ಎಚ್.ಬಿ.ಮಂಜುನಾಥ
ಕೆ.ಆರ್.ಪೇಟೆ: ಸರ್ಕಾರಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಪರಿಸರ ಸ್ವಚ್ಛತೆ, ಶುದ್ಧ ನೀರಿಗಾಗಿ ಕೋಟ್ಯಂತರ ರೂಗಳು ವೆಚ್ಚ ಮಾಡುವ ಜತೆಗೆ ಜಾಗೃತಿ ಕಾರ್ಯಕ್ರಮಗಳಿಂದ ಮನವರಿಕೆ ಮಾಡಿಕೊಡುವ ಅಧಿಕಾರಿಗಳೇ ಪಟ್ಟಣಕ್ಕೆ ಕಲುಷಿತ ನೀರು ಸರಬರಾಜು ಮಾಡುತ್ತಿರುವುದು ವಿಪರ್ಯಾಸ.
ಸುಮಾರು 40 ಸಾವಿರ ಜನಸಂಖ್ಯೆ ಇರುವ ಪಟ್ಟಣದ ಜನತೆಗೆ ಪ್ರತಿದಿನ ಕನಿಷ್ಠ ಎರಡು ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಪಟ್ಟಣಕ್ಕೆ ಹೇಮಾವತಿ ನದಿಯಿಂದ ನೀರು ಸರಬರಾಜಾಗುತ್ತಿದೆ. ಆದರೆ ಕುಡಿಯುವ ನೀರು ಶುದ್ಧೀಕರಿಸದೇ ನೇರವಾಗಿ ಸರಬರಾಜು ಮಾಡು ತ್ತಿರುವುದರಿಂದ ಪಟ್ಟಣ ನಾಗರೀಕರಿಗೆ ಗಂಟಲು ಕೆರೆತ, ಕೆಮ್ಮು, ನೆಗಡಿ, ಜ್ವರ ವಿವಿಧ ಕಾಯಿಲೆ ದಾಳಿ ಮಾಡುತ್ತಿವೆ. ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕುಡಿಯುವ ನೀರಿನ ಶುದ್ಧೀಕರಣಕ್ಕೆ ಸ್ವಚ್ಛಗೊಳಿಸುವ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಲು ಮುಂದಾಗುತ್ತಿಲ್ಲ.
9 ವರ್ಷದಿಂದಲೂ ಸ್ವತ್ಛ ಮಾಡಿಲ್ಲ: ಕುಡಿಯುವ ನೀರು ಸರಬರಾಜು ಮಾಡುವ ಯಾವುದೇ ಪರಿಕರಗಳನ್ನು ಕನಿಷ್ಟ ಆರು ತಿಂಗಳಿಗೆ ಒಮ್ಮೆಯಾದರೂ ಸ್ವಚ್ಛ ಮಾಡಬೇಕು. ಆದರೆ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಶುದ್ಧಿಕರಣ ಮಾಡಲು ಸಾದಗೋನಹಳ್ಳಿ ಸಮೀಪ ನಿರ್ಮಾಣ ಮಾಡಿರುವ ನೀರು ಶುದ್ಧೀಕರಣ ಘಟನ ಕಳೆದ 9 ವರ್ಷಗಳಿಂದ ಸ್ವಚ್ಛತೆಯೇ ಕಂಡಿಲ್ಲ. ಸದರಿ ಘಟಕವನ್ನು ಸ್ವತ್ಛಗೊಳಿಸಿ ಅಲ್ಲಿರುವ ತೊಟ್ಟಿಗಳಿಗೆ ಬಿಳಿ ಬಣ್ಣ ಬಳಿಸಬೇಕು. ಆಗ ನೀರಿನ ಸ್ವಚ್ಛತೆ ತೊಟ್ಟಿಯಲ್ಲಿ ಸ್ವಷ್ಟವಾಗಿ ಕಾಣುತ್ತದೆ. ಆದರೆ ಇಲ್ಲಿರುವ ತೊಟ್ಟಿ ವರ್ಷಗಟ್ಟಲೆ ಕೊಳೆಯುತ್ತಿದ್ದು, ತೊಟ್ಟಿಯಲ್ಲಿ ಪಾಚಿ ಕಟ್ಟಿಕೊಂಡಿದೆ.
