Advertisement

KPT Nanthoor Junction: ಓವರ್‌ಪಾಸ್‌ ನಿರ್ಮಾಣಕ್ಕೆ ಮಳೆಗಾಲ ಅಡ್ಡಿ !

01:44 PM Jun 20, 2023 | Team Udayavani |

ಮಹಾನಗರ: ನಗರದ ಕೆಪಿಟಿ ಮತ್ತು ನಂತೂರು ಜಂಕ್ಷನ್‌ಗಳಲ್ಲಿ ವೆಹಿಕ್ಯುಲರ್‌ ಓವರ್‌ ಪಾಸ್‌(ವಿಒಪಿ) ನಿರ್ಮಾಣ ಯೋಜನೆ ಈಗಾಗಲೇ ಹಿನ್ನಡೆ ಕಂಡಿದ್ದು, ಇದೀಗ ಮಳೆಗಾಲ ಆರಂಭಗೊಂಡಿರುವುದರಿಂದ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.

Advertisement

ಕೆಪಿಟಿ ಜಂಕ್ಷನ್‌ನಲ್ಲಿ 22 ಕೋ.ರೂ. ವೆಚ್ಚದಲ್ಲಿ ವಿಒಪಿ ನಿರ್ಮಿಸಲು ಕಾರ್ಯಾದೇಶವಾಗಿದ್ದು, ಮಳೆಗಾಲದ ಮೊದಲು ಮರಗಳ ತೆರವು, ಸರ್ವಿಸ್‌ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ಹಾಕಿಕೊಂಡು ಅನಂತರ ಮುಖ್ಯ ಕಾಮಗಾರಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೂಡ ಎರಡು ತಿಂಗಳ ಹಿಂದೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಆದರೆ ಯಾವುದೇ ಕಾಮಗಾರಿಗಳು ಆರಂಭಗೊಂಡಿಲ್ಲ.

ಸಂಚಾರ ದಟ್ಟಣೆ ಸವಾಲು
ಕೆಪಿಟಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-66 ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗಳು ಸಂಪರ್ಕಿಸುತ್ತವೆ. ವಾಹನ ದಟ್ಟಣೆ ಹೆಚ್ಚಾಗಿದ್ದು ಸಂಚಾರ ನಿರ್ವಹಣೆ ಸವಾಲಾಗಿದೆ. ಹಾಗಾಗಿ ಇಲ್ಲಿ ಕಾಮಗಾರಿ ನಡೆಸುವ ಮೊದಲು ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ.

ನಂತೂರು ಜಂಕ್ಷನ್‌ನಲ್ಲಿಯೂ ವಿಒಪಿ
ಅಪಾಯಕಾರಿ, ವಾಹನ ದಟ್ಟಣೆಯ ಜಂಕ್ಷನ್‌ ಆಗಿರುವ ನಂತೂರು ಜಂಕ್ಷನ್‌ನಲ್ಲಿಯೂ ಓವರ್‌ಪಾಸ್‌ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಯೋಜನೆ ಕೂಡ ಆರಂಭಗೊಂಡಿಲ್ಲ. ಮೂರು ರಾಷ್ಟ್ರೀಯ ಹೆದ್ದಾರಿಗಳು, ಪಾಲಿಕೆ ರಸ್ತೆ ಸಂಗಮವಾಗುವ ಈ ಸ್ಥಳದಲ್ಲಿ ಪ್ರತಿ ನಿತ್ಯವೂ ಅಪಾಯ ಉಂಟಾಗುತ್ತಿದೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ನಂತೂರಿನಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿ ಯಾವುದೇ ತೊಡಕಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಕಾಮಗಾರಿ ಆರಂಭಗೊಂಡಿಲ್ಲ.

Advertisement

ಶಾಶ್ವತ ಪರಿಹಾರಕ್ಕೆ ಆಗ್ರಹ
ಕೆಪಿಟಿ ಮತ್ತು ನಂತೂರು ಜಂಕ್ಷನ್‌ಗಳಲ್ಲಿ ನಿರಂತರ ಅಪಘಾತಗಳು ನಡೆಯುತ್ತಿರುವುದರಿಂದ ಮತ್ತು ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ಫ್ಲೈ ಓವರ್‌ ಅಥವಾ ಓವರ್‌ಪಾಸ್‌ ನಿರ್ಮಿಸಬೇಕೆಂದು ಹಲವಾರು ವರ್ಷಗಳಿಂದ ಆಗ್ರಹಗಳು ಕೇಳಿಬಂದಿವೆ. ಪಾಲಿಕೆಯ ಸಾಮಾನ್ಯಸಭೆ, ಕೆಡಿಪಿ ಸಭೆ, ಹೆದ್ದಾರಿ ಇಲಾಖೆಯ ಸಭೆಗಳಲ್ಲಿಯೂ ಪ್ರಸ್ತಾವಗೊಂಡಿತ್ತು. ಎರಡೂ ಜಂಕ್ಷನ್‌ಗಳಲ್ಲಿ ಸಂಚಾರಿ ಪೊಲೀಸ್‌ರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಕೆಪಿಟಿಯಲ್ಲಿ ಸಂಚಾರ ನಿರ್ವಹಣೆಗೆ ತಾತ್ಕಾಲಿಕ ಪರಿಹಾರಕ್ಕಾಗಿ ಎಪ್ರಿಲ್‌ನಿಂದ ಟ್ರಾಫಿಕ್‌ ಸಿಗ್ನಲ್‌ ಲೈಟ್‌ ಅಳವಡಿಸಲಾಗಿದೆ. ನಂತೂರಿನಲ್ಲಿ ಸಿಗ್ನಲ್‌ ಲೈಟ್‌ ಅಳವಡಿಸುವ ಚಿಂತನೆ ಇತ್ತಾದರೂ ಅದನ್ನು ಕೈಬಿಡಲಾಗಿದೆ. ವೃತ್ತವನ್ನು ಕಿರಿದು ಮಾಡಲಾಗಿದೆ. ಆದಾಗ್ಯೂ ವಾಹನ ಸಂಚಾರ ಸುಗಮಗೊಂಡಿಲ್ಲ. ಶಾಶ್ವತ ಪರಿಹಾರವಾಗಿ ಓವರ್‌ಪಾಸ್‌ ನಿರ್ಮಾಣ ಅತ್ಯವಶ್ಯವಾಗಿದೆ.

ಮಳೆಗಾಲದ ಬಳಿಕ ಕಾಮಗಾರಿ
ಕೆಪಿಟಿ ಜಂಕ್ಷನ್‌ನಲ್ಲಿ ವೆಹಿಕ್ಯುಲರ್‌ ಓವರ್‌ ಪಾಸ್‌ ನಿರ್ಮಾಣಕ್ಕೆ ಭೂಸ್ವಾಧೀನ ಮತ್ತು ಮರಗಳ ತೆರವಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ನಂತೂರು ಜಂಕ್ಷನ್‌ನಲ್ಲಿಯೂ ಓವರ್‌ಪಾಸ್‌ ನಿರ್ಮಿಸಲಾಗುವುದು. ಭೂ ಸ್ವಾಧೀನಕ್ಕೆ ಸಂಬಂಧಿಸಿ ಯಾವುದೇ ಅಡ್ಡಿ ಇಲ್ಲ. ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸಲಾಗುವುದು.
-ಅಬ್ದುಲ್ಲಾ ಜಾವೇದ್‌ ಅಜ್ಮಿ,
ಯೋಜನ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next