Advertisement

ಸರಕಾರ-ಖಾಸಗಿ ವೈದ್ಯರ ನಡುವೆ “ಪ್ರತಿಷ್ಠೆಯ ಸಂಘರ್ಷ

02:45 PM Nov 05, 2017 | Team Udayavani |

ಬೆಂಗಳೂರು, ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾವಿತ ಕೆಲವು ಅಂಶ ಕುರಿತಂತೆ ಖಾಸಗಿ ವೈದ್ಯರು ಹಾಗೂ ಸರಕಾರದ ನಡುವೆ ಪ್ರತಿಷ್ಠೆಯೇ ಸಂಘರ್ಷಕ್ಕೆ ಕಾರಣವಾಗಿದೆ. ಜನಹಿತದ ಹೆಸರಿನಲ್ಲೇ ಸರಕಾರ, ವೈದ್ಯರು ತಮ್ಮ ನಿಲುವಿನ ಪಟ್ಟು ಸಡಿಲಿಸದ ಕಾರಣ ಜನ
ಹೈರಾಣಾಗುವಂತಾಗಿದೆ.

Advertisement

ಕೆಪಿಎಂಇ ಕಾಯ್ದೆ ತಿದ್ದುಪಡಿ ಮಸೂದೆಯ ಪ್ರಸ್ತಾವಿತ ಕೆಲ ಅಂಶಗಳ ಬಗ್ಗೆ ಆರಂಭದಿಂದಲೂ ಖಾಸಗಿ ಆಸ್ಪತ್ರೆಗಳ,
ವೈದ್ಯರ ವಿರೋಧವಿದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳ ಶೋಷಣೆ ತಪ್ಪಿಸಲು ಕೆಲವು ನಿಯಂತ್ರಣ ಕ್ರಮ ಅಗತ್ಯ ಎಂದು ಸರಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಆದರೆ, ಜಿಲ್ಲಾ ಮಟ್ಟದಲ್ಲಿ ಕುಂದುಕೊರತೆ ಸಮಿತಿ ರಚನೆ ಪ್ರಸ್ತಾವ ಅನಗತ್ಯ ಎಂಬುದು ಖಾಸಗಿ ಆಸ್ಪತ್ರೆಗಳ ವಾದ. ಈ ವ್ಯವಸ್ಥೆ ತಂದರೆ ವೈದ್ಯರು, ಆಸ್ಪತ್ರೆಗಳ ಮುಖ್ಯಸ್ಥರು ಆರೋಗ್ಯ ಸೇವೆ ನೀಡುವುದಕ್ಕಿಂತ ಸಮಿತಿಗಳಿಗೆ ಅಲೆ
ದಾಡಬೇಕಾಗುತ್ತದೆ. 

ಎರಡನೆಯದಾಗಿ, ಚಿಕಿತ್ಸೆ ವೈಫ‌ಲ್ಯ, ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದಲ್ಲಿ ಏರು ಪೇರು ಕಾರಣಕ್ಕೆ ಜೈಲು ಶಿಕ್ಷೆ, ದಂಡ
ವಿಧಿಸುವ ಪ್ರಸ್ತಾವದ ಬಗ್ಗೆಯೂ ತೀವ್ರ ಆಕ್ಷೇಪವಿದ್ದು, ಸದುದ್ದೇಶದಿಂದ ನೀಡಿದ ಚಿಕಿತ್ಸೆ ಫ‌ಲಕಾರಿಯಾಗದಿದ್ದರೆ ವೈದ್ಯರನ್ನು ಜೈಲುಶಿಕ್ಷೆಗೆ ಗುರಿಪಡಿಸುವುದು ಎಷ್ಟು ಸರಿ ಎಂಬುದು ವೈದ್ಯರ ಪ್ರಶ್ನೆ. 

