ರಾಯಚೂರು: ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಶ್ರೀಕರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರದ ಎಲ್ಲ ಘಟಕಗಳಿಗೆ ಭೇಟಿ ಯಂತ್ರಗಳ ಕಾರ್ಯಕ್ಷಮತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಬೂದಿ ಹೊಂಡಗಳಿಗೆ, ಹಾರುಬೂದಿ ವಿಲೇವಾರಿ ತಾಣಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಬೂದಿ ಉತ್ಪಾದನೆ, ಹಾರುಬೂದಿ ವಿಲೇವಾರಿ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚಿಸಿದರು. ನಂತರ ಕೇಂದ್ರದಲ್ಲಿ ಕಾರ್ಮಿಕರ ಯೂನಿಯನ್ ಮುಖಂಡರ ಸಭೆ ನಡೆಸಿದರು. ಈ ವೇಳೆ ಕಾರ್ಮಿಕ ಮುಖಂಡರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಈ ಮುಂಚೆಯಂತೆ ಶನಿವಾರ ಅರ್ಧ ದಿನ ರಜೆ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರಿಗೆ ಕ್ಯಾಂಟೀನ್ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆಯಾಗಬೇಕು. ಲಾಕ್‌ಡೌನ್ ವೇಳೆ ಸಾಕಷ್ಟು ಕಾರ್ಮಿಕರನ್ನು ಸೇವೆಯಿಂದ ಕೈ ಬಿಡಲಾಗಿದೆ. ಇದರಿಂದ ಇರುವ ಸಿಬ್ಬಂದಿಗೆ ಹೆಚ್ಚುವರಿ ಹೊರೆಯಾಗುತ್ತಿದೆ. ಹೀಗಾಗಿ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂಬುದು ಸೇರಿದಂತೆ ಕಾರ್ಮಿಕರ ಕುಂದು-ಕೊರತೆಗಳನ್ನು ಯೂನಿಯನ್ ಮುಖಂಡರು ಪ್ರಸ್ತಾಪಿಸಿದರು.
ಸಮಸ್ಯೆ ಆಲಿಸಿದ ವ್ಯವಸ್ಥಾಪಕ ನಿರ್ದೇಶಕರು, ಈ ಮುಂಚೆಯಂತೆ ಶನಿವಾರ ಅರ್ಧ ದಿನ ರಜೆ ಮುಂದುವರಿಸುವಂತೆ ಸೂಚನೆ ನೀಡಿದರು. ಅದರ ಜತೆಗೆ ಉಳಿದ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸ ಲಾಗುವುದು. ಕಾರ್ಮಿಕರ ಹಿತದೃಷ್ಟಿಯಿಂದ ಶೀಘ್ರದಲ್ಲೇ ಬೇಡಿಕೆಗಳ ಈಡೇರಿಕೆಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಮಿಕರ ಯೂನಿಯನ್ ಅಧ್ಯಕ್ಷ ಬಸವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ವೆಂಕನಗೌಡ, ಉಪಾಧ್ಯಕ್ಷರಾದ ಭರಮರೆಡ್ಡಿ, ಶರಣಪ್ಪ, ಖಜಾಂಚಿ ನಾಗರಾಜ್ ಬಳೆ, ಜಂಟಿ ಕಾರ್ಯದರ್ಶಿ ಸುರೇಶ, ಸಂಘಟನಾ ಕಾರ್ಯದರ್ಶಿ ಸಾಂಬಶಿವ ಸೇರಿದಂತೆ ಕೇಂದ್ರದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.