ಬೆಂಗಳೂರು: ರಾಜ್ಯ ಸರಕಾರದ ಮೈತ್ರಿ ಪಕ್ಷಗಳ ನಡುವಿನ ಭಡ್ತಿ ಮೀಸಲಾತಿ ಗೊಂದಲ ನಿವಾರಣೆಯಾದ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಆಯ್ಕೆ ಕುರಿತಂತೆ ಮುಸುಕಿನ ಗುದ್ದಾಟ ಆರಂಭವಾಗಿದೆ.
ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಾಮ್ ಭಟ್ ನಿವೃತ್ತಿ ಬಳಿಕ ಜನವರಿಯಲ್ಲಿ ನಿವೃತ್ತ ಅಧಿಕಾರಿ ಷಡಕ್ಷರಿ ಸ್ವಾಮಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಪೂರ್ಣಾವಧಿ ಅಧ್ಯಕ್ಷರ ಆಯ್ಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಆಲೋಚಿಸಲಾಗಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆ ಕುರಿತು ಹೆಚ್ಚು ಆಸಕ್ತಿ ತೋರದ ಕಾರಣ ಪ್ರಕ್ರಿಯೆ ಮುಂದಕ್ಕೆ ಹೋಗಿತ್ತು.
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಕೆಪಿಎಸ್‌ಸಿ ಸದಸ್ಯರಾಗಿರುವ ತಮ್ಮ ಆಪ್ತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಕಸರತ್ತು ನಡೆಸಿದ್ದು ಈ ಕುರಿತಂತೆ ಲೋಕಸಭೆ ಚುನಾವಣೆಗೂ ಮೊದಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಮುಂದೆ ಪ್ರಸ್ತಾವ ಮಾಡಿದ್ದರೆಂದು ಹೇಳಲಾಗಿದೆ. ಲೋಕಸಭಾ ಚುನಾವಣ ನೀತಿ ಸಂಹಿತೆ ಮುಗಿದ ಬಳಿಕ ಕೆಪಿ ಎಸ್‌ಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿ ತಮಗೆ ಬೇಕಾದವರನ್ನು ನೇಮಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಆದರೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಕರಿಗೌಡ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಶಂಕರ್ ಅವರ ಬಗ್ಗೆ ಒಲವು ತೋರಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕೂಡ ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ಷಡಕ್ಷರಿ ಸ್ವಾಮಿ ಅವರನ್ನೇ ಮುಂದುವರಿಸಬೇಕೆಂಬ ಇಚ್ಛೆ ಹೊಂದಿದ್ದಾರೆನ್ನಲಾಗುತ್ತಿದೆ. ಆದರೆ ಸಚಿವ ಡಿ.ಕೆ. ಶಿವಕುಮಾರ್ ಅವರು ರಘುನಂದನ್ ರಾಮಣ್ಣ ಅವರನ್ನು ನೇಮಿಸಲು ಒತ್ತಡ ಹೇರುತ್ತಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.