ತೊಟ್ಟಿಗೆ ಆಲಂ ಪೌಡರ್ ಬಳಸಲ್ಲ: ಹೇಮಾವತಿ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುತ್ತದೆ. ನೀರು ತುಂಬಿರುವ ಸಮಯದಲ್ಲಿ ಹೇಮಾವತಿ ನದಿ ಸ್ವಚ್ಛವಾಗಿರುತ್ತದೆ. ನದಿಯಲ್ಲಿ ನೀರು ಕಡಿಮೆ ಯಾದಂತೆ ನೀರೂ ಕಲುಷಿತವಾಗುತ್ತದೆ. ಆ ನೀರನ್ನು ಶುದ್ಧೀಕರಿಸದೇ ಕುಡಿದರೆ ಕೆಮ್ಮು ಜ್ವರ ಬರುವುದು ಖಚಿತ. ಹೀಗಿದ್ದರೂ ಪುರಸಭಾ ಅಧಿಕಾರಿಗಳು, ಮರಳು, ಜಲ್ಲಿ, ಬಳಸಿ ಸ್ವಚ್ಛ ಮಾಡುವ ಜೊತೆಗೆ ಆಲಂ ಪೌಡರ್ ಹಾಕಿ ನೀರನ್ನು ಸ್ವಚ್ಛ ಮಾಡುತ್ತಿಲ್ಲ. ನೀರಿಗೆ ಹಾಕಲು ತಂದಿರುವ ಆಲಂ ಪೀಸ್‌ಗಳು ಬಳಕೆಯಾಗದೇ ಅಲ್ಲಿಯೇ ಧೂಳು ತಿನ್ನುತ್ತಿವೆ. ತೊಟ್ಟಿಗೆ ಹಾಕಿರುವ ಮರಳು ಮತ್ತು ಜಲ್ಲಿ ಸಂಪೂರ್ಣ ಪಾಚಿಯಿಂದ ಮುಚ್ಚಿಹೋಗಿದ್ದು, ನೀರಿನೊಳಗೆ ತ್ಯಾಜ್ಯ ಸಸಿಗಳೂ ಬೆಳೆದುಕೊಂಡಿವೆ.
ಮೀನು ಸಮೇತ ಸಮೇತ ನೀರು ಪೂರೈಕೆ: ಪಟ್ಟಣದಲ್ಲಿ ಆರ್ಥಿವಾಗಿ ಸ್ಥಿತಿವಂತರು ತಮ್ಮ ಮನೆಗಳಲ್ಲಿಯೇ ನೀರು ಶುದ್ಧೀಕರಣ ಯಂತ್ರ ಅಳವಡಿಸಿಕೊಂಡಿದ್ದಾರೆ. ಮತ್ತೆ ಕೆಲವರು ಬಿಸಿಲರಿ ನೀರು ಕೊಂಡುಕೊಳ್ಳುವರು. ಬಡವರು ಮಾತ್ರ ಅವರ ಮನೆಯ ನಲ್ಲಿಗಳಲ್ಲಿ ಬರುವ ಕಲುಷಿತ ನೀರನ್ನೇ ಕುಡಿದು ಕೆಮ್ಮು ಮತ್ತು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಶುದ್ಧೀಕರಣ ಘಟಕದಲ್ಲಿ ಜಲಚರಗಳು ಸತ್ತು ನೀರಿನಲ್ಲಿ ತೇಲುತ್ತಿದ್ದರೂ, ಅವುಗಳನ್ನೂ ಸ್ವಚ್ಛ ಮಾಡದೆ ಅದೇ ತೊಟ್ಟಿ ನೀರು ಪೂರೈಸಲಾಗುತ್ತಿದೆ. ಜೊತೆಗೆ ನಲ್ಲಿಯಲ್ಲಿ ಜೀವಂತ ಮೀನು ಬಂದಿರುವ ನಿದರ್ಶನಗಳಿವೆ.