ಮೈಸೂರು: ಮೊಹಮ್ಮದ್ ತಾಹ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಬಿಜಾಪುರ್ ಬುಲ್ಸ್ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ ವಿರುದ್ಧ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
ಮೈಸೂರಿನ ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್ ಒಡೆಯರ್(ಗ್ಲೆàಡ್ಸ್) ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ 20 ಓವರ್‌ಗೆ 8 ವಿಕೆಟ್ ಕಳೆದುಕೊಂಡು 159 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನುಹತ್ತಿದ ಬಿಜಾಪುರ್ ಬುಲ್ಸ್ 18.4 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಬುಲ್ಸ್ ಕೂಟದಲ್ಲಿ ಸತತ 2ನೇ ಗೆಲುವು ದಾಖಲಿಸಿತು.
ಟೈಗರ್ ಎದುರು ತಾಹ ಘರ್ಜನೆ: ಹುಬ್ಬಳ್ಳಿ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ತಾಹ ಬಿಜಾಪುರ್ ಬುಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ 45 ಎಸೆತಗಳಲ್ಲಿ ಆಕರ್ಷಕ 9 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 83 ರನ್ ಬಾರಿಸಿ ಔಟ್ ಆದರು. ಈ ಮೂಲಕ ಕೆಪಿಎಲ್ ಕೂಟದ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಈ ಹಿಂದೆ 2015ರಲ್ಲಿ ಮಾಯಾಂಕ್ ಅಗರ್ವಾಲ್ 7 ಸಿಕ್ಸರ್ ಬಾರಿಸಿದ್ದು, ಗರಿಷ್ಠವಾಗಿತ್ತು. ಉಳಿದಂತೆ ಎಂ.ನಿಧೀಶ್ (29), ಕಿರಣ್(ಅಜೇಯ 20) ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಹುಬ್ಬಳ್ಳಿ ಪರ ಅಭಿಷೇಕ್ ಸಕುಜ 21ಕ್ಕೆ 4 ವಿಕೆಟ್ ಪಡೆದರು.
ಟೈಗರ್ಗೆ ಮಾಯಾಂಕ್, ಸಿದ್ಧಾರ್ಥ್ ಆಸರೆ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಗೆ ಮಾಯಾಂಕ್ ಅಗರ್ವಾಲ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಆಸರೆಯದರು. ಆರಂಭದಲ್ಲಿ ವಿಕೆಟ್ ಕಳೆದುಕೊಂಡ ಹುಬ್ಬಳ್ಳಿ ಆತಂಕದಲ್ಲಿತ್ತು. ಅನುಭವಿ ಆಟಗಾರ ಮಾಯಾಂಕ್ ಅಗರ್ವಾಲ್(33), ಸಿದ್ಧಾರ್ಥ್ (34) ಉತ್ತಮ ಜತೆಯಾಟ ನೀಡಿದರು. ಇದರಿಂದ ಹುಬ್ಬಳ್ಳಿ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು. ಬಿಜಾಪುರ್ ಬುಲ್ಸ್ ಪರ ಎಂ.ಜಿ.ನವೀನ್ ಹಾಗೂ ರೋನಿತ್ ಮೋರೆ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ 20 ಓವರ್‌ಗೆ 159/8 (ಕೆ.ಸಿದ್ಧಾರ್ಥ್ 34, ಮಾಯಾಂಕ್ ಅಗರ್ವಾಲ್ 33, ಎಂ.ಜಿ. ನವೀನ್ 13ಕ್ಕೆ 2), ಬಿಜಾಪುರ್ ಬುಲ್ಸ್ 18.4 ಓವರ್‌ಗೆ 162/6 (ಮೊಹಮ್ಮದ್ ತಾಹ 83, ಎಂ.ನಿಧೀಶ್ 29, ಅಭಿಷೇಕ್ ಸಕುಜ 21ಕ್ಕೆ 4).
– ಸಿ.ದಿನೇಶ್