ಬೆಂಗಳೂರು: ಇದೊಂದು ಬಿಸಿಲ್ಗುದುರೆ ಬಜೆಟ್, ಕಣ್ಣಿಗೆ ಕಾಣುತ್ತದೆ, ಆದರೆ ಕೈಗೆ ಏನೂ ಸಿಗುವುದಿಲ್ಲ. ಜಾತ್ರೆಯಲ್ಲಿ ಸಿಗುವ ಬಣ್ಣದ ಕನ್ನಡಕದಂತೆ ಅಷ್ಟೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳಿಗೆ ಬಜೆಟ್ ಓದುವಾಗ ಸ್ವರವೇ ಇರಲಿಲ್ಲ ಎಂದು ಲೇವಡಿ ಮಾಡಿದರು.
ಈ ಬಜೆಟ್‌ನಲ್ಲಿ ರೈತರು, ಕಾರ್ಮಿಕರು, ಯುವಕರು, ವರ್ತಕರು ಯಾರಿಗೂ ಲಾಭವಿಲ್ಲ. ಸ್ವಯಂ ಉದ್ಯೋಗ ಯೋಜನೆಗಳೂ ಇಲ್ಲ. ಹೀಗಾಗಿ ಈ ಬಜೆಟ್‌ನಿಂದ ಯಾವ ವರ್ಗಕ್ಕೂ ಪ್ರಯೋಜನ ಆಗುವುದಿಲ್ಲ ಎಂದು ಟೀಕಿಸಿದರು.
ಕಳೆದ ನಾಲ್ಕು ವರ್ಷದಿಂದ ಅಧಿಕಾರದಲ್ಲಿದ್ದಾಗ ಬಿಜೆಪಿ ಸರಕಾರ ಜನರಿಗೆ ಏನೂ ಮಾಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಜಾರಿ ಮಾಡುವಂತಹದ್ದು ಏನೂ ಇಲ್ಲ ಎಂದರು.
ದಕ್ಷಿಣ ಭಾರತದ ಹೆಬ್ಬಾಗಿಲು ತೆರೆಯುತ್ತಿದ್ದೇವೆ ಎಂದು ಅಧಿಕಾರಕ್ಕೆ ಬಂದ ಸರಕಾರದ ಕೊನೆಯ ಬಜೆಟ್ ಇದಾಗಿದೆ. ಇದು ಕೇವಲ ಘೋಷಣೆ, ಭರವಸೆ ಹಾಗೂ ಭಾಷಣಕ್ಕೆ ಸೀಮಿತವಾಗಿರುವ ಬಜೆಟ್. ಸರಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿದ ಭರವಸೆಗಳ ಜಾರಿ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. ಕಳೆದ ಬಜೆಟ್‌ನಲ್ಲಿ ಶೇ. 50ರಷ್ಟು ಅನುದಾನ ಖರ್ಚು ಮಾಡಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ಅವರು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆ ಈಡೇರಿಸಿಲ್ಲ. ಇದು ಜನರ ಕಿವಿಗೆ ಹೂ ಇಡುವ ಪ್ರಯತ್ನ ಎಂದು ದೂರಿದರು.
ಹೀಗಾಗಿ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಈ ಬಜೆಟ್ ಗೊತ್ತು ಗುರಿ ಇಲ್ಲದ ಬಜೆಟ್ ಆಗಿದೆ ಎಂದು ವಾಗ್ಧಾಳಿ ನಡೆಸಿದರು.