ಇನ್ನು ದರಕ್ಕೆ ಸಂಬಂಧಪಟ್ಟಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ವಿವರ ಪ್ರಕಟಿಸಲು ಸಿದ್ಧವಿರುವುದಾಗಿ ಖಾಸಗಿ
ಆಸ್ಪತ್ರೆಗಳು ಹೇಳಿವೆ. ಆದರೆ ಇಂತಿಷ್ಟೇ ದರ ನಿಗದಿಪಡಿಸಬೇಕು, ಪರಿಷ್ಕರಿಸಬೇಕು ಎಂದು ಆಸ್ಪತ್ರೆ ಹೊರಗಿನವರು ನಿರ್ಧರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಎತ್ತಿವೆ. ಈ ಮೂರು ಅಂಶಗಳು ಸರಕಾರ-ಖಾಸಗಿ ಆಸ್ಪತ್ರೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿವೆ.

Advertisement

ಪ್ರತಿಷ್ಠೆಯಿಂದ ಜನರಿಗೆ ಪರದಾಟ ಈ ವಿಚಾರ ಕುರಿತಂತೆ ಆರಂಭದಿಂದಲೂ ಖಾಸಗಿ ಆಸ್ಪತ್ರೆಗಳು, ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಚರ್ಚೆ ನಡೆಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರಬಹುದು. ಆದರೆ ಸರಕಾರ, ವೈದ್ಯರು ಪ್ರತಿಷ್ಠೆಯನ್ನು ಪಣಕ್ಕಿಟ್ಟಂತೆ ವರ್ತಿಸು ತ್ತಿರುವುದರಿಂದ ಸಾಮಾನ್ಯ ಜನರ ಆರೋಗ್ಯ ಸೇವೆಯಲ್ಲಿ ಏರುಪೇರು ಉಂಟಾಗುತ್ತಿದೆ. 

ಮುಂಚಿತವಾಗಿ ಮಾಹಿತಿ ನೀಡಿದರೂ ಸರಕಾರ ಸೌಜನ್ಯಕ್ಕೂ ಮಾತುಕತೆಗೆ ಆಹ್ವಾನಿಸಿಲ್ಲ ಎಂದು ವೈದ್ಯರು ದೂರಿದರೆ, ಮುಷ್ಕರದ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸಚಿವರು ಹೇಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಆಸ್ಪತ್ರೆಗಳು, ವೈದ್ಯರು ಜೂನ್‌ ನಲ್ಲೇ ಮುಷ್ಕರ ನಡೆಸಿ ಎಚ್ಚರಿಕೆ ನೀಡಿದ್ದರು.

ಕಳೆದ ವಾರವೂ ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ಓಪಿಡಿ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಪ್ರಕಟಿಸಿತ್ತು. ಇಷ್ಟಾದರೂ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮಾಹಿತಿ ಇರಲಿಲ್ಲ ಎಂಬುದು ಎಷ್ಟು ಸರಿ? ಜೂನ್‌ನಲ್ಲೇ ಮುಷ್ಕರ ನಡೆಸಿದಾಗ ಸರಕಾರ ಸ್ಪಂದಿಸಲಿಲ್ಲ. ಇತ್ತೀಚೆಗೆ ಮುಷ್ಕರ ನಡೆಸುವ ವಿಚಾರವನ್ನು ಮುಂಚಿತವಾಗಿ ಪ್ರಚಾರಪಡಿಸಿದ್ದರೂ ಸಚಿವರು ತಮಗೆ ಮಾಹಿತಿ ಇರಲಿಲ್ಲ ಎಂದು ಹೇಳಿರುವುದು ಎಷ್ಟು ಸರಿ. ಪರಿಸ್ಥಿತಿ ನಿಭಾಯಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ರಜೆಯಲ್ಲಿರುವ ವೈದ್ಯರು,
ಸಿಬಂದಿಯನ್ನು ಸೇವೆಗೆ ಕರೆಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಮಾಹಿತಿ ಇಲ್ಲದೆ ಇಷ್ಟೆಲ್ಲ ವ್ಯವಸ್ಥೆ ಮಾಡಿದೆಯೇ. ಸರಕಾರದ ಗಮನ ಸೆಳೆ ಯಲು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದ್ದು, ರವಿವಾರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಫೆಡರೇಷನ್‌ ಆಫ್ ಹೆಲ್ತ್‌ಕೇರ್‌ ಅಸೋಸಿ
ಯೇಷನ್‌ ಪ್ರಧಾನ ಸಂಚಾಲಕ ಡಾ| ನಾಗೇಂದ್ರಸ್ವಾಮಿ ತಿಳಿಸಿದ್ದಾರೆ. 

