ಬೆಂಗಳೂರು: ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷದ ಬಿ.ಫಾರಂ ಪಡೆದು ಶಾಸಕರಾಗಿ ಆಯ್ಕೆಯಾಗಿದ್ದು, ಅವರ ರಾಜೀನಾಮೆಯ ಬಗ್ಗೆ ಪಕ್ಷಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಹೀಗಾಗಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಮನವಿ ಮಾಡಿದ್ದಾರೆ.
Advertisement
ಸ್ವೀಕರ್ ಭೇಟಿ ನಂತರ ಮಾತನಾಡಿದ ಈಶ್ವರ್ ಖಂಡ್ರೆ, ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಪಕ್ಷಕ್ಕೆ ಯಾವುದೇ ರಾಜೀನಾಮೆ ಪತ್ರ ನೀಡಿಲ್ಲ. ವಿಜಯನಗರ ಕ್ಷೇತ್ರದಿಂದ ನಮ್ಮ ಪಕ್ಷದಿಂದ ಟಿಕೆಟ್ ಪಡೆದು ಆಯ್ಕೆಯಾಗಿದ್ದರು. ಈಗ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿದ್ದಾರೆ. ನಾವು ಅವರ ವಿರುದ್ಧ ಯಾವುದೇ ದೂರು ಕೊಟ್ಟಿಲ್ಲ. ಆದರೆ, ಆನಂದ್ ಸಿಂಗ್ ಯಾಕೆ ರಾಜೀನಾಮೆ ಸಲ್ಲಿಸಿದ್ದಾರೆಂಬ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು. ಅವರ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್‌ಗೆ ಮನವಿಯನ್ನೂ ನೀಡಿಲ್ಲ. ರಾಜೀನಾಮೆ ಕುರಿತು ಪಕ್ಷದ ನಾಯಕರ ಜೊತೆ ಚರ್ಚಿಸಿ, ರಾಜೀನಾಮೆ ಅಂಗೀಕಾರ ಮಾಡದಂತೆ ಸ್ಪೀಕರ್‌ಗೆ ದೂರು ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.