Advertisement

KPSC: ಮರು ಪರೀಕ್ಷೆಗೆ ಸೂಚನೆ; ಸರಕಾರದ ನಿರ್ಧಾರ ವಿವೇಚನಾಯುತ: ಶಾಸಕ ಯತ್ನಾಳ್‌

10:07 PM Sep 02, 2024 | Team Udayavani |

ಬೆಂಗಳೂರು: ಕೆಪಿಎಸ್‌ಸಿ(KPSC) ಗೆಜೆಟೆಡ್‌ ಪ್ರೊಬೆಷನರಿ (Gazetted Probationers) ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ, ದೋಷದಿಂದಾಗಿ ಮರು ಪರೀಕ್ಷೆಗೆ ಆಗ್ರಹಿಸಿದ್ದ ಪರೀಕ್ಷಾರ್ಥಿಗಳಿಗೆ  ಅನುಕೂಲ ಮಾಡಿದ ರಾಜ್ಯ ಸರಕಾರದ ನಿರ್ಧಾರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಾಗತಿಸಿದ್ದಾರೆ.

Advertisement

ಆ.​ 27ರಂದು ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ  350 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ತರ್ಜುಮೆ ದೋಷ ಕಂಡು ಬಂದಿದ್ದರಿಂದ ಈ ಕುರಿತು ಶಾಸಕ ಯತ್ನಾಳ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಪಿಎಸ್​​ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ, ಮರು ಪರೀಕ್ಷೆ ನಡೆಸಬೇಕೆಂಬ ಕೂಗು ಜೋರಾಗಿ ಮರು ಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರತಿಕ್ರಿಯಿಸಿ “ಕೆಎಎಸ್ ಪರೀಕ್ಷಾರ್ಥಿಗಳ ಹಾಗೂ ನಮ್ಮ ನಿರಂತರ ಪ್ರಯತ್ನ, ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮರುಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ವಿವೇಚನಾಯುತ ನಿರ್ಧಾರವನ್ನು ಸ್ವಾಗತಿಸಿ, ಈ ಕೆಳಕಂಡ ಸುಧಾರಣೆಗಳ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಆಯೋಗಕ್ಕೆ ಶಾಸಕ ಯತ್ನಾಳ್‌ ಸಲಹೆಗಳು ಈ ಕೆಳಗಿನಂತಿವೆ:
1
. ಪರೀಕ್ಷಾರ್ಥಿಗಳು ವಾಸಿಸುವ ಊರು ಅಥವಾ ಗರಿಷ್ಠ  50 ಕಿ.ಮೀ. ದೂರವಿರುವ ಪರೀಕ್ಷಾ ಕೇಂದ್ರದಲ್ಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು.

2. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಭಾನುವಾರವೇ ಪರೀಕ್ಷೆ ಆಗಬೇಕು ಮತ್ತು ಯಾವುದೇ ಇತರೆ ಪರೀಕ್ಷೆ ಇದ್ದ ದಿನ ಶೆಡ್ಯೂಲ್‌ ಮಾಡಬಾರದು

Advertisement

3. ಲೋಕಸೇವಾ ಆಯೋಗದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ ಐಎಎಸ್‌ ಕೆ.ಎಸ್.ಲತಾ ಕುಮಾರಿ ಅವರನ್ನು ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು.

4. ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ನಿಯಂತ್ರಕರನ್ನು (ಕಂಟ್ರೋಲರ್‌ ಆಫ್‌ ಎಕ್ಸ್‌ಮಿನೇಷನ್‌)  ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು. ಹಾಗೆಯೇ ಆಯೋಗದ ಅಧ್ಯಕ್ಷರನ್ನು ಕೂಡಲೇ ಬದಲಿಸಲಿ.

5. ಆಯೋಗವು ಆಯೋಜಿಸಿದ್ದ ಎಲ್ಲಾ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಬೇಕು.

6. ಆಯೋಗವು ನಡೆಸುವ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ನಡೆದ 100 ದಿನಗಳಲ್ಲಿ ಬಿಡುಗಡೆ ಮಾಡಬೇಕು.

7. ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಧೃಡೀಕರಿಸಲು ಆಯೋಗದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಆಗಬೇಕು. ಆಯೋಗದಲ್ಲೇ ಪ್ರಶ್ನೆಗಳು ತರ್ಜುಮೆ ಆಗಬೇಕು.

8. ಪರೀಕ್ಷೆಯ ಕ್ಯಾಲೆಂಡರ್ ಅನ್ನು ಮುಂಚಿತವಾಗಿಯೇ ಆಯೋಗ ಪ್ರಕಟಿಸಬೇಕು. ಇದರಿಂದ ಪರೀಕ್ಷಾರ್ಥಿಗಳಿಗೆ ಎಷ್ಟು ಸಮಯ ಇದೆ ಮತ್ತು ಅವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ.

9. ಆಯೋಗದಲ್ಲಿರುವ ಭ್ರಷ್ಟರು, ದಲ್ಲಾಳಿಗಳ ಮೇಲೆ ಹಾಗೂ ಪರೀಕ್ಷಾರ್ಥಿಗಳ ಹಿತಾಸಕ್ತಿಯ ವಿರುದ್ಧ ನಿರ್ಧಾರವನ್ನು ಕೈಗೊಳ್ಳುವವರ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅಂತಹವರನ್ನು ಆ ಸ್ಥಾನದಿಂದ ಎತ್ತಂಗಡಿ ಮಾಡಿ ಅಥವಾ ಶಿಸ್ತು ಕ್ರಮ ಜರುಗಿಸಿ.

10. ಪರೀಕ್ಷೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಫೂಲ್‌ ಪ್ರೂಫ್‌  ವ್ಯವಸ್ಥೆ ಕಲ್ಪಿಸಲಿ ಎಂದು ಶಾಸಕ ಯತ್ನಾಳ್‌ ಆಯೋಗಕ್ಕೆ ಹಾಗೂ ಸರಕಾರಕ್ಕೆ ಸಲಹೆಗಳ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next