*ದ.ಕ. 5, ಉಡುಪಿ ಜಿಲ್ಲೆಯ 6 ಶಾಲೆಗಳು ಆಯ್ಕೆ
Advertisement
ಮಂಗಳೂರು/ಉಡುಪಿ: ಸರಕಾರಿ ಶಾಲಾ ಮಕ್ಕಳಿಗೆ ಏಕೀಕೃತ ವ್ಯವಸ್ಥೆಯಡಿ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರವು 176 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ 1ರಿಂದ 12ನೇ ತರಗತಿಯವರೆಗೆ ಒಂದೇ ಆಡಳಿತ ವ್ಯವಸ್ಥೆಯಡಿ ವಿದ್ಯಾರ್ಜನೆ ಸಾಧ್ಯ. ಕೆಲವೆಡೆ ಈಗಾಗಲೇ ಈ ಮಾದರಿ ಶಾಲೆಗಳು ಕಾರ್ಯಾರಂಭಿಸಿವೆ.
ಕೆಪಿಎಸ್‌ಗೆ ದ. ಕನ್ನಡ ಜಿಲ್ಲೆಯ 5 ಪ್ರದೇಶಗಳ ಶಾಲೆ-ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ತಾಲೂಕಿನ ಮುತ್ತೂರು, ಬಂಟ್ವಾಳದ ಕನ್ಯಾನ, ಬೆಳ್ತಂಗಡಿಯ ಪುಂಜಾಲಕಟ್ಟೆ, ಪುತ್ತೂರಿನ ಕೆಯ್ಯೂರು, ಸುಳ್ಯದ ಬೆಳ್ಳಾರೆಯಲ್ಲಿ ಇವು ಕಾರ್ಯ ನಿರ್ವಹಿಸಲಿವೆ ಎಂದು ದ.ಕ. ಡಿಡಿಪಿಐ ವೈ. ಶಿವರಾಮಯ್ಯ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೊಕ್ಕರ್ಣೆ, ಹಿರಿಯಡಕ, ಬೈಂದೂರು ತಾಲೂಕಿನ ವಂಡ್ಸೆ, ಕಾರ್ಕಳ ತಾಲೂಕಿನ ಮುನಿಯಾಲು, ಕುಂದಾಪುರ ತಾಲೂಕಿನ ಕೋಟೇಶ್ವರ ಮತ್ತು ಕಾಪು ತಾಲೂಕಿನ ಪಡುಬಿದ್ರಿ ಸ.ಪ.ಪೂ. ಕಾಲೇಜು ಆಯ್ಕೆಯಾಗಿವೆ.
Related Articles
ಈ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಶೌಚಾಲಯ, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಪೀಠೊಪಕರಣಗಳು, ಆಟದ ಮೈದಾನ ಇರಲಿವೆ.
Advertisement
ಏನಿದು ಕೆಪಿಎಸ್?ಸರಾಸರಿ 500 ಮೀ. ವ್ಯಾಪ್ತಿಯಲ್ಲಿ ಇರುವ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪ.ಪೂ. ಕಾಲೇಜುಗಳನ್ನು ಗುರುತಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಅಭಿವೃದ್ಧಿಗೊಳಿಸುವುದು ಯೋಜನೆ. ಮೂರೂ ಶಿಕ್ಷಣ ಸಂಸ್ಥೆಗಳ ಆಡಳಿತ ಉಸ್ತುವಾರಿಯನ್ನು ಪ.ಪೂ. ಕಾಲೇಜು ಪ್ರಾಂಶುಪಾಲರಿಗೆ ವಹಿಸಿ ಒಂದೇ ವ್ಯವಸ್ಥೆಯಡಿ ತರಲಾಗುತ್ತದೆ. 1ರಿಂದ 5ನೇ ತರಗತಿ ವರೆಗೆ ಕನ್ನಡ ಮಾಧ್ಯಮ, ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಇರುತ್ತದೆ. 57 ಶಾಲೆಗಳಲ್ಲಿ ಪ್ರಕ್ರಿಯೆ ಆರಂಭ
ಮೊದಲ ಹಂತದಲ್ಲಿ ಒಟ್ಟು 57 ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪ.ಪೂ. ಕಾಲೇಜುಗಳನ್ನು ಏಕೀಕೃತಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. 2ನೇ ಹಂತದಲ್ಲಿ 115 ಮತ್ತು 3ನೇ ಹಂತದಲ್ಲಿ 3 ಶಾಲೆಗಳನ್ನು ಈ ವ್ಯವಸ್ಥೆಗೆ ಹೊಂದಿಸಲಾಗುತ್ತದೆ.
