Advertisement
ಬಾಗಲಕೋಟೆ: ಕಾಂಗ್ರೆಸ್‌ನ ಅಧಿನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಕ್ಕಾ ಕಾಂಗ್ರೆಸ್ ಪಕ್ಷದ ಪಾರಂಪರಿಕ ಮತಗಳಾಗಿದ್ದ ಲಂಬಾಣಿ ಸಮಾಜವನ್ನು ಪುನಃ ತನ್ನತ್ತ ಸೆಳೆಯಲು ತಯಾರಿ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಉತ್ತರ ಕರ್ನಾಟಕದ ಬಹುತೇಕ ತಾಂಡಾಗಳತ್ತ ಮುಖ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Related Articles
Advertisement
ಉತ್ತರ ಕರ್ನಾಟಕದ ಶಕ್ತಿ ದೇವತೆ ಗದ್ದನಕೇರಿ ತಾಂಡಾದ ದುರ್ಗಾವೇದಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಿವಕುಮಾರ ಅವರನ್ನು ಸನ್ಮಾನಿಸಲಾಯಿತು. ಅಲ್ಲಿಂದ ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾಕ್ಕೆ ತೆರಳಿ ಲಂಬಾಣಿ ಸಮಾಜದ ಪ್ರಮುಖರೊಂದಿಗೆ ಸಂವಾದ ನಡೆಸಿದರು. ರಾತ್ರಿ ನವನಗರದ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿ, ಪಕ್ಷದ ನೂತನ ಕಚೇರಿ ವೀಕ್ಷಣೆ, ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಬಳಿಕ ಡಿಸಿಸಿ ಬ್ಯಾಂಕ್ ಸಭಾ ಭವನದಲ್ಲಿ ಜಿಲ್ಲೆಯ ನೇಕಾರ ಸಮುದಾಯದ ಪುಮುಖರೊಂದಿಗೆ ಸಂವಾದ ನಡೆಸಿದರು.
ಸದಾಶಿವ ಆಯೋಗದ ವರದಿ ಚರ್ಚೆ: ಇದೆಲ್ಲದ ಮಧ್ಯೆ ಶಿವಕುಮಾರ ಅವರು ತಾಂಡಾಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನ್ಯಾ| ಸದಾಶಿವ ಆಯೋಗದ ವರದಿಯೂ ಚರ್ಚೆಗೆ ಬಂತು. ಲಂಬಾಣಿ ಸಮುದಾಯ ಈ ವರದಿ ಜಾರಿಗೆ ಪ್ರಬಲ ವಿರೋಧ ಮಾಡಿದ್ದು, ಡಿ.ಕೆ. ಶಿವಕುಮಾರ ಅವರ ನಿಲುವು ಏನು ಎಂಬ ಕುತೂಹಲವೂ ಸಮಾಜ ಬಾಂಧವರಲ್ಲಿತ್ತು. ಈ ವಿಷಯದಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅವರು, ನಾವು ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಈ ಆಯೋಗ ರಚನೆ ಮಾಡಿದ್ದೇ ನಾವು. ಆದರೆ, ತರಾತುರಿಯಲ್ಲಿ ಆಯೋಗದ ವರದಿ ಜಾರಿಗೊಳಿಸುತ್ತೇವೆ ಎಂದು ಬಿಜೆಪಿಯವರು ಪ್ರಚಾರ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಇಂದಿಗೂ ವರದಿ ಜಾರಿಗೊಂಡಿಲ್ಲ. ಯಾವುದೇ ಸಮಾಜಗಳಿಗೆ ಅನ್ಯಾಯವಾದರೂ ನಾವು ಸಹಿಸುವುದಿಲ್ಲ. ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವುದೇ ನಮ್ಮ ಗುರಿ ಎಂದು ಹೇಳಿಕೊಂಡರು. ಒಟ್ಟಾರೆ, ಜಿಲ್ಲೆಯ ನೇಕಾರರು ಮತ್ತು ಲಂಬಾಣಿ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಡಿ.ಕೆ. ಶಿವಕುಮಾರ ಮೂಲಕ ಸೆಳೆಯಲು ಮುಂದಾಗಿದೆ ಎಂಬ ಚರ್ಚೆ ಕೇಳಿ ಬಂತು.