ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2016ರ ಅಕ್ಟೋಬರ್‌ನಲ್ಲಿ ನಡೆಸಿದ “ಸಿ’ ಗ್ರೂಪ್ ಹುದ್ದೆ ನೇಮಕ ಪ್ರಕ್ರಿಯೆಯಡಿ ಈವರೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸದಿರುವುದನ್ನು ಖಂಡಿಸಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಡಿ. 4ರಂದು ಕೆಪಿಎಸ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, 2016ರ ಅ.5ರ ಸರ್ಕಾರಿ ಆದೇಶದಡಿ ಸಾವಿರಾರು ಯುವಕ, ಯುವತಿಯರು, “ಸಿ’ ಗ್ರೂಪ್ (ತಾಂತ್ರಿಕೇತರ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಲಿಖೀತ ಪರೀಕ್ಷೆ ಬಳಿಕ 2017ರ ಆ.31ರಂದು ದಾಖಲೆಗಳ ಪರಿಶೀಲನೆ ಸಹ ನಡೆದಿದೆ. ಆದರೆ ಈವರೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಾಕಷ್ಟು ಬಾರಿ ಭೇಟಿ ನೀಡಿ ಮನವಿ ಮಾಡಿದರೂ ಈವರೆಗೆ ಅಂತಿಮ ಪಟ್ಟಿ ಪ್ರಕಟವಾಗಿಲ್ಲ. ಕಳೆದ ಆಗಸ್ಟ್‌ನಲ್ಲಿ ನಾನು ಕೆಪಿಎಸ್‌ಸಿ ಅಧ್ಯಕ್ಷರೊಂದಿಗೆ ಮಾತನಾಡಿದಾಗ ಆಗಸ್ಟ್‌ನೊಳಗೆ ಫಲಿತಾಂಶ ಪ್ರಕಟಿಸುವುದಾಗಿ ನೀಡಿದ ಭರವಸೆಯೂ ಹುಸಿಯಾಯಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೂ ಮಾತನಾಡಿದ್ದೇನೆ. ಕಳೆದ ಜ.26ರಂದು ಕೆಪಿಎಸ್‌ಸಿ ಕಾರ್ಯದರ್ಶಿ ಅವರು “ಎಲ್ಲ ಬಾಕಿಯಿರುವ ಪರೀಕ್ಷೆ, ಫಲಿತಾಂಶ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆ ನೀಡುತ್ತೇವೆ’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಳೆದ ಜುಲೈನಲ್ಲಿ “ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾವು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ. ನಂತರ ಮುಖ್ಯ ಕಾರ್ಯದರ್ಶಿಗಳು ಈ ಸಂಬಂಧ ಹಲವು ಸಭೆ ನಡೆಸಿರುವುದು ಗಮನಕ್ಕೆ ಬಂದಿದೆ. ಇಷ್ಟಾದರೂ ಉದ್ಯೋಗಾಕಾಂಕ್ಷಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಕೆಪಿಎಸ್‌ಸಿ, ಶಾಸಕರು ಹಾಗೂ ಸರ್ಕಾರದೊಂದಿಗೂ ಸುಳ್ಳಾಟವಾಡುತ್ತಿರುವುದು ಅಸಹನೀಯ ನಡವಳಿಕೆ ಎಂದು ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ ಡಿ.4ರಂದು ಕೆಪಿಎಸ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತೇನೆ. ಈ ಪ್ರತಿಭಟನೆ ರಾಜ್ಯದ ಎಲ್ಲ ಪ್ರತಿಭಾನ್ವಿತ ಯುವಕ, ಯುವತಿಯರ ಪರವಾಗಿ ಹಾಗೂ ಕೆಪಿಎಸ್‌ಸಿಯ ನಿರ್ಲಜ್ಜೆಯಿಂದ ಕೂಡಿದ ಕಾರ್ಯವೈಖರಿ ವಿರುದ್ಧ ಎಂಬುದಾಗಿ ಸ್ಪಷ್ಟಪಡಿಸುತ್ತೇನೆ. ಸದಾ ಕೆಟ್ಟ ವಿಚಾರಗಳಿಂದಲೇ ಸುದ್ದಿಯಲ್ಲಿರುವ ಕೆಪಿಎಸ್‌ಸಿಯ ಅವ್ಯವಹಾರಗಳ ಬಗ್ಗೆ ಹೈಕೋರ್ಟ್ ಸಹ ಹಲವು ಬಾರಿ ಆತಂಕ ವ್ಯಕ್ತಪಡಿಸಿದೆ.
ಉದ್ಯೋಗಾಕಾಂಕ್ಷಿಗಳು ಬಯಸಿದಂತೆ ಕೆಪಿಎಸ್‌ಸಿ ಶುದ್ಧೀಕರಣ ಈವರೆಗೆ ನಡೆದಿಲ್ಲ. ಕೆಪಿಎಸ್‌ಸಿಯಲ್ಲಿರುವವರನ್ನೇ ಅವರ ಕಾರ್ಯಕ್ಷಮತೆಗಾಗಿ ಯಾವುದಾದರೂ ಪರೀಕ್ಷೆಗೆ ಒಳಪಡಿಸಿದರೆ ಅವರು “ಫೇಲ್’ ಆಗುವುದು ನೂರಕ್ಕೆ ನೂರು ಸತ್ಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ.