ಬೆಂಗಳೂರು: ಅಧಿಕಾರ ಮತ್ತು ಹಣದ ದುರಾಸೆಯಿಂದ ಕೆಲವರು ಕರ್ನಾಟಕ ಪ್ರಜ್ಞಾವಂತ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಲಾಗುತ್ತಿದೆ ಎಂದು ವಂದತಿ ಹಬ್ಬಿಸುತ್ತಿದ್ದಾರೆ. ಆದರೆ, ಕರ್ನಾಟಕ ಪ್ರಜ್ಞಾವಂತ ಪಕ್ಷ ಯಾವುದೇ ಪಕ್ಷದೊಂದಿಗೆ ವಿಲೀನಗೊಂಡಿಲ್ಲ ಎಂದು ಕೆಪಿಜೆಪಿ ರಾಜ್ಯಾಧ್ಯಕ್ಷ ಮಹೇಶ್ ಗೌಡ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಕೆಪಿಜೆಪಿಯನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸುವ ಪತ್ರವನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕೊಟ್ಟು ಸಚಿವರಾಗಿರುವ ಆರ್.ಶಂಕರ್ ಅವರಿಗೆ ವಿಘ್ನ ಎದುರಾದಂತಾಗಿದೆ.
ಈಗಾಗಲೇ ಶಂಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಯೂ ಆಗಿರುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೂ, ಕೆಪಿಜೆಪಿ ರಾಜ್ಯಾಧ್ಯಕ್ಷರೇ ವಿಲೀನ ಆಗಿಲ್ಲ ಎಂದು ಹೇಳಿರುವುದರಿಂದ ಶಂಕರ್ ಮತ್ತೆ ಬಿಜೆಪಿಗೆ ಬೇಕಾದರೂ ಹೋಗಲು ಅಡ್ಡಿಯಾಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಮಹೇಶ್‌ಗೌಡ, ರಾಣಿಬೆನ್ನೂರು ಶಾಸಕ ಹಾಗೂ ಸಚಿವ ಆರ್. ಶಂಕರ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತು ಅಧಿಕಾರದ ದುರಾಸೆಗಾಗಿ ನಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲಾಗಿದೆ ಎಂದು ಹೇಳಿರುವುದರಿಂದ ಪಕ್ಷದ ಕಾರ್ಯಕರ್ತರು ಆತಂಕಕ್ಕೆ ಒಳಗಾಗಿದ್ದಾರೆ. ನಮ್ಮ ಪಕ್ಷವು ಸ್ವತಂತ್ರ ಪಕ್ಷವಾಗಿಯೇ ಇದೆ. ಯಾವ ಪಕ್ಷದೊಂದಿಗೂ ವಿಲೀನಗೊಳ್ಳಲಿಲ್ಲ ಎಂದು ಹೇಳಿದರು.
ಶಂಕರ್‌ಗೆ ಅವರ ಶಾಸಕ ಸ್ಥಾನವನ್ನು ವಿಲೀನ ಮಾಡಿಕೊಳ್ಳುವ ಅಧಿಕಾರವಿದೆ. ಆದರೆ, ಪಕ್ಷವನ್ನಲ್ಲ. ಆದ್ದರಿಂದ ಅವರು ಪಕ್ಷವನ್ನು ವಿಲೀನಗೊಳಿಸುವುದಾಗಿ ಪತ್ರ ಬರೆದಿರುವುದು ಅಸಿಂಧು. ನಮ್ಮ ಪಕ್ಷವನ್ನು ಯಾವುದೇ ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.