ಬೆಂಗಳೂರು: ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿರುವ ಕೆ.ಎಸ್. ನಿಸಾರ್ ಅಹಮದ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಂಬನಿ ಮಿಡಿದಿದ್ದಾರೆ. ನಿಸಾರ್ ಅಹಮದ್ ಅವರು ಕನ್ನಡ ಸಾರಸ್ವತ ಲೋಕದ ದಿಗ್ಗಜ. ನಮ್ಮ ನಾಡನ್ನು ನಿತ್ಯೋತ್ಸವ ಗೀತೆ ಮೂಲಕ ಅದ್ಭುತವಾಗಿ ವರ್ಣಿಸಿ ನಿತ್ಯೋತ್ಸವ ಕವಿ ಎಂದು ಖ್ಯಾತಿ ಪಡೆದವರು. ಅವರ ಅಗಲಿಕೆ ಸುದ್ದಿ ಬೇಸರ ತಂದಿದೆ.
ನಿಸಾರ್ ಅಹಮದ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ಮನಸು ಗಾಂಧಿ ಬಜಾರು, ನಿತ್ಯೋತ್ಸವ ಸೇರಿದಂತೆ ಒಟ್ಟು 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 5 ಮಕ್ಕಳ ಸಾಹಿತ್ಯ, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ನೀಡುವ ಮೂಲಕ, ಬೆಣ್ಣೆ ಕದ್ದ ನಮ್ಮ ಕೃಷ್ಣದಂತಹ ಕವನದ ಮೂಲಕ ಅಕ್ಷರ ಲೋಕಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂದು ಡಿಕೆಶಿ ನೆನಪಿಸಿ ಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ನಿಸಾರ್ ಅಹಮದ್ ಅವರ ಅಕ್ಷರ ಸೇವೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಹಿಡಿದು, ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಯವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಇಂತಹ ಮಹಾನ್ ಕವಿಯನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಸಾರಸ್ವತ ಲೋಕ ಬಡವಾಗಿದೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.