ಸರಕಾರ ಹೇಳುವುದೇನು?: ತಿದ್ದುಪಡಿ ಮಸೂದೆಯಲ್ಲಿ ರೋಗಿಗಳಿಗೆ ತಮ್ಮ ಹಕ್ಕುಬಾಧ್ಯತೆ ತಿಳಿದಿರಬೇಕು. ಜಿಲ್ಲಾ
ಮಟ್ಟದಲ್ಲಿ ದೂರು ಪರಿಹಾರ ವ್ಯವಸ್ಥೆ ಇರಬೇಕು. ವಸ್ತುನಿಷ್ಠ ಬೆಲೆ ನಿಯಂತ್ರಣ ವ್ಯವಸ್ಥೆ ಜತೆಗೆ ಆಸ್ಪತ್ರೆಗಳ ನಡುವೆ ಶುಲ್ಕದಲ್ಲಿ ವ್ಯತ್ಯಾಸವಿರಬಾರದು ಎಂಬ ಅಂಶಗಳ ಪ್ರಸ್ತಾವವಿದೆ. ಸದನ ಆಯ್ಕೆ ಸಮಿತಿಯು ತಿದ್ದುಪಡಿ ಮಸೂದೆ ಕುರಿತಂತೆ ಏನೇನು ಬದಲಾವಣೆ ತರಬೇಕು ಎಂದು ಸಲಹೆ ನೀಡಿದೆ. ಆ ಸಮಿತಿಗೆ ವರದಿ ಸಲ್ಲಿಕೆಯಾಗಿದ್ದು, ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ತಿದ್ದುಪಡಿ ಮಸೂದೆಯಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂಬ ಅಂಶವಿದೆ. ಅದರಂತೆ ಚಿಕಿತ್ಸಾ ದರಕ್ಕೆ ಸಂಬಂಧಪಟ್ಟಂತೆ ತಜ್ಞರ ಸಮಿತಿ ರಚನೆಯಾಗಿ ಎಲ್ಲರನ್ನು ಸಂಪರ್ಕಿಸಿ ಮಾನದಂಡ ನಿಗದಿಪಡಿಸಲಿದೆ. ಬಳಿಕ ಈ ಬಗ್ಗೆ ಕರಡು ದರ ವಿವರ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ನೀಡಿ ಅಂತಿಮವಾಗಿ ದರ ನಿಗದಿಯಾಗಲಿದೆ. ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ.
– ಅಜಯ್‌ ಸೇಠ್ಠ್…, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

24 ಗಂಟೆ ಓಪಿಡಿ ಸ್ಥಗಿತಗೊಳಿಸಿ ಸಾಂಕೇತಿಕ ಹೋರಾಟ ನಡೆಸಲಾಯಿತು. ಇದಕ್ಕೆ ಸರಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸರಕಾರ ಪೂರ್ವಾಗ್ರಹ ಚಿಂತನೆ ಬಿಟ್ಟು ಆಹ್ವಾನ ನೀಡಿದರೆ ಮಾತುಕತೆಗೆ ಸಿದ್ಧರಿದ್ದೇವೆ. ರವಿವಾರ ಖಾಸಗಿ ಆಸ್ಪತ್ರೆಗಳ ವಿವಿಧ ಸಂಘಟನೆಗಳೊಂದಿಗೆ ಸಂಘದ ಪದಾಧಿಕಾರಿಗಳ ಸಭೆಯಿದ್ದು, ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು.
-ಎಚ್‌.ಎನ್‌. ರವೀಂದ್ರ, ಐಎಂಎ ಕರ್ನಾಟಕ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next