ಕೆ.ಆರ್.ಪೇಟೆ: ಕೃಷಿ ಪೂರಕ ಎಲ್ಲಾ ಇಲಾಖೆ ಅಧಿಕಾರಿಗಳು ಯೋಜನೆಗಳನ್ನು ಸಮರ್ಪಕ ಮತ್ತು ಸಕಾಲದಲ್ಲಿ ತಲುಪಿಸಿದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಪ್ರಗತಿ ಪರ ರೈತ ಹಾಗೂ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ವಿಠಲಾಪುರ ಸುಬ್ಬೇಗೌಡ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದು ತಾಲೂಕು ಕೃಷಿಕ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರೈತರ ಅಭಿವೃದ್ಧಿಗೆ ಪೂರಕವಾದ ಕೃಷಿ, ತೋಟಗಾರಿಕೆ, ವಲಯ ಅರಣ್ಯ, ಸಾಮಾಜಿಕ ಅರಣ್ಯ, ರೇಷ್ಮೆ, ಎಪಿಎಂಸಿ, ಪಶುಪಾಲನಾ ಇಲಾಖೆಗಳು ರೈತರಿಗಿರುವ ಸೌಲಭ್ಯ ಸಮರ್ಪಕವಾಗಿ ಸಕಾಲದಲ್ಲಿ ತಲುಪಿಸುತ್ತಿಲ್ಲ. ಅಧಿಕಾರಿಗಳು ಸಭೆಗಳಿಗೇ ಬರುವುದಿಲ್ಲ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ರೈತರ ಸಾಲ ಮನ್ನಾ ಮಾಡುವಾಗ ದಾಖಲೆಗಳು ಸರಿ ಇಲ್ಲ ಎಂದು ಸಾಕಷ್ಟು ರೈತರಿಗೆ ಇನ್ನೂ ಸಾಲ ಮನ್ನಾ ಮಾಡಿಲ್ಲ. ಹಾಗಾಗಿ ದಾಖಲೆ ಪಡೆದು ಮನ್ನಾ ಆಗದ ರೈತರಿಗೆ ಸಾಲ ಮನ್ನಾ ಮಾಡುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪತ್ರ ಬರೆಯೋಣ ಎಂದು ಸುಬ್ಬೇಗೌಡ ಹೇಳಿದಾಗ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.
ಅರಣ್ಯ ಇಲಾಖೆ ಅನುದಾನದಲ್ಲಿ ಚಿರತೆ ಹಾವಳಿ ಇರುವ ಕಾಡಂಚಿನ ಗ್ರಾಮಗಳಲ್ಲಿ ಸೋಲಾರ್ ದೀಪ ಅಳವಡಿಸಲು ಸಭೆಯಲ್ಲಿ ಚರ್ಚಿಸಿದಾಗ ಸಾಮಾಜಿಕ ಅರಣ್ಯಾಧಿಕಾರಿ ಶಿಲ್ಪ ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಅನುದಾನ ಕೋರಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಪಶುಪಾಲನಾ ಇಲಾಖೆಯ ಅಧಿಕಾರಿ ಶಂಕರ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಈಶ್ವರಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಟಾಳು ರಾಮಸ್ವಾಮಿ, ನಿರ್ದೇಶಕರಾದ ನಾರಾಯಣಗೌಡ, ನಾರಾಯಣಗೌಡ, ಚನ್ನೇಗೌಡ, ಲಕ್ಷ್ಮೇಗೌಡ, ಜಗದೀಶ್, ಸ್ವಾಮೀಗೌಡ, ರಂಗನಾಥೇಗೌಡ, ಕೃಷಿ ತಾಂತ್ರಿಕ ಅಧಿಕಾರಿ ಶ್ರೀಧರ್, ಆರಾಧ್ಯ ಭಾಗವಹಿಸಿದ್ದರು.