು ಸ್ವಚ್ಛತೆ ಕಡೆ ಅಷ್ಟಾಗಿ ಗಮನಹರಿಸುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ.
ಪುರಸಭಾ ವ್ಯಾಪ್ತಿಯಲ್ಲಿರುವ ಮೂರು ಉದ್ಯಾನ ವನಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಬೀದಿ ದೀಪಗಳು ಸಮರ್ಪಕವಾಗಿಲ್ಲ. ಪಟ್ಟಣ ಬೆಳವ ಣಿಗೆ ಕಾಣುತ್ತಿದ್ದರೂ ಅದಕ್ಕೆ ತಕ್ಕಂತೆ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಲಭ್ಯಗಳು ದೊರಕುತ್ತಿಲ್ಲ. ಅಭಿವೃದ್ಧಿ ಪಟ್ಟಣದೊಳಗೆ ಮರೀಚಿಕೆಯಾಗಿರುವ ಸಂದರ್ಭಚಿ ದಲ್ಲೇ ಪುರಸಭೆಗೆ ಚುನಾವಣೆ ಎದುರಾಗಿದೆ.