ಪ್ರತಿ ಬಾರಿ ಟಿಸಿ ಪಡೆಯಬೇಕಿಲ್ಲ. 7ನೇ ಬಳಿಕ ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಶಾಲೆಗೆ ಹೋಗಬೇಕಾಗುತ್ತದೆ. ಮತ್ತೆ ಪಿಯುಸಿಗೆ ದಾಖಲಾತಿ ಪಡೆಯಬೇಕು. ಆದರೆ ಕೆಪಿಎಸ್‌ನಲ್ಲಿ 1ನೇ ತರಗತಿಗೆ ಸೇರ್ಪಡೆಯಾದರೆ ದ್ವಿತೀಯ ಪಿಯುಸಿ ತನಕ ಒಂದೆಡೆ ವಿದ್ಯಾಭ್ಯಾಸಕ್ಕೆ ಅವಕಾಶವಿರುತ್ತದೆ. ಗರಿಷ್ಠ ಸಂಪನ್ಮೂಲ ಸದ್ಬಳಕೆ
ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಹೊಂದಾಣಿಕೆಯೊಂದಿಗೆ ಸಂಪನ್ಮೂಲ ಗರಿಷ್ಠ ಬಳಕೆಗೂ ಇದು ಸಹಕಾರಿ. ವಿದ್ಯಾರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ದಾಖಲಾದರೆ ಯೋಜನೆ ಸಫಲ. 1 – 5, 6 – 8, 9 – 12 ಹೀಗೆ ತರಗತಿಗಳನ್ನು ವಿಂಗಡಿಸಲಾಗುತ್ತದೆ. ಇಬ್ಬರು ಮುಖ್ಯ ಶಿಕ್ಷಕರು, ಒಬ್ಬರು ಪ್ರಾಂಶುಪಾಲರು ಇರುತ್ತಾರೆ. ಒಟ್ಟಾರೆ ಆಡಳಿತಾಧಿಕಾರಿಯಾಗಿ ಪ್ರಾಂಶುಪಾಲರು ಕಾರ್ಯ ನಿರ್ವಹಿಸಲಿದ್ದಾರೆ.
-ಶೇಷಶಯನ ಕಾರಿಂಜ,
ಡಿಡಿಪಿಐ, ಉಡುಪಿ ಜಿಲ್ಲೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು
ಕೆಪಿಎಸ್ ನಿರ್ಮಿಸಲು ಈಗಾಗಲೇ ಇಲಾಖೆಯಿಂದ ಮಾರ್ಗಸೂಚಿ ನೀಡಲಾಗಿದೆ. ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಇದರದು. ಆಯ್ಕೆಯಾದ ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ನೇಮಕ ಇತ್ಯಾದಿ ನಡೆದು ಹಂತ ಹಂತವಾಗಿ ಆರಂಭಗೊಳ್ಳಲಿವೆ.
-ಎಸ್. ನಾಗೇಂದ್ರ ಮಧ್ಯಸ್ಥ,
ನಿರ್ದೇಶಕರು, ಗುಣಮಟ್ಟ ಖಾತ್ರಿ ಸಮಗ್ರ ಶಿಕ್ಷಣ ಅಭಿಯಾನ, ಬೆಂಗಳೂರು *ಧನ್ಯಾ ಬಾಳೆಕಜೆ/ ಎಸ್.ಜಿ. ನಾಯಕ್