Advertisement

KPTCL 404 ಎಇ ಹುದ್ದೆ ಭರ್ತಿ- ತಾತ್ಕಾಲಿಕ ನೇಮಕಾತಿ ಪತ್ರ ನೀಡಲು ಹೈಕೋರ್ಟ್‌ ಆದೇಶ

11:15 PM Feb 07, 2024 | Team Udayavani |

ಬೆಂಗಳೂರು: ರಾಜ್ಯ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌)ದಲ್ಲಿನ 404 ಸಹಾಯಕ ಅಭಿಯಂತ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್‌ ಮಧ್ಯಾಂತರ ಆದೇಶ ಹೊರಡಿಸಿದೆ.

Advertisement

ಕೆಪಿಟಿಸಿಎಲ್‌ 2023ರ ಫೆ. 4ರಂದು ಪ್ರಕಟಿಸಿದ್ದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ರದ್ದುಪಡಿಸಿ ಏಕಸದಸ್ಯ ನ್ಯಾಯಪೀಠ ನೀಡಿದ ಆದೇಶ ಪ್ರಶ್ನಿಸಿ, ಆ ಪಟ್ಟಿಯಲ್ಲಿ ಅರ್ಹತೆ ಪಡೆದುಕೊಂಡಿದ್ದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸಿಜೆ ಪಿ.ಎಸ್‌. ದಿನೇಶ್‌ ಕುಮಾರ್‌, ನ್ಯಾ| ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಈ ತಾತ್ಕಾಲಿಕ ನೇಮಕಾತಿಗಳು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡುತ್ತವೆ ಎಂದು ನೇಮಕಾತಿ ಆದೇಶಗಳಲ್ಲಿ ನಮೂದಿಸಬೇಕು ಎಂದು ಹೇಳಿರುವ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್‌ 13ಕ್ಕೆ ಮುಂದೂಡಿತು.

404 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2022ರ ಆ. 24ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಆ. 25ಕ್ಕೆ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಕೀ ಉತ್ತರ ಪಟ್ಟಿಯಲ್ಲಿ ಕೆಲವು ಉತ್ತರಗಳು ತಪ್ಪಾಗಿವೆ ಎಂದು ಹಲವು ಅಭ್ಯರ್ಥಿಗಳು ಆಕ್ಷೇಪಿಸಿದ್ದರು. ಇದಕ್ಕೆ ಪರೀಕ್ಷಾ ಪ್ರಾಧಿಕಾರ ತಜ್ಞರ ಸಮಿತಿ ರಚಿಸಿ ಡಿ. 27ರಂದು ಪರಿಷ್ಕೃತ ಕೀ ಉತ್ತರ ಪ್ರಕಟಿಸಲಾಯಿತು. ಅದರ ಆಧಾರದಲ್ಲಿ 2023ರ ಜ. 3ರಂದು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಯಿತು. ಅದರಲ್ಲಿ 501 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡು, 404 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಯಿತು.

900ಕ್ಕೂ ಹೆಚ್ಚು ಆಕ್ಷೇಪಣೆ
ಈ ಮಧ್ಯೆ ಪರಿಷ್ಕೃತ ಕೀ ಉತ್ತರ ಪಟ್ಟಿಗೆ 900ಕ್ಕೂ ಹೆಚ್ಚು ಆಕ್ಷೇಪಣೆ ವ್ಯಕ್ತವಾದವು. ಆದಕ್ಕೆ ಪುನಃ ತಜ್ಞರ ಸಮಿತಿಯ ಪರಿಶೀಲನೆಗೊಳಪಡಿಸಲಾಯಿತು. ಹೆಚ್ಚುವರಿ ಅಂಕಗಳನ್ನು ನೀಡಿ 2023ರ ಫೆ. 4ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಲಾಯಿತು. ಇದರ ಪರಿಣಾಮ 135 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡು ಒಟ್ಟು ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಸಂಖ್ಯೆ 636 ಆಯಿತು. 2ನೇ ಬಾರಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದನ್ನು ಆಕ್ಷೇಪಿಸಿ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. 2ನೇ ಪರಿಷ್ಕರಣೆಯನ್ನು ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. ಇದರಿಂದ ಅರ್ಹತಾ ಪಟ್ಟಿಯಿಂದ ವಂಚಿತರಾದ 135 ಅಭ್ಯರ್ಥಿಗಳ ಪೈಕಿ 50ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next